ದಿಢೀರ್‌ ಸಭೆ ಕರೆದ ಸಿಎಂ-ಡಿಸಿಎಂ….!

ಬೆಂಗಳೂರು:

   ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಶಾಸಕರು, ಸಚಿವರು ಮತ್ತು ಉನ್ನತ ಅಧಿಕಾರಿಗಳೊಂದಿಗೆ ಬುಧವಾರ ದಿಢೀರ್ ಸಭೆ ನಡೆಸಿದ್ದು, ಸಭೆಯಲ್ಲಿ ನಗರದ ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚೆ ನಡೆಸಿದರು.

   ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಈ ಸಭೆ ನಡೆದಿದ್ದು, ಸಭೆಯಲ್ಲಿ ರಾಜ್ಯ ಸರ್ಕಾರ ಮಹತ್ವಕಾಂಕ್ಷಿ ಯೋಜನೆಯಾದ ಸ್ಕೈಡೆಕ್‌ ನಿರ್ಮಾಣ, ಸುರಂಗ ರಸ್ತೆ ನಿರ್ಮಾಣ, ಘನ ತ್ಯಾಜ್ಯದ ವೈಜ್ಞಾನಿಕ ವಿಲೇವಾರಿ, ಹೈ ಡೆನ್ಸಿಟಿ ಕಾರಿಡಾರ್ ಅಭಿವೃದ್ಧಿ ಹಾಗೂ ಪೆರಿಫೆರಲ್ ರಿಂಗ್ ರಸ್ತೆ ಸೇರಿದಂತೆ ಮೊದಲಾದ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.

   ನಾಲ್ಕೈದು ಬಾರಿ ಟೆಂಡರ್ ಕರೆದರು ವಿಫಲವಾಗಿರುವುದರಿಂದ ಪರಿಸರಲ್ ರಿಂಗ್ ರಸ್ತೆ ಅಭಿವೃದ್ಧಿಗೆ ವಿವಿಧ ಸಾಧ್ಯತೆಗಳು ಹಾಗೂ ಸಂಪನ್ಮೂಲ ಕ್ರೋಡೀಕರಣದ ಅವಕಾಶಗಳನ್ನು ಪರಿಶೀಲಿಸಿ ವಿವರವಾದ ಪ್ರಸ್ತಾವನೆಯನ್ನು ಸಚಿವ ಸಂಪುಟ ಸಭೆಗೆ ಮಂಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದರು.

   ಜತೆಗೆ, ನಗರದಲ್ಲಿ ವೈಜ್ಞಾನಿಕ ಘನತ್ಯಾಜ್ಯ ವಿಲೇವಾರಿ, ಬಜೆಟ್‌ನಲ್ಲಿ ಘೋಷಿಸಿದಂತೆ ಸಂಚಾರ ದಟ್ಟಣೆ ನಿವಾರಣೆಗೆ ಸುರಂಗ ರಸ್ತೆಗಳ ನಿರ್ಮಾಣ ಅಭಿವೃದ್ಧಿ ಹಾಗೂ ರಾಜಕಾಲುವೆಗಳ ಬಫರ್ ಜೋನ್‌ ನಲ್ಲಿ ರಸ್ತೆಗಳ ನಿರ್ಮಾಣ ಸೇರಿ ಮೊದಲಾದ ವಿಷಯಗಳ ಕುರಿತು ಅಧಿಕಾರಿಗಳು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಅವರಿಗೆ ಮಾಹಿತಿ ಒದಗಿಸಿದರು. ಆ ಬಳಿಕೆ ಸಭೆಯಲ್ಲಿ ಚರ್ಚಿಸಲಾಯಿತು ಎಂದು ತಿಳಿದುಬಂದಿದೆ.

   ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರ ಡಿಕೆ.ಶಿವಕುಮಾರ್ ಅವರು, ಬೆಂಗಳೂರಿಗೆ ಕೆಲವು ಯೋಜನೆಗಳನ್ನು ಮೀಸಲಿಡಲಾಗಿದೆ. ಅವುಗಳೆಲ್ಲವನ್ನೂ ಕ್ಯಾಬಿನೆಟ್​ನಲ್ಲಿ ಮಂಡಿಸುವ ಮುನ್ನ ಬೆಂಗಳೂರು ಉಸ್ತುವಾರಿ ಸಚಿವರು ಹಾಗೂ ಸಿಎಂ ಸಿಎಂಗೆ ಮಾಹಿತಿ ನೀಡಿ, ಚರ್ಚಿಸಬೇಕಿದೆ. ಪೆರಿಪೆರಲ್ ರಿಂಗ್ ರೋಡ್, ಸಾಲಿಡ್ ವೇಸ್ಟ್ ಮ್ಯಾನೇಜ್‌ಮೆಂಟ್‌, ಫ್ಲೈ ಓವರ್, ಟ್ಯಾಕ್ಸ್ ವಿಚಾರಗಳು, ಹೊಸ ರೋಡ್ ಮಾಡುವ ಬಗ್ಗೆ ಸೇರಿದಂತೆ ಬ್ರ್ಯಾಂಡ್ ಬೆಂಗಳೂರು ಮಾಡಲು ಬಂದಿರುವ ಸಲಹೆಗಳ ಬಗ್ಗೆ ಅವರ ಜೊತೆ, ಕ್ಯಾಬಿನೆಟ್​ಗೆ ಹೋಗುವ ಮುನ್ನ ಚರ್ಚೆ ಮಾಡುತ್ತೇನೆ. ಅವರಿಗೂ ಎಲ್ಲಾ ಗೊತ್ತಾಗಬೇಕು ಎಂದು ಹೇಳಿದರು.

   ಇವತ್ತು ಯಾವುದೋ ಮಾಧ್ಯಮದಲ್ಲಿ 45 ಸಾವಿರ ಕೋಟಿ ರೂಪಾಯಿ ಎಂದು ಬರೆದಿದ್ದಾರೆ. ಯಾರೋ ಮಂತ್ರಿ 15 ಸಾವಿರ ಕೋಟಿ ರೂ. ಹೊಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ. ಕಸ ಎತ್ತೋದಕ್ಕೆಯೇ ವರ್ಷಕ್ಕೆ 450 ಕೋಟಿ ರೂ. ಬೇಕಾಗುತ್ತದೆ. ಅದು ಹೇಗೆ 15 ಸಾವಿರ ಕೋಟಿ ಹೊಡೆದುಬಿಡೋದು ಎಂದು ಪ್ರಶ್ನಿಸಿದರು.

   ವಿಪಕ್ಷಗಳ 30 ವರ್ಷ, ಬ್ಲ್ಯಾಕ್​ ಲಿಸ್ಟ್​ಲ್ಲಿರುವ ಕಂಪೆನಿಗೆ ಗುತ್ತಿಗೆ ಕೊಟ್ಟಿದ್ದಾರೆ ಎನ್ನುವ ಆರೋಪದ ಕುರಿತು ಪ್ರತಿಕ್ರಿಯಿಸಿ, ನನಗೆ ಆಶ್ಚರ್ಯ ಆಗುತ್ತಿದೆ. ಜಾಗವೇ ಇನ್ನೂ ಸಿಕ್ಕಿಲ್ಲ. ಬ್ಲ್ಯಾಕ್​ ಲಿಸ್ಟ್​ ಕಂಪೆನಿಗೆ ಗುತ್ತಿಗೆ ಕೊಡುವುದು ಎಲ್ಲಿಂದ ಬಂತು? ಇನ್ನೂ ಟೆಂಡರ್​ ಕರೆದಿಲ್ಲ. ಕೇಸ್​ ಇನ್ನೂ ಕೋರ್ಟ್​ನಲ್ಲಿದೆ. ಕಳೆದ ಮೂರು ದಿನಗಳಿಂದ ಮಂಡೂರಿನಲ್ಲಿ ಕಸ ಹಾಕುವುದನ್ನು ನಿಲ್ಲಿಸಿದ್ದಾರೆ. ಕಸ ಹಾಕಬಾರದು ಅಂತಾ ಹೇಳಿದ್ದಾರೆ. ಬೇರೆ ಕಡೆ ಕಸ ಹಾಕಲು ಜಾಗ ಹುಡುಕುತ್ತಿದ್ದೇವೆ. ನೈಸ್ ರಸ್ತೆಯಲ್ಲಿರುವ ಜಾಗದಲ್ಲಿ ಕಸ ಹಾಕುವ ಬಗ್ಗೆ ನ್ಯಾಯ ಪಂಚಾಯತಿ ಮಾಡುತ್ತಿದ್ದೇವೆ.

   ಬೆಂಗಳೂರಿನಿಂದ ಹೊರಗಡೆ ಇರುವ ಜಾಗಗಳಲ್ಲಿ ಕಸ ಹಾಕುವ ನಿಟ್ಟಿನಲ್ಲಿ ನಾವು ಮಾತುಕತೆ ನಡೆಸುತ್ತಿದ್ದೇವೆ. ಬೇರೆ ರಾಜ್ಯಗಳಿಗೆ ಹೋಗಿ ಕಸ ವಿಲೇವಾರಿ ಬಗ್ಗೆ ನೋಡಿಕೊಂಡು ಬಂದಿದ್ದೇನೆ. ಅವೆಲ್ಲವನ್ನೂ ಸಿಎಂ ಜೊತೆ ಚರ್ಚಿಸಿ, ಕ್ಯಾಬಿನೆಟ್​ನಲ್ಲಿ ಮಂಡನೆ ಮಾಡುತ್ತೇವೆ. ಇಷ್ಟು ದಿನ ದಂಧೆ ಮಾಡಿಕೊಂಡಿದ್ದರಲ್ಲಾ, ಟೆಂಡರ್ ಇಲ್ಲದೆ ಮಾಡಿಕೊಂಡು ಹೋಗ್ತಾ ಇದ್ರು. ಈಗ ಟೆಂಡರ್ ತಂದಿರುವುದಕ್ಕೆ ಹೊಟ್ಟೆ ಉರಿ ಅಷ್ಟೇ ಎಂದು ಟೀಕಿಸಿದರು.

   ರಾಜ್ಯದ ಹಲವೆಡೆ ಭಾರೀ ಮಳೆಯಾಗುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಎಲ್ಲ ಕಡೆ ಮಳೆ ಇಲ್ಲ, ಕೆಲವು ಕಡೆ ಆಗ್ತಿದೆ. ತಮಿಳುನಾಡಿನ ಪರಿಸ್ಥಿತಿ ಸುಧಾರಣೆ ಆಗುತ್ತಿದೆ. ಎಷ್ಟು ನೀರು ಹೋಗ್ತಾ ಇದೆ ಎಂಬ ಲೇಟೆಸ್ಟ್ ರಿಪೋರ್ಟ್ ಬಂದಿಲ್ಲ. ಮಾಹಿತಿ ಬಂದ ಮೇಲೆ ತಿಳಿಸುಸುತ್ತೇನೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link