ಬೆಂಗಳೂರು
ನಮ್ಮ ದೇಶದಲ್ಲಿ ಉಗ್ರ ಚಟುವಟಿಕೆ ಇರಬಾರಬಾರದು. ಭಯೋತ್ಪಾದನೆಯನ್ನು ಸಂಪೂರ್ಣ ಮಟ್ಟ ಹಾಕಬೇಕು. ಕೇಂದ್ರ ಸರ್ಕಾರ ಎಲ್ಲಾ ಉಗ್ರರನ್ನು ನಾಶಪಡಿಸುವ ಕೆಲಸ ಮಾಡಬೇಕು. ಕೇಂದ್ರ ಸರ್ಕಾರದ ಜತೆ ನಾವೆಲ್ಲ ಇದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಪಹಲ್ಗಾಂನಲ್ಲಿ ಉಗ್ರ ದಾಳಿಯಲ್ಲಿ ಮೃತಪಟ್ಟ ಭರತ್ ಭೂಷಣ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅಮಾನೀಯವಾದ ಕೃತ್ಯ ಇದು, ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದರು.
ಭರತ್ ಭೂಷಣ್ ಅವರನ್ನು ಹಾಡಹಗಲೇ ಹೆಂಡತಿ, ಮಗುವಿನ ಕಣ್ಣೇದುರೇ ಶೂಟ್ ಮಾಡಿ ಹತ್ಯೆ ಮಾಡಿದ್ದಾರೆ. ಈ ರೀತಿಯ ಘಟನೆ ಮತ್ತೆ ಮರುಕಳಿಸದಂತೆ ನೋಡಿಕೊಳ್ಳಬೇಕು. ನಮ್ಮ ದೇಶದಲ್ಲಿ ಉಗ್ರರು ಇರದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
ಭಯೋತ್ಪಾದಕರ ದಾಳಿಯಲ್ಲಿ ಭರತ್ ಭೂಷಣ್, ಮಂಜುನಾಥ್ ಮೃತಪಟ್ಟಿದ್ದಾರೆ. ಅವರ ಕುಟುಂಬದವರಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಅಲ್ಲದೆ, ಭರತ್ ಭೂಷಣ್, ಮಂಜುನಾಥ್ ಅಂತ್ಯಕ್ರಿಯೆಗೆ ಸರ್ಕಾರದಿಂದ ವ್ಯವಸ್ಥೆ ಮಾಡಲಾಗುತ್ತದೆ. ಭರತ್ ಅಂತಿಮ ಸಂಸ್ಕಾರದಲ್ಲಿ ರಾಮಲಿಂಗಾರೆಡ್ಡಿ ಭಾಗಿಯಾಗುತ್ತಾರೆ. ಮಂಜುನಾಥ್ ಅಂತ್ಯಕ್ರಿಯೆಯಲ್ಲಿ ಮಧು ಬಂಗಾರಪ್ಪ ಭಾಗಿಯಾಗುತ್ತಾರೆ ಎಂದು ಅವರು ಹೇಳಿದರು. ಬಹುಶಃ ಇದು ಕೇಂದ್ರ ಸರ್ಕಾರ ಗುಪ್ತಚರ ಇಲಾಖೆಯ ವೈಫಲ್ಯ ಆಗಿರಬಹುದು. ಹಾಗೆಂದು, ಮೃತರ ಕುಟುಂಬದದ ಜೊತೆ ಯಾವಾಗಲೂ ರಾಜ್ಯ ಸರ್ಕಾರ ಇರುತ್ತದೆ. ಕಾಶ್ಮೀರದಲ್ಲಿ ಸಿಲುಕಿದ ಇನ್ನುಳಿದವರನ್ನು ಕರೆತರಲು ಸಚಿವ ಸಂತೋಷ್ ಲಾಡ್ರನ್ನು ಕಳುಹಿಸಿದ್ದೇನೆ. 170ಕ್ಕೂ ಹೆಚ್ಚು ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಮುಖ್ಯಮಂತ್ರಿಗಳು ಬಂದ ಕೂಡಲೇ, ‘ತಾತಾ’ ಎಂದ ಭರತ್ ಭೂಷಣ್ ಮಗುವಿನ ಕೈಹಿಡಿದ ಸಿದ್ದರಾಮಯ್ಯ ಸಾಂತ್ವನ ಹೇಳಿದರು. ಕುಟುಂಬಸ್ಥರ ಬಳಿ ಸಿದ್ದರಾಮಯ್ಯ ಮಾಹಿತಿ ಪಡೆದರು. ಇದೇ ವೇಳೆ, ಮಗು ಇದೆ ಎಂದರೂ ಕೇಳಲಿಲ್ಲ ಸರ್ ಎಂದು ಭರತ್ ಪತ್ನಿ ಕಣ್ಣೀರು ಹಾಕಿದರು. ಅವರಿಗೆ ಸಾಂತ್ವನ ಹೇಳಿದ ಸಿದ್ದರಾಮಯ್ಯ, ನಿಮ್ಮ ಜತೆ ಸರ್ಕಾರ ಇದೆ ಎಂದು ಧೈರ್ಯದ ಮಾತುಗಳನ್ನಾಡಿದರು.
