ಅಂಗನವಾಡಿ ಕಾರ್ಯಕರ್ತೆಯರಿಗೆ ಸೇವಾ ಭದ್ರತೆಗೆ ಒತ್ತಾಯಿಸಿ ಪ್ರತಿಭಟನೆ

ಚಳ್ಳಕೆರೆ:

ಕಳೆದ ಹಲವಾರು ದಶಕಗಳಿಂದ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಐಟಿಯುಸಿ ನೇತೃತ್ವದ ಸಂಘಟನೆಯ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಬಿಸಿಯೂಟ ತಯಾರಿಕ ಸೇವೆಯನ್ನು ಖಾಯಂಗೊಳಿಸುವುದಲ್ಲದೆ, ಸಾಮಾಜಿಕ ಭದ್ರತೆ ಹಾಗೂ ಪಿಂಚಣಿ ಯೋಜನೆ ಅಳವಡಿಸುವಂತೆ ಒತ್ತಾಯಿಸಿ ಇಲ್ಲಿನ ಎಐಟಿಯುಸಿ ನೇತೃತ್ವದಲ್ಲಿ ಪ್ರತಿಭಟಿಸಿ ತಹಶೀಲ್ದಾರ್ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಎಐಟಿಯುಸಿ ಅಧ್ಯಕ್ಷ ಸಿ.ವೈ.ಶಿವರುದ್ರಪ್ಪ ಮಾತನಾಡಿ, ಕೊರೋನಾ ಸಂಕಷ್ಟದಲ್ಲಿ ಗ್ರಾಮೀಣ ಮತ್ತು ನಗರ ಭಾಗಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಮನೆ, ಮನೆಗೂ ತೆರಳಿ ಜನರ ಮನವಲಿಸಿ ಲಸಿಕೆ ಹಾಕಿಸುವ ಮೂಲಕ ಸಾವಿರಾರು ಜನರ ಪ್ರಾಣ ರಕ್ಷಣೆಗೆ ಮುಂದಾಗಿದ್ದಾರೆ. ಕೇವಲ ಕೆಲವೇ ಸಾವಿರ ರೂಗಳ ಗೌರವ ಧನದಲ್ಲಿ ಇವರು ಕಾರ್ಯನಿರ್ವಹಿಸುತ್ತಿದ್ದು ಯಾವುದೇ ರೀತಿಯ ಸೌಲಭ್ಯಗಳು ಇವರಿಗೆ ಇಲ್ಲ. ಕೋವಿಡ್ ಸಂದರ್ಭದಲ್ಲಿ ಮೃತಪಟ್ಟ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿರಿಗೆ ಇದುವರೆಗೂ ಯಾವುದೇ ನೆರವು ನೀಡಿಲ್ಲ, ಅಂಗನವಾಡಿ ಕಾರ್ಯಕತೆಯರು ಹಾಗೂ ಸಹಾಯಕಿಯರ ಸೇವೆಯನ್ನು ಖಾಯಂಗೊಳಿಸಬೇಕು, ಸಂಘದ ವತಿಯಿಂದ ಸುಮಾರು 15 ಬೇಡಿಕೆಗಳನ್ನು ನೀಡಿದ್ದು, ಅವುಗಳೆಲ್ಲವನ್ನೂ ಈಡೇರಿಸಬೇಕು ಎಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ಧಾರ್ ಎನ್.ರಘುಮೂರ್ತಿ, ನಿಮ್ಮ ಎಲ್ಲಾ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತ್ಯೇಕವಾಗಿ ನಾನು ಸರ್ಕಾರಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಶಿಫಾರಸ್ಸು ಮಾಡುತ್ತೇನೆ. ತಾಲ್ಲೂಕಿನ ಕೇವಲ ಕೆಲವೇ ದಿನಗಳಲ್ಲಿ ಕೊರೋನಾ ನಿಯಂತ್ರಣಕ್ಕೆ ಬಂದಿದ್ದು ಅದಕ್ಕೆ ನಿಮ್ಮೆಲ್ಲರ ಸಹಕಾರವೇ ಕಾರಣವೆಂದರು. ಇಂದಿಗೂ ಸಹ ಗ್ರಾಮೀಣ ಭಾಗಗಳಲ್ಲಿ ಆರೋಗ್ಯ ಜಾಗೃತಿ ಹಾಗೂ ಸಾಮಾಜಿಕ ಜಾಗೃತಿ ಮೂಡಿಸಲು ತಾಲ್ಲೂಕು ಆಡಳಿತ ನಿಮ್ಮೆಲ್ಲರ ಸಹಕಾರ ಪಡೆಯುತ್ತಾ ಬಂದಿದೆ. ನಿಮ್ಮನ್ನು ಸೇವೆಯಲ್ಲಿ ಖಾಯಂಗೊಳಿಸುವಂತೆ ವಿಶೇಷ ಮನವಿ ಮಾಡಲಾಗುವುದಾಗಿ ತಿಳಿಸಿದರು.

ದೊಡ್ಡ ಉಳ್ಳಾರ್ತಿ ಕರಿಯಣ್ಣ, ಪಿ.ತಿಪ್ಪೇರುದ್ರಪ್ಪ, ಅಧ್ಯಕ್ಷೆ ಆರ್.ವೇದಾವತಿ, ಕಾರ್ಯದರ್ಶಿ ಎಚ್.ಗೌರಮ್ಮ, ಕಾರ್ಯ ಕಾರ್ಯಕಾರಿ ಸಮಿತಿ ಪ್ರತಿನಿಧಿ ಪಿ.ಪಾರ್ವತಿ, ಮಹಿಳಾ ಸಂಘದ ಪ್ರತಿನಿಧಿಗಳಾದ ಎಚ್.ರೂಪ, ಯಲ್ಲಕ್ಕ, ರತ್ನಮ್ಮ, ತಿಪ್ಪೇಸ್ವಾಮಿ, ಪದ್ಮಕ್ಕ, ಬಿ.ವಿಜಯಲಕ್ಷ್ಮಿ, ಓ.ರೂಪ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಸಿಐಟಿಯುಸಿ ಮನವಿ ಸಲ್ಲಿಕೆ :- ಕಳೆದ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ, ಬಿಸಿಯೂಟ ತಯಾರಕರ ಸೇವೆಯನ್ನು ಖಾಯಂಗೊಳಿಸಬೇಕೆಂದು ಒತ್ತಾಯಿಸಿ ಸಿಐಟಿಯುಸಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಸಂಚಾಲಕ ಟಿ.ತಿಪ್ಪೇಸ್ವಾಮಿ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸೇವೆ ಅಮೂಲ್ಯವಾಗಿದ್ದು ಸರ್ಕಾರ ವಿನಾಕಾರಣ ಇವರ ಸೇವೆಯನ್ನು ಖಾಯಂಗೊಳಿಸಲು ಸಾಧ್ಯವಿಲ್ಲವೆಂದು ಹೇಳುತ್ತಿದೆ. ಆದರೆ, ಇವರ ಸೇವೆಯನ್ನು ಖಾಯಂ ಮಾಡದೇ ಇದ್ದರೆ ಹೋರಾಟವನ್ನು ತೀರ್ವಗೊಳಿಸುವ ಎಚ್ಚರಿಕೆ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link