ಮುಡಾ ಪ್ರಕರಣ : ಸಿಎಂ ಯಾವುದೇ ತಪ್ಪು ಮಾಡಿಲ್ಲ : ಡಿ ಕೆ ಶಿವಕುಮಾರ್‌

ಬೆಂಗಳೂರು: 

    ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ. ಕಾನೂನಿಗೆ ಗೌರವ ಕೊಟ್ಟು ಲೋಕಾಯುಕ್ತ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಪಾದಿಸಿದ್ದಾರೆ.

   ಮುಡಾದಿಂದ 14 ನಿವೇಶನ ಹಂಚಿಕೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಬಿಎಂ ಪಾರ್ವತಿ ಆರೋಪ ಎದುರಿಸುತ್ತಿದ್ದು, ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ನಂಬರ್ 1 ಆರೋಪಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಸುಮಾರು ಎರಡು ಗಂಟೆಗಳ ಕಾಲ ವಿಚಾರಣೆ ಎದುರಿಸುತ್ತಿದ್ದಾರೆ.

   ಸುದ್ದಿಗಾರರೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ, ವಿಧಾನಸಭಾ ಉಪ ಚುನಾವಣೆಯ ಪೂರ್ವ ಯೋಜಿತ ಪ್ರಚಾರದ ಹೊರತಾಗಿಯೂ, ಸಿಎಂ ಅವರಿಗೆ ನೋಟಿಸ್ ನೀಡಿದ್ದರಿಂದ ಪ್ರಚಾರವನ್ನು ಬಿಟ್ಟು ಲೋಕಾಯುಕ್ತರ ಮುಂದೆ ಹಾಜರಾದರು. ವಿನಾಯಿತಿ ಅಥವಾ ಒಂದು ವಾರ ಕಾಲಾವಕಾಶ ಕೋರಬಹುದಿತ್ತು, ಆದರೆ ಯಾವುದೇ ಅಧಿಕಾರ ದುರ್ಬಳಕೆ ಆರೋಪ ತಪ್ಪಿಸುವ ಉದ್ದೇಶದಿಂದ ಮತ್ತು ಕಾನೂನನ್ನು ಗೌರವಿಸುವ ಉದ್ದೇಶದಿಂದ ಸಿಎಂ ಲೋಕಾಯುಕ್ತ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ತಿಳಿಸಿದರು.

   ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ. ಅವರು ಯಾವುದಾದರೂ ದಾಖಲೆಗಳಿಗೆ ಸಹಿ ಮಾಡಿದ್ದಾರೆಯೇ ಅಥವಾ ಯಾವುದೇ ಅನುಮೋದನೆ ನೀಡಿದ್ದಾರೆಯೇ? ಏನೂ ಇಲ್ಲ, ಆದರೆ ಅವರನ್ನು ವಿಚಾರಣೆಗೆ ಕರೆಯಲಾಗಿತ್ತು. ಹೀಗಾಗಿ ಅವರು ತನಿಖಾ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದರು ಎಂದು ತಿಳಿಸಿದರು. 

   ಸಮನ್ಸ್‌ಗೆ ಪ್ರತಿಕ್ರಿಯೆಯಾಗಿ ಸಿದ್ದರಾಮಯ್ಯ ಅವರು ಲೋಕಾಯುಕ್ತ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದು, ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಟಿ ಜೆ ಉದೇಶ್ ನೇತೃತ್ವದ ತಂಡ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.

   ಈ ಪ್ರಕರಣದಲ್ಲಿ ನಂಬರ್ 2 ಆರೋಪಿಯಾಗಿರುವ ಸಿಎಂ ಪತ್ನಿ ಪಾರ್ವತಿ ಅವರನ್ನು ಅಕ್ಟೋಬರ್ 25 ರಂದು ವಿಚಾರಣೆ ನಡೆಸಲಾಗಿತ್ತು. ಮೈಸೂರು ಮೂಲದ ಲೋಕಾಯುಕ್ತ ಪೊಲೀಸರು ಸೆಪ್ಟೆಂಬರ್ 27 ರಂದು ದಾಖಲಿಸಿದ ಎಫ್‌ಐಆರ್‌ನಲ್ಲಿ ಸಿದ್ದರಾಮಯ್ಯ, ಅವರ ಪತ್ನಿ, ಅವರ ಭಾವ ಮೈದುನ ಮಲ್ಲಿಕಾರ್ಜುನ ಸ್ವಾಮಿ ಮತ್ತು ಜಮೀನು ಮಾಲೀಕ ದೇವರಾಜು ಅವರ ಹೆಸರು ಉಲ್ಲೇಖಿಸಿದ್ದಾರೆ.