ಬೆಂಗಳೂರು:
ರೈತರಿಂದ ಹೆಚ್ಚು ಹಾಲು ಬರುತ್ತಿದೆ, ರೈತರಿಂದ ಹಾಲು ಖರೀದಿಸುವುದಿಲ್ಲ ಎಂದು ಹೇಳಲು ಆಗುವುದಿಲ್ಲ, ರಾಜ್ಯದ ರೈತರಿಗೆ ಅನುಕೂಲವಾಗಲು ನಂದಿನಿ ಪ್ಯಾಕೆಟ್ ನ ಪ್ರಮಾಣವನ್ನು ಹೆಚ್ಚಿಸಿ ಮಾರುಕಟ್ಟೆಗೆ ಬಿಡುತ್ತಿದ್ದೇವೆ. ಹೆಚ್ಚುವರಿ 50 ಎಂ ಎಲ್ ಗೆ 2 ರೂಪಾಯಿ ಹೆಚ್ಚು ತೆಗೆದುಕೊಳ್ಳುತ್ತಿದ್ದೇವೆ ಹೊರತು ಹಾಲಿನ ದರ ಹೆಚ್ಚಳವಾಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ.
ಹಾಲಿನ ದರ ಹೆಚ್ಚಳವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ ಎಂದು ಸುದ್ದಿಗಾರರು ಇಂದು ವಿಧಾನ ಸೌಧದಲ್ಲಿ ಸಿಎಂ ಸಿದ್ದರಾಮಯ್ಯನವರನ್ನು ಪ್ರಶ್ನಿಸಿದಾಗ, ಯಾರು ಹಾಲಿನ ದರ ಹೆಚ್ಚಳ ಮಾಡಿದ್ದಾರೆ, ಮೊದಲಿದ್ದಷ್ಟೇ ಹಾಲಿನ ದರವಿದೆ, ಹಾಲಿನ ದರ ಏರಿಕೆ ಮಾಡಿಲ್ಲ, ನೀವು ಏನೇನೋ ಬರೆದು ಜನರಿಗೆ ತಪ್ಪು ಮಾಹಿತಿ ನೀಡಿ ಅವರ ದಾರಿ ತಪ್ಪಿಸಬೇಡಿ ಎಂದು ಸಿಡಿಮಿಡಿಗೊಂಡರು.
ಕಳೆದ ವರ್ಷ ಕೆಎಂಎಫ್ ಗೆ ರೈತರಿಂದ 90 ಲಕ್ಷ ಲೀಟರ್ ಹಾಲು ಬರುತ್ತಿತ್ತು. ಈಗ 99 ಲಕ್ಷ ಲೀಟರ್ ಬರುತ್ತಿದೆ, ರೈತರು ನೀಡುವ ಹಾಲನ್ನು ನೀವು ತರಬೇಡಿ, ತೆಗೆದುಕೊಂಡು ಹೋಗಿ ಎಂದು ಹೇಳಕ್ಕೆ ಆಗತ್ತಾ, ಅಥವಾ ರೈತರಿಂದ ಖರೀದಿಸಿದ ಹಾಲನ್ನು ರೋಡ್ ಗೆ ಚೆಲ್ಲಕ್ಕೆ ಆಗತ್ತಾ, ಹಾಲು ಹೆಚ್ಚು ಬರುತ್ತಿರುವುದರಿಂದ ಪ್ಯಾಕೆಟ್ ನ ಪ್ರಮಾಣ ಹೆಚ್ಚು ಮಾಡಿ ಗ್ರಾಹಕರಿಗೆ ನೀಡುತ್ತಿದ್ದೇವೆ, ಹೆಚ್ಚುವರಿ 50 ಎಂಎಲ್ ಗೆ 2 ರೂಪಾಯಿ ಹೆಚ್ಚು ತೆಗೆದುಕೊಳ್ಳುತ್ತಿದ್ದಾರಷ್ಟೆ, ಗ್ರಾಹಕರಿಂದ ಸಿಕ್ಕಿದ ಹಣವನ್ನು ರೈತರಿಗೇ ನೀಡುತ್ತಿದ್ದೇವೆ.
ರೈತರಿಗೆ ಇನ್ನು ಮುಂದೆ ಪ್ರತಿ ಲೀಟರ್ ಗೆ 2 ರೂಪಾಯಿ 20 ಪೈಸೆ ಹೆಚ್ಚಿಗೆ ಸಿಗುತ್ತದೆ ಎಂದರು. ಹಾಲಿನ ದರ ಹೆಚ್ಚಾಯಿತೆಂದು ಹೊಟೇಲ್ ಗಳಲ್ಲಿ ಕಾಫಿ, ಟೀ ಬೆಲೆಯನ್ನು ಹೆಚ್ಚಿಸಿಲ್ಲವಲ್ಲ ಎಂದು ಕೂಡ ಸಿದ್ದರಾಮಯ್ಯ ಹೇಳಿದರು.
