ಬಿತ್ತನೆ ಬೀಜ ದರ ಏರಿಕೆ : ಸಿಎಂರಿಂದ ಸ್ಪಷ್ಟನೆ …..!

ಬೆಂಗಳೂರು: 

    2023-24ನೇ ಸಾಲಿನ ಭೀಕರ ಬರಗಾಲದಿಂದಾಗಿ ರಾಜ್ಯದಲ್ಲಿ ಬೀಜೋತ್ಪಾದನೆ ಗಣನೀಯವಾಗಿ ಕುಂಠಿತವಾಗಿದೆ. ಆದಾಗ್ಯೂ, ಇತರ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಬಿತ್ತನೆ ಬೀಜಗಳ ದರ ಕಡಿಮೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

    ಮಹಾರಾಷ್ಟ್ರದಲ್ಲಿ ಸೋಯಾ ಅವರೆ ಬೆಳೆಗೆ ಪ್ರತಿ ಕ್ವಿಂಟಾಲ್‌ಗೆ ಎಲ್‌-1 ದರವು ರೂ.8500/- ನಿಗದಿಯಾಗಿದ್ದು ಕರ್ನಾಟಕದಲ್ಲಿ ಇದು ರೂ.7270/- ನಿಗದಿಯಾಗಿದೆ. ಅದೇ ರೀತಿ, ತೊಗರಿ ಬೆಳೆಗೆ ಮಹಾರಾಷ್ಟ್ರದಲ್ಲಿ ಪ್ರತಿ ಕ್ವಿಂಟಾಲ್‌ಗೆ ರೂ. 25,000/- ಇದ್ದು ಕರ್ನಾಟಕದಲ್ಲಿ ಪ್ರತಿ ಕ್ವಿಂಟಾಲ್‌ಗೆ ರೂ.17,900/- ನಿಗದಿಪಡಿಸಲಾಗಿದೆ. ಹೆಸರು ಮತ್ತು ಜೋಳದ ಬೆಳೆಗೆ ಪ್ರತಿ ಕ್ವಿಂಟಾಲ್‌ಗೆ ಮಹಾರಾಷ್ಟ್ರದಲ್ಲಿ ಕ್ರಮವಾಗಿ ರೂ.23,500/- ರೂ. 14,000/- ಇದ್ದು ಕರ್ನಾಟಕದಲ್ಲಿ ಕ್ರಮವಾಗಿ ರೂ.18,600/- ರೂ.12,500/- ನಿಗದಿಪಡಿಸಲಾಗಿದೆ. ಈ ಹೋಲಿಕೆಯಲ್ಲಿ ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ವಿವಿಧ ಬೆಳೆಗಳ ಬಿತ್ತನೆ ಬೀಜಗಳ ದರಗಳು ಗಣನೀಯವಾಗಿ ಕಡಿಮೆ ಇರುವುದು ಕಂಡುಬರುತ್ತದೆ ಎಂದು ತಿಳಿಸಿದ್ದಾರೆ.

    ಬಿ.ಟಿ. ಹತ್ತಿ ಬಿತ್ತನೆ ಬೀಜಗಳನ್ನು ರಾಜ್ಯ ಸರ್ಕಾರದ ಇಲಾಖಾ ವತಿಯಿಂದ ರಿಯಾಯತಿ ದರದಲ್ಲಿ ವಿತರಣೆ ಮಾಡುತ್ತಿರುವುದಿಲ್ಲ. ಬಿ.ಟಿ. ಹತ್ತಿ ಬಿತ್ತನೆ ಬೀಜಗಳ ಗರಿಷ್ಠ ದರಗಳನ್ನು ಕೇಂದ್ರ ಸರ್ಕಾರದ ವತಿಯಿಂದಲೇ ನಿಗದಿಪಡಿಸಲಾಗುತ್ತದೆ.

    ಈ ಬಾರಿ ಹೆಸರು ಬೆಳೆಯ ಬಿತ್ತನೆ ಬೀಜಗಳ ಎಲ್‌-1 ದರವು ಶೇ.48.5, ಉದ್ದು ಬೆಳೆಯ ದರವು ಶೇ.37.72, ತೊಗರಿ ಬೆಳೆಯ ವಿವಿಧ ತಳಿಗಳ ಬಿತ್ತನೆ ಬೀಜಗಳ ದರದಲ್ಲಿ ಶೇ.28.29 ರಿಂದ 37.69ರಷ್ಟು ಮತ್ತು ಜೋಳದ ಬೆಳೆಯ ಎಲ್‌-1 ದರವು ಶೇ.7.66 ರಿಂದ ಶೇ.33.33ರಷ್ಟು ಹೆಚ್ಚಾಗಿರುತ್ತದೆ. ಬೀಜಗಳ ಖರೀದಿ ದರದಲ್ಲಿನ ಹೆಚ್ಚಳದ ಮೊತ್ತವು ಬೀಜೋತ್ಪಾದನೆಯಲ್ಲಿ ತೊಡಗಿರುವ ರೈತರಿಗೆ ವರ್ಗಾವಣೆಯಾಗಿರುತ್ತದೆ ಎನ್ನುವುದು ಗಮನಾರ್ಹ ಅಂಶವಾಗಿದೆ.

    2024ರ ಮುಂಗಾರು ಹಂಗಾಮಿನ ಸೋಯಾಅವರೆ ಬಿತ್ತನೆ ಬೀಜದ ದರವು 2023ರ ಮುಂಗಾರು ಹಂಗಾಮಿನ ಎಲ್‌-1 ದರಗಳ ಹೋಲಿಕೆಯಲ್ಲಿ ಶೇ.8ರಷ್ಟು ಕಡಿತಗೊಂಡಿರುತ್ತದೆ. ಸೂರ್ಯಕಾಂತಿ ಬಿತ್ತನೆ ಬೀಜದ ದರ ಕಳೆದ ಸಾಲಿನಷ್ಟೇ ಇದ್ದು ಯಾವುದೇ ಬದಲಾವಣೆ ಇರುವುದಿಲ್ಲ ಎಂದಿದ್ದಾರೆ.

    ರೈತರು ತಮ್ಮ ಜಮೀನಿನಲ್ಲಿಯೇ ಬೀಜಗಳನ್ನು ಉತ್ಪಾದನೆ ಮಾಡುತ್ತಾರೆ. ಇದನ್ನು ಕರ್ನಾಟಕ ರಾಜ್ಯ ಬೀಜ ನಿಗಮ ನಿ., ರಾಷ್ಟ್ರೀಯ ರಾಜ್ಯ ಬೀಜ ನಿ., ಕರ್ನಾಟಕ ಎಣ್ಣೆಬೀಜ ಬೆಳೆಗಾರರ ಮಹಾ ಮಂಡಳಿ ಹಾಗೂ ಖಾಸಗಿ ಸಂಸ್ಥೆಗಳು ಕೈಗೊಂಡು ಸರಬರಾಜು ಮಾಡುತ್ತವೆ ಎಂದು ಅವರು ಹೇಳಿದ್ದಾರೆ.

   ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯು ಉತ್ತಮವಾಗಿ ಆಗುತ್ತಿದ್ದು ಕೃಷಿ ಚಟುವಟಿಕೆಗಳು ಗರಿಗೆದರಿವೆ. ಇದೇ ವೇಳೆ, ಬಿತ್ತನೆ ಬೀಜಗಳ ದರಗಳು ಏರಿಕೆಯಾಗಿರುವ ಬಗ್ಗೆ ವಿವಿಧ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದು ಈ ಕುರಿತು ಕೃಷಿ ಇಲಾಖೆಯು ಸ್ಪಷ್ಟೀಕರಣ ನೀಡಿದ್ದು ವಾಸ್ತವ ಸ್ಥಿತಿಯನ್ನು ವಿವರಿಸಿರುವುದಾಗಿ ಮುಖ್ಯಮಂತ್ರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap