ಹೈಕಮಾಂಡ್ ಹೇಳಿದಂತೆ ನಾನು, ಸಿಎಂ ನಡೆಯುತ್ತೇವೆ ಎಂದ ಡಿ.ಕೆ. ಶಿವಕುಮಾರ್

ಬೆಂಗಳೂರು 

     ಒಂದು ಬ್ರೇಕ್‌ಫಾಸ್ಟ್‌ ಮೀಟಿಂಗ್‌ ಹಾಗೂ ಆ ಬಳಿಕ ಮಾಧ್ಯಮದೆದುರು ಬ್ರೀಫಿಂಗ್‌ ಜೊತೆಗೆ ಬಣ ಬಡಿದಾಟಕ್ಕೆ  ಸಿಎಂ ಸಿದ್ದರಾಮಯ್ಯ  ಡಿಸಿಎಂ ಡಿಕೆ ಶಿವಕುಮಾರ್‌  ಜೋಡಿ ಅಂತ್ಯ ಹಾಡಿದೆ. ನಮ್ಮ ನಡುವೆ ಇನ್ನು ಮುಂದೆ ಯಾವುದೇ ಗೊಂದಲ ಇರೋಲ್ಲ, ಇದೇ ಥರ ಮುಂದುವರಿಯಲಿದ್ದೇವೆ. ಹೈಕಮಾಂಡ್‌ ಸೂಚನೆಯಂತೆಯೇ ನಡೆದುಕೊಳ್ಳಲಿದ್ದೇವೆ ಎಂದು ಇಬ್ಬರೂ ಘೋಷಿಸಿದ್ದಾರೆ.

   ಸಿಎಂ ʼಕಾವೇರಿʼ ನಿವಾಸಕ್ಕೆ ಆಗಮಿಸಿದ ಡಿಕೆ ಶಿವಕುಮಾರ್ ಅವರನ್ನು ಸ್ವತಃ ಸಿಎಂ ಸಿದ್ದರಾಮಯ್ಯ ನಗುಮೊಗದಿಂದ ಸ್ವಾಗತಿಸಿದರು. ಬ್ರೇಕ್ ಫಾಸ್ಟ್ ಬಳಿಕವೂ ಇಬ್ಬರೂ ನಗುಮೊಗದಿಂದಲೇ ಹೊರಗೆ ಬಂದು ಜಂಟಿಯಾಗಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

    ಇತ್ತೀಚಿನ ದಿನಗಳಲ್ಲಿ, ಅದರಲ್ಲೂ ಸುಮಾರು ಒಂದು ತಿಂಗಳಿನಿಂದ ಅನಗತ್ಯವಾಗಿ ಕಾಂಗ್ರೆಸ್​​ನಲ್ಲಿ ಕೆಲವು ಗೊಂದಲಗಳು ನಿರ್ಮಾಣವಾಗಿವೆ. ಈ ಕಾರಣಕ್ಕೆ ಪಕ್ಷದ ಹೈಕಮಾಂಡ್ ಸೂಚನೆಯಂತೆ ನಾನು ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬ್ರೇಕ್​ಫಾಸ್ಟ್ ಮೀಟಿಂಗ್ ನಡೆಸಿದ್ದೇವೆ. ನಮ್ಮಿಬ್ಬರ ನಡುವೆ ಯಾವುದೇ ಗೊಂದಲಗಳಿಲ್ಲ. ಇವತ್ತಿನ ವರೆಗೆ ನಮ್ಮ ಮಧ್ಯೆ ಯಾವುದೇ ಗೊಂದಲಗಳಿರಲಿಲ್ಲ. ಮುಂದೆಯೂ ಇದೇ ತರ ಮುಂದುವರಿಯಲಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

     ನಮಗೆ ಕರೆ ಮಾಡಿದ್ದ ಹೈಕಮಾಂಡ್​ ನಾಯಕರು, ಗೊಂದಲ ತಿಳಿ ಮಾಡುವ ಕೆಲಸ ಮಾಡಿ ಎಂದು ಸೂಚನೆ ನೀಡಿದ್ದರು. ಅದರಂತೆ ನಡೆದುಕೊಳ್ಳುತ್ತೇವೆ. ಹೈಕಮಾಂಡ್ ಸೂಚನೆಯಂತೆಯೇ ನಡೆದುಕೊಳ್ಳುತ್ತೇವೆ ಎಂದು ಈ ಹಿಂದೆಯೂ ಸ್ಪಷ್ಟಪಡಿಸಿದ್ದೆ. ಹೀಗಾಗಿ ನಮ್ಮ ನಡುವೆ ನಾಳೆಯಿಂದ ಯಾವುದೇ ಗೊಂದಲ ಇರಲ್ಲ. ಈಗಲೂ ಕೂಡ ಯಾವುದೇ ಗೊಂದಲ ಇಲ್ಲ. ಹಿಂದೆಯೂ ಇರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. 

    ನಾನು ಸಂಪುಟ ಪುನಾರಚನೆ ಮಾಡುತ್ತೇನೆ ಎಂದು ಹೇಳಿದ್ದೆ. ಹಾಗಾಗಿ ಕೆಲ ಶಾಸಕರು ಮಂತ್ರಿ ಮಾಡಿ ಎಂದು ದೆಹಲಿಗೆ ಹೋಗಿದ್ದರು. ನಾಯಕತ್ವದ ವಿರುದ್ಧವಾಗಿ ಶಾಸಕರು ದೆಹಲಿಗೆ ಹೋಗಿರಲಿಲ್ಲ. ಶಾಸಕರು ಹಾಗೂ ಸಚಿವರು ಸರ್ಕಾರದ ವಿರುದ್ಧ ಇಲ್ಲ. ಹೈಕಮಾಂಡ್ ತೀರ್ಮಾನಕ್ಕೆ ನಾವಿಬ್ಬರೂ ಬದ್ಧ. ಹೈಕಮಾಂಡ್ ಏನು ಹೇಳುತ್ತೋ ಅದನ್ನು ಒಪ್ಪಿಕೊಳ್ಳುತ್ತೇವೆ. ಹೈಕಮಾಂಡ್​ ಹೇಳಿದ್ದರಿಂದ ಮಾತುಕತೆ ಮಾಡಿದ್ದೇವೆ. ಹೈಕಮಾಂಡ್​ಗೆ ಸಭೆಯ ಮಾಹಿತಿ ಕೊಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು. 

ರಾಜ್ಯದ ಜನ ನಮ್ಮ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದ್ದಾರೆ. ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದಿದ್ದೇವೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ನಡೆಯುತ್ತಿದೆ. ವಿಧಾನಸಭೆ ಅಧಿವೇಶನದ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಜತೆ ಚರ್ಚೆ ಮಾಡಿದ್ದೇನೆ. ನಮ್ಮದು ಒಂದೇ ಗುಂಪು, ಹೈಕಮಾಂಡ್ ಗುಂಪು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. 

ನಾನು, ಸಿಎಂ ಒಟ್ಟಿಗೆ ಕೆಲಸ ಮಾಡಿಕೊಂಡು ಹೋಗುತ್ತೇವೆ. ದೇಶದಲ್ಲಿ ಕಾಂಗ್ರೆಸ್ ಪರಿಸ್ಥಿತಿ ತುಸು ದುರ್ಬಲವಾಗಿದೆ ನಮಗೆ ಗೊತ್ತು. ಆದರೆ ಕರ್ನಾಟಕದಲ್ಲಿ ಹಾಗಿಲ್ಲ. 2028ಕ್ಕೆ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಕಾರ್ಯಕ್ರಮ ರೂಪಿಸಿದ್ದೇವೆ. ಅದಕ್ಕಾಗಿ ಒಮ್ಮತದಿಂದ ಆಡಳಿತ ಮಾಡಿಕೊಂಡು ಹೋಗುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದರು.

ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ನಮ್ಮ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿವೆ. ಸರ್ಕಾರದ ವಿರುದ್ಧ ಅವಿಶ್ವಾಸ ನಿಲುವಳಿ ಮಂಡಿಸುತ್ತೇವೆ ಎಂದು ಪ್ರತಿಪಕ್ಷ ನಾಯಕರು ಹೇಳುತ್ತಿದ್ದಾರೆ. ಅದು ಅಸಾಧ್ಯ. ಪ್ರತಿಪಕ್ಷಗಳನ್ನು ವಿಧಾನಸಭೆ ಅಧಿವೇಶನದಲ್ಲಿ ಸಮರ್ಥವಾಗಿ ಎದುರಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

Recent Articles

spot_img

Related Stories

Share via
Copy link