ಆರ್.ವಿ. ದೇವರಾಜ್ ನಿಧನ ಪಕ್ಷಕ್ಕೆ ತುಂಬಲಾರದ ನಷ್ಟ: ಸಿಎಂ ಸಂತಾಪ

ಬೆಂಗಳೂರು

        ಎಂಎಲ್‌ಎ ಹಾಗೂ ಎಂಎಲ್‌ಸಿ ಆಗಿ ಸೇವೆ ಸಲ್ಲಿಸಿದ್ದ ಆರ್.ವಿ. ದೇವರಾಜ್  ಅವರು ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದು, ಅವರ ನಿಧನದಿಂದ ಪಕ್ಷಕ್ಕೆ ತುಂಬಲಾರದ ನಷ್ಟವುಂಟಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ತಿಳಿಸಿದರು. ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಂಗಳವಾರ ಮಾತನಾಡಿದ ಅವರು, ಎಂಎಲ್‌ಎ ಹಾಗೂ ಎಂಎಲ್‌ಸಿ ಆಗಿ ಸೇವೆ ಸಲ್ಲಿಸಿದ್ದ ಆರ್.ವಿ. ದೇವರಾಜ್ ಅವರು ನಿಧನರಾಗಿದ್ದಾರೆ. ನಾಳೆಯೇ ಅವರ ಜನ್ಮದಿನವಾಗಿದ್ದರಿಂದ, ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಹೃದಯಾಘಾತಕ್ಕೆ ಒಳಗಾಗಿ ನಿಧನರಾಗಿರುವುದು ಅತ್ಯಂತ ನೋವಿನ ಸಂಗತಿ ಎಂದು ಹೇಳಿದರು.

      ದೇವರಾಜು ಅವರು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. ಅವರ ಅಗಲಿಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವುಂಟಾಗಿದೆ. ಇತ್ತೀಚೆಗೆ ನನ್ನನ್ನು ಭೇಟಿಯಾಗಿದ್ದ ದೇವರಾಜು ಅವರು ಕೆಲವು ವಿಚಾರಗಳ ಬಗ್ಗೆ ಚರ್ಚಿಸಿದ್ದರು. ದೇವರಾಜ್ ಅವರ ಆತ್ಮಕ್ಕೆ ಶಾಂತಿ ದೊರಕಲಿ ಹಾಗೂ ಅವರ ಕುಟುಂಬವರ್ಗ ಹಾಗೂ ಅಭಿಮಾನಿ ಬಳಗಕ್ಕೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು. 

     ಶಾಸಕರೊಂದಿಗೂ ಔತಣಕೂಟ ಏರ್ಪಡಿಸಿ ಒಗ್ಗಟ್ಟಿನ ಸೂತ್ರವನ್ನು ಪಠಿಸಲಾಗುವುದೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಸಿಎಲ್‌ಪಿ ಸಭೆ ಸಂದರ್ಭದಲ್ಲಿ ಶಾಸಕರೊಂದಿಗೆ ಔತಣಕೂಟ ಏರ್ಪಡಿಸಲಾಗುವುದು ಎಂದರು. 

     ಸಿಎಂ ಮತ್ತು ಡಿಸಿಎಂ ಬಗ್ಗೆ ಬ್ರದರ್ಸ್ ಎಂಬ ಮಾತು ಮುನ್ನಲೆಗೆ ಬಂದಿರುವ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ, ಒಂದೇ ಪಕ್ಷದಲ್ಲಿರುವ ನಾವು ಎಂದಿಗೂ ಬ್ರದರ್ಸ್. ಒಂದೇ ಪಕ್ಷ ಸಿದ್ಧಾಂತವನ್ನು ಹೊಂದಿರುವ ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡುವ ಜತೆಗೆ 2028ರ ವಿಧಾನಸಭಾ ಚುನಾವಣೆಯನ್ನೂ ಸಹ ಒಟ್ಟಿಗೆ ಎದುರಿಸಿ, ರಾಜ್ಯದಲ್ಲಿ ಪುನಃ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲಿದ್ದೇವೆ. ನಮ್ಮ ನಡುವೆ ಯಾವ ಭಿನ್ನಾಭಿಪ್ರಾಯವೂ ಇಲ್ಲ, ರಾಜ್ಯದ ಒಳಿತಿಗಾಗಿ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು. 

    ನಾಯಕತ್ವ ಬದಲಾವಣೆಯ ಬಗ್ಗೆ ಶಾಸಕರ ನಿಲುವುಗಳ ಬಗ್ಗೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್‌ನ ಯಾವ ಶಾಸಕರಲ್ಲಿಯೂ ಭೇದವಿಲ್ಲ. ಶಾಸಕರು ತಮ್ಮ ಅಭಿಪ್ರಾಯಗಳನ್ನು ನೀಡಿದ್ದಾರಷ್ಟೇ. ಕಾಂಗ್ರೆಸ್‌ನ ಎಲ್ಲ ಶಾಸಕರೂ ಅಧಿವೇಶನದಲ್ಲಿ ಭಾಗವಹಿಸಿ, ವಿಪಕ್ಷಗಳನ್ನು ಒಗ್ಗಟ್ಟಿನಿಂದ ಎದುರಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. 

    ಸಚಿವಸಂಪುಟ ಪುನಾರಚನೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಸಚಿವ ಸಂಪುಟ ಪುನರ್ರಚನೆ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನಿಸಬೇಕಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

Recent Articles

spot_img

Related Stories

Share via
Copy link