ಬೆಂಗಳೂರು :
ಕೋವಿಡ್‍ನಿಂದ ಮಕ್ಕಳಿಗೆ ಇವತ್ತು ಸ್ವಾತಂತ್ರ್ಯ ಸಿಕ್ಕಿದೆ. ಕೋವಿಡ್ ಕಡಿಮೆಯಾಗಬೇಕು, ಶಾಲಾರಂಭ ಸಕ್ಸಸ್ ಆಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು 9 ರಿಂದ 12ನೆ ತರಗತಿ ಶಾಲಾ ಕಾಲೇಜುಗಳ ಭೌತಿಕ ತರಗತಿಗಳು ಪುನರಾರಂಭವಾದ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಒಂದೂವರೆ ವರ್ಷದಿಂದ ಮಕ್ಕಳು ಆನ್‍ಲೈನ್ ತರಗತಿ ಮೂಲಕ ಪಾಠ-ಪ್ರವಚನ ಕೇಳುತ್ತಿದ್ದರಿಂದ ಮುಕ್ತವಾಗಿ ಪ್ರಶ್ನೆ ಕೇಳುವುದು, ಚರ್ಚೆ ಮಾಡುವುದು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಮೊನ್ನೆ ತಾನೆ ನಾವು ಆಗಸ್ಟ್ 15ರಂದು 75ನೆ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಿದವು. ನನ್ನ ಪ್ರಕಾರ ಮಕ್ಕಳಿಗೆ ಇಂದೇ ನಿಜವಾದ ಸ್ವಾತಂತ್ರ್ಯ ದಿನಾಚರಣೆ. ಅವರಿಗೆ ಕೋವಿಡ್‍ನಿಂದ ಸ್ವಾತಂತ್ರ್ಯ ಸಿಕ್ಕಿದೆ ಎಂದು ಅಭಿಪ್ರಾಯಪಟ್ಟರು.
ತಜ್ಞರ ವರದಿ ಆಧಾರದ ಮೇಲೆ ಇವತ್ತು ರಾಜ್ಯಾದ್ಯಂತ 9 ರಿಂದ 12ನೇ ತರಗತಿ ಆರಂಭವಾಗಿದೆ. ಇಂದು ಮಕ್ಕಳು ಮತ್ತು ಶಿಕ್ಷಕರ ಜೊತೆ ಮಾತನಾಡಿದ್ದೇನೆ. ಆನ್‍ಲೈನ್ ಶಿಕ್ಷಣದಿಂದ ತೊಂದರೆ ಆಗುತ್ತಿತ್ತು ಎಂದು ವಿದ್ಯಾರ್ಥಿಗಳು ಹೇಳಿದ್ದು, ಕೋವಿಡ್ ನಿಯಮ ಪಾಲನೆ ಮಾಡುವಂತೆ ಸಲಹೆ ನೀಡಿದ್ದೇನೆ ಎಂದರು.
ಇನ್ನು 1 ರಿಂದ 8ನೆ ತರಗತಿ ವರೆಗಿನ ಶಾಲೆಗಳನ್ನು ಪುನರಾರಂಭಿಸುವ ಕುರಿತಂತೆ ಈ ತಿಂಗಳಾಂತ್ಯಕ್ಕೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ