ಸಿಎಂ ಬದಲಾವಣೆ ಗುಲ್ಲು

ಬೆಂಗಳೂರು:

    ಸಿಎಂ ಕುರ್ಚಿಗೆ ಕಂಟಕವಾಯ್ತಾ ಬಿಟ್ ಕಾಯಿನ್ ಪ್ರಕರಣ?

ದಿನ ಕಳೆದಂತೆ ಬಿಟ್ ಕಾಯಿನ್ ಹಗರಣ ರೋಚಕ ತಿರುವುಗಳನ್ನು ಪಡೆಯುತ್ತಿದ್ದು ಮುಖ್ಯಮಂತ್ರಿ ಹುದ್ದೆಯಿಂದ ಬಸವರಾಜ ಬೊಮ್ಮಾಯಿ ಅವರು ಕೆಳಗಿಳಿಯಲಿದ್ದಾರೆ ಎಂಬ ಮಾತು ಬಿಜೆಪಿ ವಲಯಗಳಲ್ಲೇ ದಟ್ಟವಾಗಿ ಕೇಳತೊಡಗಿದೆ.
ಒಂದು ವೇಳೆ ಬಸವರಾಜ ಬೊಮ್ಮಾಯಿ ಅವರು ತಲೆದಂಡ ಒಪ್ಪಿಸುವುದು ಅನಿವಾರ್ಯವಾದರೆ ಮುಂದಿನ ಮುಖ್ಯಮಂತ್ರಿ ಹುದ್ದೆಗೆ ಸಜ್ಜಾಗುವಂತೆ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಅವರಿಗೆ ವರಿಷ್ಠರು ಈಗಾಗಲೇ ಸೂಚನೆ ನೀಡಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ.

ಬಿಟ್ ಕಾಯಿನ್ ಹಗರಣ ಪಡೆಯುತ್ತಿರುವ ತಿರುವುಗಳನ್ನು ಕಂಡು ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಲ್ನೋಟಕ್ಕೆ ಧೈರ್ಯದ ಮಾತನಾಡುತ್ತಿದ್ದರೂ, ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಚಿಂತಾಕ್ರಾಂತರಾಗಿದ್ದಾರೆ ಎಂದು ಮೂಲಗಳು ಹೇಳಿವೆ.

ಈ ಮಧ್ಯೆ ಇತ್ತೀಚೆಗೆ ದೆಹಲಿಗೆ ತೆರಳಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಭಾನುವಾರ ದೆಹಲಿಯಿಂದ ವಾಪಸ್ಸಾಗಿದ್ದು, ಅವರ ಜತೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಕೂಡ ಆಗಮಿಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಯಾಕೆಂದರೆ ಭಾನುವಾರ ಜಗದೀಶ್ ಶೆಟ್ಟರ್ ಅವರ ಜತೆ ಬೆಂಗಳೂರಿಗೆ ಆಗಮಿಸಿದ ಪ್ರಹ್ಲಾದ್ ಜೋಷಿ ಅವರು ರಾಜಭವನಕ್ಕೆ ತೆರಳಿ ರಾಜ್ಯಪಾಲ ಥ್ಯಾವರಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಸುದೀರ್ಘ ಮಾತುಕತೆ ನಡೆಸಿದ್ದಾರೆ.

ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುವ ಸಂದರ್ಭದಲ್ಲೂ ಇದೇ ರೀತಿ ರಾಜ್ಯಕ್ಕೆ ಆಗಮಿಸಿ ರಾಜ್ಯಪಾಲರ ಜತೆ ಅವರು ಸುದೀರ್ಘ ಮಾತುಕತೆ ನಡೆಸಿದ್ದರು. ಹೀಗೆ ಪ್ರಹ್ಲಾದ್ ಜೋಷಿ ಅವರು ರಾಜಭವನಕ್ಕೆ ತೆರಳಿದ ಬೆಳವಣಿಗೆಯ ನಂತರ ಜಗದೀಶ್ ಶೆಟ್ಟರ್ ಅವರು ಸೋಮವಾರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಎರಡು ಬಾರಿ ಭೇಟಿ ಮಾಡಿ ಸುದೀರ್ಘ ಮಾತುಕತೆ ನಡೆಸಿದರು.

ಮೂಲಗಳ ಪ್ರಕಾರ, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದರೆ ಜಗದೀಶ್ ಶೆಟ್ಟರ್ ಅವರು ಮುಂದಿನ ನಾಯಕರಾಗಲಿ ಎಂಬ ವಿಷಯದಲ್ಲಿ ಯಡಿಯೂರಪ್ಪ ಅವರು ಸಹಮತ ವ್ಯಕ್ತಪಡಿಸಿದ್ದಾರೆ. ಪಕ್ಷ 2008 ರಲ್ಲಿ ಅಧಿಕಾರಕ್ಕೆ ಬಂದ ನಂತರದ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದ ಯಡಿಯೂರಪ್ಪ ಅವರು ತಮ್ಮ ಜಾಗಕ್ಕೆ ಆಪ್ತರಾದ ಡಿ.ವಿ.ಸದಾನಂದಗೌಡರು ಬಂದು ಕೂರಲು ಅನುವು ಮಾಡಿ ಕೊಟ್ಟಿದ್ದರು.

ಆದರೆ ಮುಂದಿನ ದಿನಗಳಲ್ಲಿ ತಮ್ಮ ಬೆಂಬಲಿಗ ಶಾಸಕರು ಡಿ.ವಿ.ಸದಾನಂದಗೌಡರ ವಿರುದ್ದ ತಿರುಗಿ ಬಿದ್ದಾಗ ಜಗದೀಶ್ ಶೆಟ್ಟರ್ ಅವರ ಬೆನ್ನಿಗೆ ನಿಂತು ಅವರು ಮುಖ್ಯಮಂತ್ರಿಯಾಗಲು ಸಹಕರಿಸಿದ್ದರು. ಈಗಲೂ ಅಂತಹುದೇ ಪರಿಸ್ಥಿತಿ ಕಾಣಿಸಿಕೊಂಡಿದ್ದು ಯಡಿಯೂರಪ್ಪ ಮತ್ತು ಹೈಕಮಾಂಡ್ ತೀರ್ಮಾನದ ಅನುಸಾರ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಹುದ್ದೆಯ ಮೇಲೆ ಬಂದು ಕುಳಿತರಾದರೂ, ತದ ನಂತರದ ದಿನಗಳಲ್ಲಿ ಯಡಿಯೂರಪ್ಪ ಅವರ ಬೆಂಬಲಿಗರು ಸೇರಿದಂತೆ ಬಿಜೆಪಿಯ ಬಹುತೇಕರು ಅಪಸ್ವರ ತೆಗೆಯುತ್ತಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ತಮಗೆ ಬೇಕಾದಂತೆ ನಡೆದುಕೊಳ್ಳುತ್ತಿದ್ದು ಕೆಲವೇ ಕೆಲವರ ಹಿತಾಸಕ್ತಿಗೆ ಪೂರಕವಾಗಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಹಿತಾಸಕ್ತಿಯನ್ನು ರಕ್ಷಿಸುವ ವಿಷಯದಲ್ಲಿ ಅವರಿಗೆ ಯಾವ ಉತ್ಸುಕತೆಯೂ ಇಲ್ಲ ಎಂಬುದು ಬಹುತೇಕ ಶಾಸಕರ ಅಸಮಾಧಾನ.

ಬಸವರಾಜ ಬೊಮ್ಮಾಯಿ ಅವರ ಬದಲು ಜಗದೀಶ್ ಶೆಟ್ಟರ್ ಅವರನ್ನೇ ಮತ್ತೊಮ್ಮೆ ಮುಖ್ಯಮಂತ್ರಿ ಹುದ್ದೆಯ ಮೇಲೆ ಕೂರಿಸುವುದು ಸೂಕ್ತ ಎಂದು ಬಹುತೇಕ ಶಾಸಕರು ಯಡಿಯೂರಪ್ಪ ಅವರಿಗೆ ಹೇಳಿದ್ದು, ಈ ಶಾಸಕರ ಮಾತುಗಳನ್ನು ಅವರು ಗಂಭೀರವಾಗಿ ಪರಿಗಣಿಸಿದ್ದಾರೆ ಎಂಬುದು ಮೂಲಗಳ ವಿವರಣೆ. ಇದೇ ಕಾರಣಕ್ಕಾಗಿ ಜಗದೀಶ್ ಶೆಟ್ಟರ್ ಅವರನ್ನು ಪದೆ ಪದೆ ಕರೆಸಿ ಯಡಿಯೂರಪ್ಪ ಅವರು ಮಾತುಕತೆ ನಡೆಸುತ್ತಿದ್ದು, ಈ ಬೆಳವಣಿಗೆ ಸಹಜವಾಗಿಯೇ ರಾಜಕೀಯ ವಲಯಗಳಲ್ಲಿ ಕುತೂಹಲ ಮೂಡಿಸಿದೆಯಲ್ಲದೆ, ಮುಂದೇನು ಎಂದು ಕಾದು ನೋಡುವಂತೆ ಮಾಡಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap