ಬೆಂಗಳೂರು:
ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದ ಮತಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ಬೆಂಗಳೂರು ನಗರದ ಎಪಿಎಂಎಂ ನ್ಯಾಯಾಲಯಕ್ಕೆ ನಿನ್ನೆ ಶುಕ್ರವಾರ ದೋಷರೋಪಟ್ಟಿ ಸಲ್ಲಿಸಿದೆ. ಪ್ರಭಾವಿ ನಾಯಕನ ಪಾತ್ರ ಸಿಐಡಿ ತನಿಖೆಯಲ್ಲಿ ಸಾಬೀತಾಗಿದೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿಯ ಮಾಜಿ ಶಾಸಕ ಸುಭಾಷ್ ಗುತ್ತೇದಾರ್, ಅವರ ಪುತ್ರ ಹರ್ಷಾನಂದ ಸೇರಿದಂತೆ ಒಟ್ಟು 7 ಜನರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. 22 ಸಾವಿರ ಪುಟಗಳ ದೋಷರೋಪ ಪಟ್ಟಿಯಲ್ಲಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್, ಪುತ್ರ ಹರ್ಷಾನಂದ ಸೇರಿ 7 ಮಂದಿಯನ್ನು ಆರೋಪಿಗಳು ಎಂದು ಹೆಸರಿಸಲಾಗಿದೆ.
2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಡೆದಿದೆ ಎನ್ನಲಾಗಿದ್ದ ಮತಗಳ್ಳತನ ಪ್ರಕರಣದಲ್ಲಿ ಸುಭಾಷ್ ಗುತ್ತೇದಾರ್ ಪಾತ್ರವಿದೆ ಎಂಬುದು ತನಿಖೆಯಿಂದ ದೃಢಪಟ್ಟಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ. ರಾಜ್ಯ ಸರ್ಕಾರದ ಆದೇಶದಂತೆ ಸಿಐಡಿ ಎಡಿಜಿಪಿ ಬಿಕೆ ಸಿಂಗ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (SIT) ರಚಿಸಲಾಗಿತ್ತು. ತನಿಖೆ ಪೂರ್ಣಗೊಳಿಸಿದ ಬಳಿಕ ಸುಮಾರು 22 ಸಾವಿರ ಪುಟಗಳ ಚಾರ್ಜ್‌ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
5,994 ಮತಗಳನ್ನು ಅಳಿಸಿ ಹಾಕಲು ಕಾಲ್ ಸೆಂಟರ್ ಬಳಕೆ ಮಾಡಲಾಗಿದೆ. ಮತ ಕಳವಿಗೆ ಮಾಜಿ ಶಾಸಕರು ಹಣ ಕೂಡ ಪಾವತಿ ಮಾಡಿದ್ದಾರೆ. ದಾಳಿ ವೇಳೆ ಸಿಕ್ಕಿದ ಡಿಜಿಟಲ್ ಸಾಕ್ಷ್ಯದಿಂದ ಕೃತ್ಯ ಸಾಬೀತಾಗಿದೆ. ಈ ಕೃತ್ಯದಲ್ಲಿ ತಂದೆ-ಮಗ ಪ್ರಮುಖ ಆರೋಪಿಗಳು ಎಂದು ಉಲ್ಲೇಖಿಸಲಾಗಿದೆ.
ನಾಳೆ ದೆಹಲಿಯಲ್ಲಿ ಕಾಂಗ್ರೆಸ್ ವೋಟ್ ಚೋರಿ ಪ್ರತಿಭಟನೆ ಆಯೋಜಿಸಿದೆ. ಈ ಪ್ರತಿಭಟನೆಗೆ ಮುನ್ನ ಎಸ್‌ಐಟಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದು ಕಾಂಗ್ರೆಸ್ ಗೆ ದೊಡ್ಡ ಅಸ್ತ್ರ ಸಿಕ್ಕಿದಂತಾಗಿದೆ.








