‘ಕನ್ನಡ ಭಾಷೆಗೆ ದೊಡ್ಡ ಪರಂಪರೆಯಿದೆ’ – ರಂಜಾನ್ ದರ್ಗಾ

 ಚಿತ್ರದುರ್ಗ:

      ಭಾರತದ ಬೇರೆ ಯಾವೊಂದು ಭಾಷೆಗೂ ಇಲ್ಲದಂತ ಪರಂಪರೆ ಕನ್ನಡ ಭಾಷೆಗಿದೆ. ಅದಕ್ಕಾಗಿಯಾದರೂ ಕನ್ನಡ ಭಾಷೆಗೆ ಎಂತಹ ಶಕ್ತಿಯಿದೆ ಎನ್ನುವುದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕೆಂದು ಖ್ಯಾತ ಸಾಹಿತಿ ಧಾರವಾಡದ ಡಾ.ರಮಜಾನ್ ದರ್ಗಾ ತಿಳಿಸಿದರು.

      ತ.ರಾ.ಸು.ರಂಗಮಂದಿರದಲ್ಲಿ ಎರಡು ದಿನಗಳ ಕಾಲ ನಡೆದ ಹದಿನೈದನೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

      ಭಾಷೆ ವಿಚಾರದಲ್ಲಿ ನಮ್ಮ ನಾಡು ತಲ್ಲಣದ ಸ್ಥಿತಿಯಲ್ಲಿದೆ. ಇದು ಕೇವಲ ಕನ್ನಡಕ್ಕಷ್ಟೆ ಅಲ್ಲ. ಭಾರತದ ಎಲ್ಲಾ ಭಾಷೆಗಳು ಈ ಸಮಸ್ಯೆಯನ್ನು ಎದುರಿಸುತ್ತಿವೆ. ಕನ್ನಡ ಭಾಷೆಯ ಶಕ್ತಿ, ಸೌಂದರ್ಯ, ಘನತೆಯನ್ನು ಮರೆಯುತ್ತಿದ್ದೇವೆ. ಸರ್ಕಾರಿ ಶಾಲೆಗಳಲ್ಲಿ ಓದಿದವರು ವಿಜ್ಞಾನಿಗಳು, ದೊಡ್ಡ ದೊಡ್ಡ ಅಧಿಕಾರಿಗಳು, ಜ್ಞಾನಪೀಠ ಪ್ರಶಸ್ತಿ ಪುರುಸ್ಕೃತರಾಗಿದ್ದಾರೆ. ಇದ್ಯಾವುದನ್ನು ಗೌರವಿಸದೆ ಇಂದಿನ ಬಹುಪಾಲು ಪೋಷಕರುಗಳು ತಮ್ಮ ಮಕ್ಕಳು ಖಾಸಗಿ ಶಾಲೆಗೆ ಸೇರಿ ಇಂಗ್ಲಿಷ್ ಮಾತನಾಡಬೇಕೆಂಬ ವ್ಯಾಮೋಹದಲ್ಲಿರುವುದು ನಿಜಕ್ಕೂ ಕನ್ನಡಕ್ಕೆ ಅಗೌರವ ತೋರಿದಂತಾಗುತ್ತದೆ ಎಂದು ವಿಷಾಧಿಸಿದರು.

      ಕನ್ನಡಿಗರಿಗೆ ಅನ್ಯ ಭಾಷೆಗಳ ಬಗ್ಗೆ ವಿಚಿತ್ರವಾದ ಮನೋಭಾವನೆಯಿರುವುದರಿಂದ ಕನ್ನಡ ಭಾಷೆಯನ್ನು ಸರಿಯಾಗಿ ಕಲಿಯುತ್ತಿಲ್ಲ. ಭಾಷೆ ಎಂದರೆ ಸಂಸ್ಕೃತಿ, ಪರಂಪರೆ, ಭಾಷೆ ಎನ್ನುವುದು ಒಂದು ವಾಹನವಿದ್ದಂತೆ. ಹಳೆಗನ್ನಡ ಸಂಪೂರ್ಣವಾಗಿ ಮರೆತು ಹೋಗಿದೆ. ಯಾವ ವಿಶ್ವವಿದ್ಯಾನಿಲಯಗಳು ಕನ್ನಡ ಭಾಷೆ ಉಳಿವಿನ ಕಡೆ ಗಮನಹರಿಸುತ್ತಿಲ್ಲ. ಪರಂಪರೆ ಎಂದರೆ ಏನು? ಅದರಿಂದ ಏನು ಪಡೆದುಕೊಂಡಿದ್ದೇವೆ. ಯಾವುದನ್ನು ಕಳೆದುಕೊಂಡಿದ್ದೇವೆ ಎನ್ನುವುದನ್ನು ಚಿಂತಿಸಬೇಕಿದೆ ಎಂದರು.

      ಒಂದು ಧರ್ಮ ಮತ್ತೊಂದು ಧರ್ಮವನ್ನು ಗೌರವಿಸುವುದೇ ಸಂಸ್ಕೃತಿ. ಕೋಮುವಾದ, ಜಾತಿ, ಧರ್ಮ ಘರ್ಷಣೆಯಲ್ಲಿ ದೇಶ ಮುಳುಗಿದೆ. ಹನ್ನೆರಡನೇ ಶತಮಾನದ ಕ್ರಾಂತಿಕಾರಿ ಬಸವಣ್ಣನವರ ಸಮಾನತೆ ಇನ್ನು ಕನಸಾಗಿಯೇ ಉಳಿದಿದೆ. ವಚನ ಚಳುವಳಿ, ಶರಣರ ಹೋರಾಟದಲ್ಲಿ ಇತಿಹಾಸವಿದೆ. ಪಂಚೇಂದ್ರ್ರಿಯಗಳ ಮೇಲೆ ಯಾರು ವಿಜಯ ಸಾಧಿಸುತ್ತಾರೋ ಅವರು ನಿಜವಾದ ಸ್ವತಂತ್ರರು ಎಂದರು.

      ಸಮ್ಮೇಳನಾಧ್ಯಕ್ಷ ಡಾ.ಮೀರಾಸಾಬಿಹಳ್ಳಿ ಶಿವಣ್ಣ ಸಮಾರೋಪ ನುಡಿಗಳನ್ನಾಡುತ್ತ ಎರಡು ದಿನಗಳ ಕಾಲ ಚಿತ್ರದುರ್ಗದಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿಯೊಬ್ಬರು ಬಂದಿದ್ದನ್ನು ಬಿಟ್ಟರೆ ಬೇರೆ ಯಾವ ರಾಜಕಾರಣಿಯೂ ಇತ್ತ ತಲೆಹಾಕಲಿಲ್ಲ. ರಾಜಕಾರಣಿಗಳಿಗೆ ಸಾಹಿತ್ಯ ಎಂದರೆ ನಿರ್ಲಕ್ಷೆ. ಇದು ನಿಜಕ್ಕೂ ಸಾಂಸ್ಕೃತಿಕ ನಿರ್ಲಕ್ಷೆ. ನಮ್ಮ ನೆಲದ ಸಂಸ್ಕೃತಿಯನ್ನು ಭಾಷೆಯನ್ನು ನಿರ್ಲಕ್ಷಿಸಿದರೆ ಸಂಸ್ಕೃತಿ ಸರ್ವನಾಶವಾಗುತ್ತದೆ. ಸಮಾರೋಪ ಸಮಾರಂಭಕ್ಕೆ ರಾಜಕಾರಣಿಗಳು ಬರಬೇಕಾದದ್ದು, ಅವರ ನೈತಿಕ ಜವಾಬ್ದಾರಿ ಎಂದು ಎಚ್ಚರಿಸಿದರು.

      ಬರಪೀಡಿತ ಚಿತ್ರದುರ್ಗ ಜಿಲ್ಲೆಯಲ್ಲಿ ಸಿರಿಧಾನ್ಯ, ದಾಳಿಂಬೆ, ತೊಗರಿ ಬೆಳೆಯಲು ಸರ್ಕಾರ ರೈತರಿಗೆ ಅನುಕೂಲ ಮಾಡಿಕೊಡಬೇಕು. ಗಣಿಗಾರಿಕೆ ಹೆಸರಿನಲ್ಲಿ ಪ್ರಕೃತಿ ನಾಶವಾಗುತ್ತಿದೆ. ನಾಶವಾಗಿರುವ ಪ್ರದೇಶಗಳನ್ನು ಅಭಿವೃದ್ದಿಪಡಿಸಬೇಕು. ನದಿಯ ಒಡಲಲ್ಲಿ ಮರಳು ಎತ್ತುತ್ತಿರುವುದು ನಿತ್ಯ ನಿರಂತರವಾಗಿ ನಡೆಯುತ್ತಿದೆ. ಇದರಿಂದ ನೀರಿಲ್ಲದೆ ನದಿ ಒಣಗಿದೆ. ಮರಳು ಮಾಫಿಯ ನಿಯಂತ್ರಿಸುವುದು ಸರ್ಕಾರದ ಕೆಲಸವಾಗಬೇಕು. ಐತಿಹಾಸಿಕ ಚಿತ್ರದುರ್ಗ ಜಿಲ್ಲೆ ಅನೇಕ ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿದೆ. ಆದರೂ ಇಲ್ಲಿಗೆ ಪ್ರವಾಸಿಗರನ್ನು ಆಕರ್ಷಿಸಲು ಆಗುತ್ತಿಲ್ಲ. ಚಿತ್ರದುರ್ಗದ ಕೋಟೆ, ಮಯೂರವರ್ಮನ ಶಾಸನ, ಚಂದ್ರವಳ್ಳಿ ಕೆರೆಯಿದೆ. ಮರಡಿಹಳ್ಳಿಯಲ್ಲಿ ಪಿಲ್ಲೋಲಾವ ಇದೆ. ಇಷ್ಟೆಲ್ಲವನ್ನು ಬೆಳಕಿಗೆ ತರುವ ಕೆಲಸವಾಗಬೇಕು. ಚಿತ್ರದುರ್ಗ ಬರಪೀಡಿತ ಪ್ರದೇಶವಾಗಿರುವುದರಿಂದ ಇಲ್ಲಿನ ಜನ ಕೆಲಸ ಹುಡುಕಿಕೊಂಡು ಹೋಗುವುದನ್ನು ತಡೆಯಬೇಕು ಎಂದು ಸಮ್ಮೇಳನದ ಮೂಲಕ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

      ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಬಿ.ಸಿದ್ದಣ್ಣ, ಜಾನಪದ ಮತ್ತು ಇತಿಹಾಸ ಸಂಶೋಧಕ ಬಾಗೂರು ನಾಗರಾಜಪ್ಪ ಮಾತನಾಡಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕೋಶಾಧ್ಯಕ್ಷ ಎಂ.ಗೋವಿಂದಪ್ಪ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಆರ್.ದಾಸೇಗೌಡ, ಸದಸ್ಯೆ ಮೋಕ್ಷರುದ್ರಸ್ವಾಮಿ ಸಮಾರೋಪ ಸಮಾರಂಭದಲ್ಲಿ ಹಾಜರಿದ್ದರು.

       ಪರಶುರಾಂ ಗೊರಪ್ಪ, ಬಾಗೂರು ನಾಗರಾಜಪ್ಪ, ಇನಾಯತ್, ರಾಘವೇಂದ್ರಾಚಾರ್, ಕೆ.ಬಿ.ಕೃಷ್ಣಪ್ಪ, ಜಾನಪದ ಪರಿಚಾರಕ ಮಹಲಿಂಗಪ್ಪ ಇವರುಗಳನ್ನು ಸನ್ಮಾನಿಸಲಾಯಿತು. ಕೆಳಗಳಹಟ್ಟಿ ಹೆಚ್.ಗೋವಿಂದರಾಜು ನಿರೂಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link