ಬೆಂಗಳೂರು:
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಕುಟುಂಬಕ್ಕೆ ಬಿಗ್ ರಿಲೀಫ್ ಸಿಕ್ಕಿದೆ. ನಿವೃತ್ತ ನ್ಯಾಯಾಧೀಶ ದೇಸಾಯಿ ಕಮಿಟಿ ನೀಡಿದ ವರದಿಯಲ್ಲಿ ಸಿಎಂ ಕುಟುಂಬಕ್ಕೆ ಕ್ಲೀನ್ ಚಿಟ್ ನೀಡಲಾಗಿದೆ. ಕಳೆದ ವಾರವಷ್ಟೇ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿಯವರಿಗೆ ಮುಡಾ ಕೇಸ್‌ನಲ್ಲಿ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್ ನೀಡಿತ್ತು. ಇದರ ಬೆನ್ನಲ್ಲೇ ಈಗ ನ್ಯಾ. ದೇಸಾಯಿ ಕಮಿಟಿ ಕೂಡ ಕ್ಲೀನ್ ಚಿಟ್ ನೀಡಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ತನಿಖೆ ನಡೆಸಿರುವ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಪಿ.ಎನ್.ದೇಸಾಯಿ ಅವರು ಸರ್ಕಾರಕ್ಕೆ ಆರು ಸಂಪುಟಗಳ ವರದಿ ಸಲ್ಲಿಸಿದ್ದಾರೆ. ವಿಧಾನಸೌಧದಲ್ಲಿ ನಿನ್ನೆ (ಜುಲೈ 31) ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ವರದಿ ನೀಡಿದ್ದಾರೆ. ಸಲ್ಲಿಸಿರುವ ವರದಿಯಲ್ಲಿ 14 ಮುಡಾ ಸೈಟ್ ಅಕ್ರಮ ಆರೋಪದಲ್ಲಿ ಸಿಎಂ ಸಿದ್ದರಾಮಯ್ಯ ಪಾತ್ರವಿಲ್ಲ ಎಂದು ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.
ಸಿದ್ದರಾಮಯ್ಯ ತಮ್ಮ ಅಧಿಕಾರ ಬಳಸಿರುವುದು ಕಂಡು ಬಂದಿಲ್ಲ. ತಮ್ಮ ಅಧಿಕಾರ ಬಳಸಿರುವುದಕ್ಕೆ ಸೂಕ್ತ ಪುರಾವೆ ಇಲ್ಲ ಎಂದೂ ನ್ಯಾ. ದೇಸಾಯಿ ಕಮಿಟಿ ವರದಿಯಲ್ಲಿ ಸ್ಪಷ್ಟಪಡಿಸಿದೆ. ಸಿಎಂ ಪತ್ನಿ ಪಾರ್ವತಿ ಸಲ್ಲಿಸಿದ್ದ ಅರ್ಜಿಯಲ್ಲಿ ‘ಇಂತಹದ್ದೇ ಜಾಗದಲ್ಲಿ ಪರ್ಯಾಯ ನಿವೇಶನ ಕೊಡಿ’ ಎಂಬ ಪ್ರಸ್ತಾಪ ಮಾಡಿಲ್ಲ. ಆದರೆ, ಈ ಪ್ರಕರಣದಲ್ಲಿ ಅಧಿಕಾರಿಗಳ ಲೋಪದ ಬಗ್ಗೆ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ನಿವೃತ್ತ ನ್ಯಾ. ದೇಸಾಯಿ ಸರ್ಕಾರಕ್ಕೆ ಆರು ಸಂಪುಟಗಳ ವರದಿ ಸಲ್ಲಿಸಿದ್ದು, ಈ ವರದಿಯಲ್ಲಿ ಸಿಎಂ ಕುಟುಂಬಕ್ಕೆ ಕ್ಲೀನ್ ಚಿಟ್ ಸಿಕ್ಕಿರುವುದು ಮಹತ್ವದ ಬೆಳವಣಿಗೆಯಾಗಿದೆ.
ಅಕ್ರಮವಾಗಿ ನಿವೇಶನ ಪಡೆದಿದ್ದಾರೆಂದು ಮೊದಲು ಎಚ್. ವಿಶ್ವನಾಥ್ ಸಿಎಂ ವಿರುದ್ಧ ಆರೋಪ ಮಾಡಿದ್ದರು. ಬಳಿಕ ಸ್ನೇಹಮಯಿ ಕೃಷ್ಣ ಕಾನೂನು ಹೋರಾಟ ನಡೆಸಿದ್ದು, ನ್ಯಾಯಾಲಯದ ಮೊರೆ ಹೋಗಿದ್ದರು. ಇದನ್ನು ಸಿದ್ದರಾಮಯ್ಯ ವಿರುದ್ಧ ವಿಪಕ್ಷಗಳು ಅಸ್ತ್ರ ಮಾಡಿಕೊಂಡಿದ್ದವು. ವಿಪಕ್ಷಗಳ ಎಂಟ್ರಿ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ದೇಸಾಯಿ ಕಮಿಟಿ ರಚಿಸಿದ್ದರು. ಅಲ್ಲದೇ 14 ನಿವೇಶನ ವಾಪಸು ಮಾಡಿ, ಕ್ಲೀನ್ ಚಿಟ್ ಸಿಕ್ಕರೆ ವಾಪಸು ಕೊಡಲಿ ಎಂದಿದ್ದರು.
ಕಳೆದ ವಾರ ಸುಪ್ರೀಂ ಕೋರ್ಟ್‌ನಿಂದ ಬಿಗ್ ರಿಲೀಫ್ ಸಿಕ್ಕಿದ್ದು, ಈಗ ದೇಸಾಯಿ ಕಮಿಟಿಯಿಂದಲೂ ಕ್ಲೀನ್ ಚಿಟ್ ಸಿಕ್ಕಂತಾಗಿದೆ. ಇದರಿಂದ ಸಿಎಂ ಮತ್ತಷ್ಟು ಬಲ ಬಂದಂತಾಗಿದೆ.








