ಬೆಂಗಳೂರು:
ನಾಯಕತ್ವ ಬದಲಾವಣೆಗೆ ಕಾಂಗ್ರೆಸ್ ಹೈ ಕಮಾಂಡ್ ಕಸರತ್ತು ನಡೆಸುತ್ತಿದ್ದು, ಇದರ ನಡುವಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಎದುರಾಳಿಗಳ ತಂತ್ರ ವಿಫಲಗೊಳಿಸಲು ತಂತ್ರ ರೂಪಿಸಲು ಮುಂದಾಗಿದ್ದಾರೆ.ಮುಡಾ ಹಗರಣ ಸಂಬಂಧ ಆಗಸ್ಟ್ 29ರಂದು ಹೈಕೋರ್ಟ್ ತೀರ್ಪು ನೀಡಲಿದ್ದು, ನ್ಯಾಯಾಲಯದ ಆದೇಶ ಸಿದ್ದರಾಮಯ್ಯ ವಿರುದ್ಧ ಬಂದಿದ್ದೇ ಆದರೆ, ನಾಯಕತ್ವ ಬದಲಾವಣೆಯಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಹೀಗಾಗಿ ಸಿದ್ದರಾಮಯ್ಯ ಅವರು ಇದೀಗ ಹಿಂದುಳಿದ ವರ್ಗಗಳು ಮತ್ತು SC/ST ಸಮುದಾಯಗಳಿಂದ ಬೆಂಬಲ ಪಡಯಲು ತಂತ್ರ ರೂಪಿಸುತ್ತಿದ್ದಾರೆಂದು ತಿಳಿದುಬಂದಿದೆ.ನಿನ್ನೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಕುರುಬ ಸಮುದಾಯದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದ ಮಠಾಧೀಶರ ಗುಂಪೊಂದು ಒಗ್ಗಟ್ಟು ಪ್ರದರ್ಶಿಸಿತು.
ತಮ್ಮ ಸ್ಥಾನವನ್ನು ಬಿಟ್ಟುಕೊಡಬೇಕಾದಾಗ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕೂಡ ಇದೇ ರೀತಿಯ ಪರಿಸ್ಥಿತಿ ಎದುರಿಸಿದ್ದರು. ಅವರಿಗೆ ಧಾರ್ಮಿಕ ಮುಖಂಡರು ಬೆಂಬಲ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಕೂಡ ನಾಯಕತ್ವನ್ನು ಹಠಾತ್ತನೆ ಕೆಳಗಿಳಿಸದೆ, ಸುಗಮ ರೀತಿಯಲ್ಲಿ ಅಧಿಕಾರ ಹಸ್ತಾಂತರ ಮಾಡುವುದು ಉತ್ತಮ ಎಂದು ರಾಜಕೀಯ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೆಂಬಲ ವ್ಯಕ್ತಪಡಿಸಿ ಶೋಷಿತ ಸಮುದಾಯಗಳ ಒಕ್ಕೂಟ (ದೀನ ದಲಿತರ ವೇದಿಕೆ) ಸದಸ್ಯರು ಮಂಗಳವಾರ ಪ್ರತಿಭಟನೆ ಹಮ್ಮಿಕೊಂಡಿದ್ದು, ರಾಜಭವನಕ್ಕೆ ಮೆರವಣಿಗೆ ನಡೆಸಿ, ನಂತರ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
2023ರ ವಿಧಾನಸಭಾ ಚುನಾವಣೆಗೂ ಮುನ್ನ ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಕಾರ್ಯಕ್ರಮದಂತೆಯೇ ಈ ಪ್ರತಿಭಟನೆ ಕೂಡ ದೊಡ್ಡ ರೀತಿಯಲ್ಲಿ ನಡೆಯಲಿದೆ. ನಾವು ಮತ್ತೆ ಸಿದ್ದರಾಮಯ್ಯನವರ ಬೆನ್ನಿಗೆ ನಿಲ್ಲುತ್ತೇವೆಂದು ಒಕ್ಕೂಟದ ಮುಖಂಡ ರಾಮಚಂದ್ರಪ್ಪ ಹೇಳಿದ್ದಾರೆ,
ಇದೇ ವೇಳೆ ರಾಜ್ಯಪಾಲರ ವಿರುದ್ಧ ಕಿಡಿಕಾರಿದ ಅವರು, ಸಿಎಂ ವಿರುದ್ಧ ಕಾನೂನು ಕ್ರಮ ಜರುಗಿಸಲು ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಅನುಮತಿ ನೀಡಿರುವುದು ಕಾನೂನುಬಾಹಿರ ಮತ್ತು ರಾಜಕೀಯ ಪ್ರೇರಿತ. ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾದರೂ, ಹೈಕೋರ್ಟ್ ಆದೇಶ ತಮ್ಮ ವಿರುದ್ಧ ಬಂದರೂ ಸಿದ್ದರಾಮಯ್ಯ ರಾಜೀನಾಮೆ ನೀಡಬಾರದು ಎಂದು ಆಗ್ರಹಿಸಿದ್ದಾರೆ.
ಆದರೆ, ಕಾಂಗ್ರೆಸ್ ಹೈಕಮಾಂಡ್ ಇದರ ವಿರುದ್ಧವಿದೆ. ಹೈಕೋರ್ಟ್ ಆದೇಶ ಸಿದ್ದರಾಮಯ್ಯ ವಿರುದ್ಧ ಬಂದಿದ್ದೇ ಆದರೆ, ಸಿಎಂ ಸ್ಥಾನಕ್ಕೆ ರಾಜೀನಾಮೆಗೆ ಸೂಚಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ ಸಿದ್ದರಾಮಯ್ಯ ಅವರು ಸುಪ್ರೀಕೋರ್ಟ್ ಮೊರೆ ಹೋಗಲು ಕಾನೂನು ಬೆಂಬಲ ನೀಡಲು ನಿರ್ಧರಿಸಿದ್ದು, ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ನಿರ್ಧಾರ ಕೈಗೊಳ್ಳದಂತೆ ಸಿದ್ದರಾಮಯ್ಯ ಅವರಿಗೆ ಸೂಚಿಸಿದೆ ಎಂದು ತಿಳಿದುಬಂದಿದೆ.
ಈ ನಡುವೆ ಸಚಿವ ಹೆಚ್.ಸಿ.ಮಹದೇವಪ್ಪ ಅವರು ಮಾತನಾಡಿ, ಕಾಂಗ್ರೆಸ್‌ನಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಮುಖ್ಯಮಂತ್ರಿ ಸ್ಥಾನ ಕೂಡ ಖಾಲಿಯಿಲ್ಲ. ಹೀಗಾಗಿ ಯಾರೂ ಪೈಪೋಟಿಗೆ ನಿಂತಿಲ್ಲ ಎಂದು ಹೇಳಿದ್ದಾರೆ.ಕಳೆದ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ,ಶಿವಕುಮಾರ್ ಅವರು ನವದೆಹಲಿಗೆ ಭೇಟಿ ನೀಡಿ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದರು.
ಭೇಟಿ ವೇಳೆ ರಾಜ್ಯಪಾಲರ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವಂತೆ ಹೈಕಮಾಂಡ್ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.ಏತನ್ಮಧ್ಯೆ ಮಹಾರಾಷ್ಟ್ರ, ಜಾರ್ಖಂಡ್ ನಂತರ ಜಮ್ಮು-ಕಾಶ್ಮೀರ, ಹರಿಯಾಣ ವಿಧಾನಸಭೆ ಚುನಾವಣೆ ಘೋಷಣೆಯಾಗಿರುವುದರಿಂದ ಹೈಕಮಾಂಡ್ ಎಚ್ಚರಿಕೆಯ ಹೆಜ್ಜೆ ಇಡಲು ನಿರ್ಧರಿಸಿದ ಎನ್ನಲಾಗುತ್ತಿದೆ. ಚುನಾವಣೆ ವೇಳೆ ಕರ್ನಾಟಕದಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಹರಿಹಾಯಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.