ಉತ್ತರಾಖಂಡದ ಬೆನ್ನಲ್ಲೇ ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ

ಶಿಮ್ಲಾ:

    ಹಿಮಾಚಲ ಪ್ರದೇಶದ  ಕುಲ್ಲು  ಜಿಲ್ಲೆಯಲ್ಲಿ ಶುಕ್ರವಾರ ಸಂಜೆ ಮೇಘಸ್ಫೋಟ  ಉಂಟಾಗಿದ್ದು, ಪರಿಸ್ಥಿತಿ ಸಾಮಾನ್ಯವಾಗಿದೆ. ಇಲ್ಲಿಯವರೆಗೆ ಯಾವುದೇ ಜೀವಹಾನಿ ಸಂಭವಿಸಿರುವ ಬಗ್ಗೆ ವರದಿ ಬಂದಿಲ್ಲ. ಶುಕ್ರವಾರ ಸಂಜೆ 5.35ರ ಸುಮಾರಿಗೆ ಸಬ್ ತಹಸಿಲ್ ಜಾರಿಯ ಶರೋದ್ ನಲ್ಲಾದಲ್ಲಿ ಮೇಘಸ್ಫೋಟ ಉಂಟಾಗಿತ್ತು. ಇದರಿಂದ ಶರೋದ್ ನಲಾದ ಪಕ್ಕದಲ್ಲಿರುವ ಬರೋಗಿ ನಲಾದ ನೀರಿನ ಮಟ್ಟ ಹೆಚ್ಚಾಗಿದೆ ಎಂದು ಕುಲ್ಲು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ  ತಿಳಿಸಿದೆ.

   ಮೇಘಸ್ಫೋಟದ ಬಳಿಕ ಪರಿಸ್ಥಿತಿ ಪ್ರಸ್ತುತ ಸಾಮಾನ್ಯವಾಗಿದೆ. ಮೊಹಾಲ್‌ನಿಂದ ಬಂದಿರುವ ಮಾಹಿತಿಯ ಪ್ರಕಾರ ಶುಕ್ರವಾರ ಕುಲ್ಲುವಿನ ಶರೋದ್ ನಾಲಾ ಪ್ರದೇಶದಲ್ಲಿ ಮೇಘಸ್ಫೋಟದ ಉಂಟಾಗಿದೆ ಎಂದು ಕೇಂದ್ರ ಜಲ ಆಯೋಗ ಹೇಳಿದೆ.

   ಜಾರಿ ಅಗ್ನಿಶಾಮಕ ಠಾಣೆ ಸಹಾಯಕ ಎಂಜಿನಿಯರ್ ಹೇಮರಾಜ್, ಲೋಕೋಪಯೋಗಿ ಇಲಾಖೆಯ ಮಣಿಕರಣ್ ಮತ್ತು ಕುಲ್ಲು ಡಿಪಿಸಿಆರ್ ಅವರಿಂದ ಸಿಕ್ಕಿರುವ ಮಾಹಿತಿಯ ಪ್ರಕಾರ ಶರೋದ್ ನಾಲಾದ ಪಕ್ಕದಲ್ಲಿರುವ ಬರೋಗಿ ನಾಲಾದಲ್ಲಿ ಮಳೆಯಿಂದಾಗಿ ನೀರಿನ ಮಟ್ಟ ಹೆಚ್ಚಾಗಿದೆ. ಪರಿಸ್ಥಿತಿ ಪ್ರಸ್ತುತ ಸಾಮಾನ್ಯವಾಗಿದೆ ಎಂದು ಆಯೋಗ ಹೇಳಿದೆ.

   ಹಿಮಾಚಲ ಪ್ರದೇಶದ ಹಲವು ಭಾಗಗಳಲ್ಲಿ ಭಾರಿ ಮಳೆ ಮತ್ತು ಅದರಿಂದ ಉಂಟಾದ ಹಠಾತ್ ಪ್ರವಾಹದಿಂದಾಗಿ ಮೇಘಸ್ಫೋಟ ಸಂಭವಿಸಿದೆ. ಈಗಾಗಲೇ 357 ರಸ್ತೆಗಳು ಮುಚ್ಚಿಹೋಗಿದ್ದು, 599 ವಿದ್ಯುತ್ ವಿತರಣಾ ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿಯಾಗಿವೆ. ಬೆಟ್ಟದ ಪ್ರದೇಶಗಳ 177 ನೀರು ಸರಬರಾಜು ಯೋಜನೆಗಳಿಗೆ ಅಡ್ಡಿಯಾಗಿದೆ.

   ಈವರೆಗೆ ಮಳೆ ಸಂಬಂಧಿತ ಅನಾಹುತಗಳಿಂದ ಹಿಮಾಚಲ ಪ್ರದೇಶದಲ್ಲಿ 208 ಮಂದಿ ಸಾವನ್ನಪ್ಪಿದ್ದು, ಇದರಲ್ಲಿ 112 ಮಂದಿ ಭೂಕುಸಿತ, ಪ್ರವಾಹ ಮತ್ತು ಮನೆ ಕುಸಿತದಂತಹ ಘಟನೆಗಳಿಂದ ಮೃತಪಟ್ಟಿದ್ದಾರೆ. 90ಕ್ಕೂ ಹೆಚ್ಚು ಜನರು ಬೆಟ್ಟದ ಭಾಗಗಳಲ್ಲಿ ರಸ್ತೆ ಅಪಘಾತಗಳಿಂದ ಮೃತಪಟ್ಟಿದ್ದಾರೆ.

   ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ಮೇಘಸ್ಫೋಟದ ಬಳಿಕ ಐದು ಜನರು ಸಾವನ್ನಪ್ಪಿದ್ದು ಅನೇಕರು ನಾಪತ್ತೆಯಾದ ಒಂದು ವಾರದ ಬಳಿಕ ಕುಲ್ಲುವಿನಲ್ಲಿ ಮೇಘಸ್ಫೋಟ ಉಂಟಾಗಿದೆ. ಖೀರ್ ಗಢ್ ಪ್ರದೇಶದಲ್ಲಿ ಮೇಘಸ್ಪೋಟದಿಂದ ಕಟ್ಟಡ, ಅಂಗಡಿ ಮತ್ತು ರಸ್ತೆಗಳು ಕೊಚ್ಚಿಹೋಗಿದ್ದು, 100ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. 

   ಹಿಮಾಚಲ ಪ್ರದೇಶದ ಮೂರು ಜಿಲ್ಲೆಗಳಲ್ಲಿ ಆಗಸ್ಟ್ 11 ಮತ್ತು 12ರಂದು ಅರೇಂಜ್ ಅಲರ್ಟ್ ಇತರ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಮುಂದಿನ ಕೆಲವು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ.

Recent Articles

spot_img

Related Stories

Share via
Copy link