ಬೆಂಗಳೂರು:
ರಾಜ್ಯದ ಎಲ್ಲಾ ಗ್ರಂಥಾಲಯ ಮೇಲ್ವಿಚಾರಕರನ್ನು ಕನಿಷ್ಠ ವೇತನಕ್ಕೆ ಒಳಪಡಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸೋಮವಾರ ಆಯೋಜಿಸಿದ್ದ ಗ್ರಂಥಾಲಯ ಮೇಲ್ವಿಚಾರಕರ ರಾಜ್ಯ ಸಮ್ಮೇಳನ ಉದ್ಘಾಟಿಸಿ ಹಾಗೂ 6,599 ಹೊಸ ಗ್ರಾಮ ಗ್ರಂಥಾಲಯ– ‘ಅರಿವು ಕೇಂದ್ರ’ಗಳಿಗೆ ಸಾಂಕೇತಿಕವಾಗಿ ಚಾಲನೆ ನೀಡಿ ಮುಖ್ಯಮಂತ್ರಿಗಳು ಮಾತನಾಡಿದರು.
ಪುಸ್ತಕಗಳು ಒಳ್ಳೆಯ ಸ್ನೇಹಿತನಿದ್ದಂತೆ. ಗ್ರಂಥಾಲಯಗಳಿಗೆ ಹೋಗುವುದು ಅತ್ಯಂತ ಉತ್ತಮ ಹವ್ಯಾಸ. ಗ್ರಾಮಗಳಲ್ಲಿ 6,599 ಗ್ರಾಮಮಟ್ಟದ ಗ್ರಂಥಾಲಯಗಳನ್ಮು ತೆರೆಯುವ ನಿರ್ಧಾರ ಮಾಡಿ ಘೋಷಣೆ ಮಾಡಿದ್ದೇವೆ. ನಮ್ಮ ಸರ್ಕಾರ ಸಚಿವ ಪ್ರಿಯಾಂಕ ಖರ್ಗೆ ಅವರ ನೇತೃತ್ವದಲ್ಲಿ ಎಲ್ಲಾ ಗ್ರಂಥಾಲಯ ಮೇಲ್ವಿಚಾರಕರನ್ನು ಕನಿಷ್ಠ ವೇತನಕ್ಕೆ ಒಳಪಡಿಸಲು ನಿರ್ಧರಿಸಲಾಗಿದೆ ಎಂದು ಘೋಷಿಸಿದರು.
ಜ್ಞಾನ ವಿಕಾಸ ಕೇವಲ ಶಾಲಾ ಶಿಕ್ಷಣದಿಂದ ಮಾತ್ರ ಸಾಧ್ಯವಿಲ್ಲ. ಶಾಲೆಗಳ ಹೊರಗೂ ಕಲಿಕೆ ಅಗತ್ಯ. ಸಾವಿರಾರು ವರ್ಷಗಳ ಕಾಲ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದ ಸಮುದಾಯಗಳಿಗೆ ಅಂಬೇಡ್ಕರ್ ಅವರ ಸಂವಿಧಾನದ ಕಾರಣದಿಂದ ಶಿಕ್ಷಣ ಪಡೆಯುವ ಅವಕಾಶ ಸಿಕ್ಕಿದೆ. ನಾವು 78ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ನೂರಕ್ಕೆ ನೂರು ಸಾಕ್ಷರತೆ ಸಾಧ್ಯವಾಗಿಲ್ಲ. ಇದನ್ನು ಸಾಧಿಸುವ ದಿಕ್ಕಿನಲ್ಲಿ ನಾವು ಶ್ರಮಿಸಬೇಕಿದೆ ಎಂದು ಹೇಳಿದರು.
ಪ್ರತಿಯೊಬ್ಬ ಯುವಕ, ಯುವತಿಯರು ಹಾಗೂ ಮಕ್ಕಳು ಗ್ರಂಥಾಲಯಗಳ ಸದುಪಯೋಗ ಪಡಿಸಿಕೊಂಡು ಜ್ಞಾನಾರ್ಜನೆ ಮಾಡಬೇಕು. ಇದೇ ಅಂಬೇಡ್ಕರ್ ಅವರ ಕನಸಾಗಿತ್ತು. ಜ್ಞಾನ ಪಡೆಯುವುದು ಎಂದರೆ ಮನುಷ್ಯರಾಗಿ ಬಾಳುವುದು. ಎಲ್ಲಾ ಮಕ್ಕಳೂ ವಿಶ್ವ ಮಾನವರಾಗಿ ಹುಟ್ಟುತ್ತಾರೆ. ಸಾಮಾಜಿಕ ಪ್ರಭಾವದಿಂದ ಬೆಳೆಯುತ್ತಾ ಬೆಳೆಯುತ್ತಾ ಅಲ್ಪ ಮಾನವರಾಗುತ್ತಾರೆ ಎಂದು ಕುವೆಂಪು ಅವರು ಹೇಳಿದ್ದಾರೆ. ಆದ್ದರಿಂದ ಬೆಳೆಯುತ್ತಲೂ ನಾವು ವಿಶ್ವ ಮಾನವರಾಗಿ ಉಳಿಯುವಂತಹ ಪ್ರಯತ್ನ ಮಾಡಬೇಕು. ಆಗ ಮಾತ್ರ ಮಾನವನ ಹುಟ್ಟು ಸಾರ್ಥಕ ಆಗುತ್ತದೆ ಎಂದು ತಿಳಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ 263.96 ಕೋಟಿ ಅನುದಾನದಲ್ಲಿ ನೂತನ ಗ್ರಂಥಾಲಯಗಳನ್ನು ಸ್ಥಾಪಿಸಲಾಗುತ್ತಿದ್ದು, ಪ್ರತಿ ಹೊಸ ಗ್ರಂಥಾಲಯಕ್ಕೆ ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾದಿಂದ 2 ಲಕ್ಷ ರೂಪಾಯಿ ಮೌಲ್ಯದ ಪುಸ್ತಕಗಳನ್ನು ಖರೀದಿಸಲಾಗಿದೆ. ಈ ಗ್ರಂಥಾಲಯಗಳಲ್ಲಿ ಪೀಠೋಪಕರಣಗಳು ಮತ್ತು ಡಿಜಿಟಲ್ ಉಪಕರಣಗಳನ್ನು ಸಹ ಒದಗಿಸಲಾಗುವುದು. ಅಜೀಂ ಪ್ರೇಮ್‌ಜಿ ಫೌಂಡೇಶನ್ ಈ ಗ್ರಂಥಾಲಯಗಳಿಗೆ ಮಕ್ಕಳ ಪುಸ್ತಕಗಳನ್ನು ನೀಡುತ್ತಿದೆ ಎಂದು ಇದೇ ವೇಳೆ ಹೇಳಿದರು.
ಆರ್‌ಡಿಪಿಆರ್ ಮತ್ತು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ‘ಅರಿವು ಕೇಂದ್ರಗಳು ಪ್ರತಿಯೊಬ್ಬ ಸಮುದಾಯದ ಸದಸ್ಯರನ್ನು ಒಳಗೊಂಡಿದ್ದು, ಮಕ್ಕಳ ಬೌದ್ಧಿಕ ಬೆಳವಣಿಗೆ, ಸಾಕ್ಷರತೆಯನ್ನು ಸುಧಾರಿಸುತ್ತದೆ, ಶಾಲೆ ಬಿಟ್ಟ ಮಕ್ಕಳನ್ನು ಮುಖ್ಯವಾಹಿನಿಗೆ ತರುವುದು ಮತ್ತು ಜಾಗೃತಿ ಮೂಡಿಸುವಂತಹ ಪ್ರಮುಖ ಕಾರ್ಯವನ್ನು ಮಾಡುತ್ತದೆ ಎಂದು ಹೇಳಿದರು.
ಓದುವ ಬೆಳಕು ಅಭಿಯಾನದ ಅಡಿಯಲ್ಲಿ, 6 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಗ್ರಂಥಾಲಯದ ಸದಸ್ಯತ್ವವನ್ನು ಒದಗಿಸಲಾಗುತ್ತದೆ, ಅವರಿಗೆ ಮನೆಯಲ್ಲಿ ಓದಲು ಪುಸ್ತಕಗಳನ್ನು ಎರವಲು ಪಡೆಯಲು ಅನುವು ಮಾಡಿಕೊಡಲಾಗುತ್ತದೆ. ಈಗಾಗಲೇ ರಾಜ್ಯಾದ್ಯಂತ ಗ್ರಾಮ ಪಂಚಾಯಿತಿ ಗ್ರಂಥಾಲಯಗಳಲ್ಲಿ ಒಟ್ಟು 48,57,351 ಮಕ್ಕಳನ್ನು ನೋಂದಾಯಿಸಲಾಗಿದೆ ಎಂದು ಮಾಹಿತಿ ನೀಡಿದರು