ಗದಗ:
ಅನ್ವರ್ ಮಾಣಿಪ್ಪಾಡಿಯವರೇ ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ.ನಡ್ಡಾ ಅವರಿಗೆ ಪತ್ರ ಬರೆದಿದ್ದಾರೆ. ಅವರ ವಿಡಿಯೋ ಹೇಳಿಕೆ ನೋಡಿಯೇ ಪ್ರತಿಕ್ರಿಯೆ ನೀಡಿದ್ದೇನೆ. ಈಗ ಯಾವ ಕಾರಣಕ್ಕೆ ಉಲ್ಟಾ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಹೇಳಿದರು.
ಗದಗ ಜಿಲ್ಲೆ ರೋಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಡಿಯೋ ನೋಡಿ ಪ್ರತಿಕ್ರಿಯೆ ನೀಡಿದ್ದೇನೆ. ಅವರೇ ಮೋದಿ ಹಾಗೂ ನಡ್ಡಾ ಅವರಿಗೆ ಪತ್ರ ಬರೆದಿದ್ದಾರೆ. ಈಗ ಉಲ್ಟಾ ಹೊಡೆದಿದ್ದಾರೆ. ಇದಕ್ಕೆ ಕಾರಣ ನನಗೆ ಗೊತ್ತಿಲ್ಲ. ನನ್ನ ಹೇಳಿಕೆಗೆ ವಿಡಿಯೋ ರೆಕಾರ್ಡ್ ಸಾಕ್ಷಿ ಇದೆ. ಬದಲಾವಣೆ ಮಾಡಿಸಿ ಬಿಜೆಪಿಯವರೇ ಹೇಳಿಸಿರಬಹುದು. ಕೇಂದ್ರದಲ್ಲಿ ಅವರ ಸರ್ಕಾರವೇ ಇದೆ. ಸಿಬಿಐಗೆ ಕೊಡಲಿ ಎಂದು ಹೇಳಿದರು.
‘ಪ್ರಧಾನಿ ಮೋದಿಯವರು ‘ನ ಖಾವುಂಗಾ, ಖಾನೆದುಂಗಾ’ ಎಂದು ಹೇಳುತ್ತಾರೆ. ಅದಕ್ಕಾಗಿ ಅವರೇ ಸಿಬಿಐ ತನಿಖೆಗೆ ಕೊಡಲಿ. ಪ್ರಧಾನಿಗೆ, ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ ಎಂದು ವಿಡಿಯೊದಲ್ಲಿ ಹೇಳಿದ್ದಾರೆ. ಅದರ ಆಧಾರದ ಮೇಲೆ ನಾನು ಮಾತನಾಡಿರುವೆ. ಈಗ ಇಲ್ಲ ಅಂತ ಹೇಳಿದರೆ ಅವರು ಸುಳ್ಳು ಹೇಳುತ್ತಿದ್ದಾರೆ ಎಂದರ್ಥ. ವಿಡಿಯೊದಲ್ಲಿರುವ ಧ್ವನಿ ಅನ್ವರ್ ಮಾಣಿಪ್ಪಾಡಿ ಅವರದು ಹೌದೋ, ಅಲ್ಲವೋ ಎನ್ನುವ ಬಗ್ಗೆ ಮಾಧ್ಯಮದವರಿಗೆ ಚೆನ್ನಾಗಿ ಗೊತ್ತಿರುತ್ತದೆ ತಾನೇ ಎಂದು ಪ್ರಶ್ನಿಸಿದರು.
ಇದೇ ವೇಳೆ ಅಧಿವೇಶನದಲ್ಲಿ ಸೋಮವಾರ, ಮಂಗಳವಾರ ಹಾಗೂ ಬುಧವಾರ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಯಾಗಲಿದೆ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುವುದು’ ಎಂದು ಮುಖ್ಯಮಂತ್ರಿಗಳು ತಿಳಿಸಿದರು.