ಬೆಂಗಳೂರು:
2025-26 ನೇ ಸಾಲಿನ ಬಜೆಟ್ ಅನ್ನು ಹಣಕಾಸು ಇಲಾಖೆಯ ಜವಾಬ್ದಾರಿಯನ್ನೂ ಹೊತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ 14 ರಂದು ಮಂಡಿಸಲಿದ್ದು, ಇದು ಸಿದ್ದರಾಮಯ್ಯ ಅವರ 16ನೇ. ದಾಖಲೆಯ ಬಜೆಟ್ ಮಂಡನೆಯಾಗಿರಲಿದೆ,ರಾಜ್ಯದಲ್ಲಿ ಜುಲೈ 2023ರಲ್ಲಿ 14ನೇ ಬಜೆಟ್ ಮಂಡಿಸಿದಾಗಲೇ ಅತಿ ಹೆಚ್ಚು ಬಜೆಟ್ ಮಂಡಿಸಿದ ದಾಖಲೆ ಸಿದ್ದರಾಮಯ್ಯ ಅವರ ಹೆಸರಿನಲ್ಲಿದೆ. 2024-25ನೇ ಸಾಲಿನ ಬಜೆಟ್ ಅನ್ನು ಫೆಬ್ರವರಿ ತಿಂಗಳಲ್ಲಿ ಮಂಡಿಸಿದ್ದರು. ಇದು ಅವರ 15ನೇ ಬಜೆಟ್ ಆಗಿತ್ತು.
ಕರ್ನಾಟಕದ ಮಾಜಿ ರಾಜ್ಯಪಾಲರೂ ಆಗಿರುವ ಗುಜರಾತ್ ನ ಮಾಜಿ ಆರ್ಥಿಕ ಸಚಿವ ವಜೂಬಾಯಿ ವಾಲಾ ಅವರು 18 ಬಾರಿ ಬಜೆಟ್ ಮಂಡಿಸುವ ಮೂಲಕ ದೇಶದಲ್ಲೇ ದಾಖಲೆ ನಿರ್ಮಿಸಿದ್ದಾರೆ. ಈ ದಾಖಲೆಯನ್ನು ಮುರಿಯಬೇಕೆಂದರೆ ಸಿದ್ದರಾಮಯ್ಯ ಅವರು ಇನ್ನೂ ಎರಡು ಬಜೆಟ್ ಗಳನ್ನು ಮಂಡಿಸಬೇಕಾಗುತ್ತದೆ.
ಸಿದ್ದರಾಮಯ್ಯ ಅವರ 16ನೇ ಬಜೆಟ್ ಹಲವು ವೈಶಿಷ್ಠ್ಯಗಳನ್ನು ಹೊಂದಿದೆ. ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಜೆಟ್ ಗಾತ್ರ 4 ಲಕ್ಷ ಕೋಟಿ ರೂ.ಗಳನ್ನು ದಾಟಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.ಬಜೆಟ್ ಮಂಡನೆಗೆ ದಿನಗಣನೆ ಆರಂಭವಾಗಿದ್ದು. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಸೋಮವಾರದಿಂದ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸಿ, ಸಿದ್ಧತೆಗಳನ್ನು ಆರಂಭಿಸಲಿದ್ದಾರೆಂದು ತಿಳಿದುಬಂದಿದೆ.
ಈ ಸಭೆಗಳು ಬಜೆಟ್ ಮಂಡನೆಗೆ ಅಡಿಪಾಯ ಹಾಕಲಿದೆ. ಮುಖ್ಯಮಂತ್ರಿಗಳು ಸಮಾಜ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಆಹಾರ ಮತ್ತು ನಾಗರಿಕ ಸರಬರಾಜು, ಉನ್ನತ ಶಿಕ್ಷಣ, ವೈದ್ಯಕೀಯ ಶಿಕ್ಷಣ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ಪ್ರಮುಖ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.ಈ ಸಭೆಗಳು ಮುಖ್ಯಮಂತ್ರಿಗಳಿಗೆ ನಿರ್ಣಾಯಕವಾಗಿವೆ, ಏಕೆಂದರೆ ಮುಖ್ಯಮಂತ್ರಿಗಳು ಬೇಡಿಕೆಗಳನ್ನು ಸಮತೋಲನಗೊಳಿಸುವ ಸವಾಲಿನ ಕೆಲಸವನ್ನು ನಿಭಾಯಿಸಬೇಕಿದೆ. ಗ್ಯಾರಂಟಿ ಯೋಜನೆಗಳ ಒತ್ತಡ ಜೊತೆಗೆ ಅಭಿವೃದ್ಧಿಗೆ ಹಾಗೂ ಬೇಡಿಕೆಗಳಿಗೂ ಮುಖ್ಯಮಂತ್ರಿಗಳು ಆದ್ಯತೆ ನೀಡಬೇಕಿದೆ.
ಮುಂದಿನ ದಿನಗಳಲ್ಲಿ ನಡೆಯುವ ಈ ಸಭೆಗಳು ಮತ್ತು ಬಜೆಟ್ ಪೂರ್ವ ಸಭೆಗಳು ರಾಜ್ಯದ ಆರ್ಥಿಕ ಕಾರ್ಯಕ್ಷಮತೆಯನ್ನು ಪರಿಶೀಲಿಸಲಿವೆ. ಆದಾಯ ಉತ್ಪಾದನೆಯನ್ನು ನಿರ್ಣಯಿಸುತ್ತವೆ ಮತ್ತು ಹಿಂದಿನ ವರ್ಷದಿಂದ ಹಣಕಾಸಿನ ಅಂತರವನ್ನು ಗುರುತಿಸಲಿವೆ .ಸಭೆಯಲ್ಲಿ ಆದಾಯ ಉತ್ಪಾದನೆ ಮತ್ತು ತೆರಿಗೆ ತಂತ್ರಗಳನ್ನು ರೂಪಿಸಲಿದ್ದು, ತಜ್ಞರ ಅಭಿಪ್ರಾಯವನ್ನೂ ಮುಖ್ಯಮಂತ್ರಿಗಳು ಸಂಗ್ರಹಿಸಲಿದ್ದಾರೆ.
ಈ ಕಾರ್ಯತಂತ್ರಗಳ ಮಧ್ಯೆ, ಸರ್ಕಾರವು ಗ್ಯಾರಂಟಿ ಯೋಜನೆಗಳ ನಿರ್ವಹಿಸುವುದು, ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಪೂರ್ಣಗೊಳಿಸುವುದು, ಬೆಳೆಯುತ್ತಿರುವ ಸಾಲದ ಹೊರೆಯನ್ನು ನಿರ್ವಹಿಸುವುದು ಮತ್ತು ಕಲ್ಯಾಣ ಕಾರ್ಯಕ್ರಮಗಳಿಗೆ ನಿಧಿಯ ಪರಿಣಾಮಕಾರಿ ಹಂಚಿಕೆಯನ್ನು ಖಚಿತಪಡಿಸಿಕೊಳ್ಳುವುದು ಸೇರಿದಂತೆ ಇತರೆ ವಿಚಾರಗಳ ಕುರಿತಂತೆಯೂ ತಂತ್ರಗಳನ್ನು ರೂಪಿಸುವುದರತ್ತ ಗಮನಹರಿಸಲಿದೆ.