ಮುಂಬೈ:
2001ರಲ್ಲಿ ಮುಂಬೈನಲ್ಲಿ ನಡೆದಿದ್ದ ಜಯ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ಛೋಟಾ ರಾಜನ್‌ಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಬುಧವಾರ ಅಮಾನತುಗೊಳಿಸಿದೆ. ಅಲ್ಲದೆ ಪ್ರಕರಣದಲ್ಲಿ ಆತನಿಗೆ ಬೇಲ್ ನೀಡಿದೆ. ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೇರೆ ಮತ್ತು ಪೃಥ್ವಿರಾಜ್ ಚವಾಣ್ ಅವರ ವಿಭಾಗೀಯ ಪೀಠವು ಜಾಮೀನಿಗಾಗಿ 1 ಲಕ್ಷ ರೂ.ಗಳ ಬಾಂಡ್ ಸಲ್ಲಿಸುವಂತೆ ಛೋಟಾ ರಾಜನ್ ಗೆ ನಿರ್ದೇಶನ ನೀಡಿತು. ಆದಾಗ್ಯೂ, ಇತರ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಛೋಟಾ ರಾಜನ್ ಜೈಲಿನಲ್ಲಿಯೇ ಉಳಿಯಲಿದ್ದಾರೆ.
ಮೇ ತಿಂಗಳಲ್ಲಿ ವಿಶೇಷ ನ್ಯಾಯಾಲಯವು ಹೋಟೆಲ್ ಉದ್ಯಮಿಯ ಕೊಲೆ ಪ್ರಕರಣದಲ್ಲಿ ಛೋಟಾ ರಾಜನ್‌ನನ್ನು ದೋಷಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಶಿಕ್ಷೆಯ ವಿರುದ್ಧ ರಾಜನ್ ಬಾಂಬೆ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
2001ರ ಮೇ 4ರಂದು ಮುಂಬೈನ ಗಾಮ್ದೇವಿಯಲ್ಲಿರುವ ಗೋಲ್ಡನ್ ಕ್ರೌನ್ ಹೋಟೆಲ್ ಮಾಲೀಕ ಜಯ ಶೆಟ್ಟಿ ಅವರನ್ನು ಛೋಟಾ ರಾಜನ್ ಗ್ಯಾಂಗ್‌ನ ಇಬ್ಬರು ಸದಸ್ಯರು ಗುಂಡಿಕ್ಕಿ ಕೊಂದಿದ್ದರು. ಛೋಟಾ ರಾಜನ್ ಗ್ಯಾಂಗ್ ನ ಸದಸ್ಯ ಹೇಮಂತ್ ಪೂಜಾರಿಯಿಂದ ಜಯಾ ಶೆಟ್ಟಿಗೆ ಬೆದರಿಕೆ ಕರೆಗಳು ಬಂದಿದ್ದು, ಹಣ ಪಾವತಿಸಲು ವಿಫಲವಾದ ಕಾರಣ ಅವರನ್ನು ಹತ್ಯೆ ಮಾಡಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಹಿರಿಯ ಕ್ರೈಂ ವರದಿಗಾರ ಜೆ ಡೇ ಹತ್ಯೆ ಪ್ರಕರಣದಲ್ಲಿ ಈಗಾಗಲೇ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ರಾಜನ್ ಪ್ರಸ್ತುತ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾನೆ.