ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ: ರಾಷ್ಟ್ರಪತಿ ಭೇಟಿಗೆ ಕಾಂಗ್ರೆಸ್ ಚಿಂತನೆ

ಬೆಂಗಳೂರು: 

   ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಸೈಟ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ವಿರುದ್ಧ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ದೂರು ನೀಡಲು ಆಡಳಿತಾರೂಢ ಕಾಂಗ್ರೆಸ್ ಮುಂದಾಗಿದೆ.

   ಕಾಂಗ್ರೆಸ್ ಶಾಸಕರ ನಿಯೋಗ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ, ರಾಜ್ಯಪಾಲರ ವಿರುದ್ಧ ದೂರು ನೀಡಲಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ ಅವರು ಬುಧವಾರ ಹೇಳಿದ್ದಾರೆ.

   ರಾಷ್ಟ್ರಪತಿ ಭೇಟಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಯೋಜನೆ ರೂಪಿಸಲಾಗಿದೆ. ಆದರೆ ನ್ಯಾಯಾಲಯದ ಬೆಳವಣಿಗೆಗಳನ್ನು ಪರಿಗಣಿಸಿ ಮುಂದಿನ ಕ್ರಮದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಪರಮೇಶ್ವರ್ ತಿಳಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಮುಡಾದಿಂದ ಪರಿಹಾರದ ನಿವೇಶನ ಹಂಚಿಕೆಯಲ್ಲಿ ನಡೆದಿರುವ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಮತ್ತು ಕಾನೂನು ಕ್ರಮ ಜರುಗಿಸಲು ರಾಜ್ಯಪಾಲರು ಆಗಸ್ಟ್ 16ರಂದು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದರು.

   ಮುಖ್ಯಮಂತ್ರಿಗಳು ರಾಜ್ಯಪಾಲರ ಆದೇಶದ ಕಾನೂನುಬದ್ಧತೆಯನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ವಿಚಾರಣೆಯನ್ನು ಆಗಸ್ಟ್ 29 ಕ್ಕೆ ಮುಂದೂಡಲಾಗಿದೆ.ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್ ಅವರು, ನ್ಯಾಯಾಲಯದಲ್ಲಿನ ಬೆಳವಣಿಗೆಗಳು ಮತ್ತು ನಿರ್ಧಾರಗಳನ್ನು ಪರಿಗಣನೆಗೆ ತೆಗೆದುಕೊಂಡು ಎಲ್ಲಾ ಶಾಸಕರು ರಾಷ್ಟ್ರಪತಿಗಳನ್ನು ಭೇಟಿ ಮಾಡುವ ಬಗ್ಗೆ ಚರ್ಚಿಸಲಾಗಿದೆ.

   “ಆಗಸ್ಟ್ 31 ರಂದು, ರಾಜಭವನ ಚಲೋವನ್ನು ಯೋಜಿಸಲಾಗಿದೆ … ನಾವು ರಾಜ್ಯಪಾಲರನ್ನು ಭೇಟಿ ಮಾಡುವ ಮತ್ತು ರಾಜ್ಯಪಾಲರಿಗೆ ಮನವಿ ಪತ್ರವನ್ನು ಸಲ್ಲಿಸುತ್ತೇವೆ” ಎಂದರು.

   ನಾಳೆ ಹೈಕೋರ್ಟ್‌ನಲ್ಲಿ ಮುಖ್ಯಮಂತ್ರಿಗಳ ಅರ್ಜಿ ವಿಚಾರಣೆಗೆ ಬರಲಿದ್ದು, ರಾಜ್ಯಪಾಲರ ಆದೇಶವನ್ನು ಕೋರ್ಟ್ ಪರಿಗಣಿಸುವುದಿಲ್ಲ ಎಂಬ ನಿರೀಕ್ಷೆ ಇದೆ‌. ಸಿಎಂ ಸಿದ್ದರಾಮಯ್ಯ ಅವರ ಸಹಿ, ಯಾವುದೇ ರೀತಿಯ ದಾಖಲೆಗಳಿಲ್ಲ. ರಿಜಿಸ್ಟ್ರೇಷನ್ ಅಲ್ಲಿಯೂ ಸಹ ಅವರ ಹೆಸರು ಉಲ್ಲೇಖವಾಗಿಲ್ಲ. ಇದೆಲ್ಲವನ್ನು ನ್ಯಾಯಾಲಯ ಗಮನಿಸಿಯೇ ತೀರ್ಮಾನ ಕೊಡುತ್ತದೆ ಎಂದುಕೊಂಡಿದ್ದೇನೆ ಎಂದರು.

   ಒಂದು ವೇಳೆ ಆಗಷ್ಟ್ 29ರಂದು ನ್ಯಾಯಾಲಯದಲ್ಲಿ ಸಿದ್ದರಾಮಯ್ಯ ವಿರುದ್ಧವೇ ತೀರ್ಪು ಬಂದರೆ ಮುಂದಿನ ಕ್ರಮದ ಕುರಿತು ಹೈಕಮಾಂಡ್‌ ಜತೆ ಚರ್ಚೆ ನಡೆದಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ‘‘ಒಮ್ಮೆ ಏನೆಲ್ಲಾ ಬೆಳವಣಿಗೆಗಳು ನಡೆಯುತ್ತವೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಕೋರ್ಟ್ ಏನೇ ತೀರ್ಪು ಕೊಟ್ಟರು, ಮುಖ್ಯಮಂತ್ರಿಯವರ ಜೊತೆ ಹೈಕಮಾಂಡ್ ನಿಲ್ಲಲಿದೆ. ನಾವೆಲ್ಲರು ಸಹ ಸಿಎಂ ಜೊತೆ ಇರುತ್ತೇವೆ. 29ರ ನಂತರದ ಬೆಳವಣಿಗೆ ಬಗ್ಗೆ ನೋಡೋಣ. ಕೋರ್ಟ್ ತೀರ್ಪು ಏನು ಬರುತ್ತದೆ ಎಂಬುದರ ಮೇಲೆ ಚರ್ಚೆ ಆಗಲಿದೆ ಎಂದರು.

   ಇತ್ತೀಚೆಗಷ್ಟೇ ದೆಹಲಿಗೆ ಭೇಟಿ ನೀಡಿದ್ದ ಪರಮೇಶ್ವರ ಅವರು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಜತೆ ಸುದೀರ್ಘ ಚರ್ಚೆ ನಡೆಸಿದ್ದರು.ಪರಮೇಶ್ವರ ಅವರು ಸಿಎಂ ಆಗಬಹುದು ಎಂಬ ಊಹಾಪೋಹಗಳ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಆ ಪ್ರಶ್ನೆ ಈಗ ಉದ್ಭವಿಸುವುದಿಲ್ಲ. ಈ ವಿಷಯ ಚರ್ಚೆಗೆ ಬಂದಿಲ್ಲ. ಪಕ್ಷದ ವಿಚಾರದಲ್ಲಿ ಅವರು ನನಗೆ ಏನು ಹೇಳಬೇಕು ಅದನ್ನು ಹೇಳಿದ್ದಾರೆ. ಅದನ್ನು ಬಿಟ್ಟು ಬೇರೆ ಯಾವ ವಿಚಾರವೂ ಚರ್ಚೆಯಾಗಿಲ್ಲ ಎಂದರು.

   ಮುಡಾ ಹಗರಣದ ಸಂಬಂಧ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ರಾಷ್ಟ್ರ ಮಟ್ಟದಲ್ಲಿ ಪ್ರತಿಭಟನೆ ಯೋಜಿಸುತ್ತಿದೆ ಎಂದು ವರದಿಯಾಗಿದೆ. ಒಂದು ವೇಳೆ ಬಿಜೆಪಿ ರಾಷ್ಟ್ರ ಮಟ್ಟದಲ್ಲಿ ಪ್ರತಿಭಟನೆ ನಡೆಸಿದರೆ ನಾವು ರಾಷ್ಟ್ರ ಮಟ್ಟದಲ್ಲಿ ಅದನ್ನು ಎದುರಿಸುತ್ತೇವೆ. ಆದರೆ ಇದು ಪಕ್ಷದ ಮಟ್ಟದಲ್ಲಿ ಮಾಡಬೇಕೇ ಅಥವಾ ಇಂಡಿಯಾ ಮೈತ್ರಿಕೂಟದ ಪಾಲುದಾರರನ್ನು ಸೇರಿಸಿಕೊಳ್ಳಬೇಕೇ ಎಂಬ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಅವರು ಹೇಳಿದರು.

   ಆ.31ರಂದು ಕಾಂಗ್ರೆಸ್ ಶಾಸಕರು ಮತ್ತು ಸಂಸದರು ರಾಜಭವನಕ್ಕೆ ಪಾದಯಾತ್ರೆ ನಡೆಸಿ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಿದ್ದು, ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಬಾಕಿ ಇರುವ ಇತರ ಮನವಿಗಳ ಬಗ್ಗೆ ಕ್ರಮಕೈಗೊಳ್ಳುವಂತೆ ಮನವಿ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಂಗಳವಾರ ಹೇಳಿದ್ದಾರೆ.

Recent Articles

spot_img

Related Stories

Share via
Copy link
Powered by Social Snap