ಚೆನ್ನೈ:
ಇನ್ನೂ 30 ವರ್ಷಗಳ ಕಾಲ 1971 ರ ಜನಸಂಖ್ಯೆಯನ್ನೇ ಆಧಾರವಾಗಿಟ್ಟುಕೊಂಡು ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ ಮಾಡಬೇಕು ಮತ್ತು ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಭರವಸೆ ನೀಡಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಬುಧವಾರ ಒತ್ತಾಯಿಸಿದ್ದಾರೆ.
2026ರ ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ ಪರಿಣಾಮದ ಕುರಿತು ಚರ್ಚಿಸಲು ಇಂದು ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ 1971ರ ಜನಸಂಖ್ಯೆಯನ್ನೇ ಆಧಾರವಾಗಿಟ್ಟುಕೊಂಡು ಕ್ಷೇತ್ರ ಪುನರ್ವಿಂಗಡಣೆ ಮಾಡಬೇಕು ಎಂದು ಸ್ಟಾಲಿನ್ ಅವರು ನಿರ್ಣಯ ಮಂಡಿಸಿದರು.
ದಕ್ಷಿಣ ರಾಜ್ಯಗಳು ಮಾಡಿದಂತೆ ಭಾರತದ ಎಲ್ಲಾ ರಾಜ್ಯಗಳು ಪರಿಣಾಮಕಾರಿ ಜನಸಂಖ್ಯಾ ನಿಯಂತ್ರಣ ಕ್ರಮಗಳನ್ನು ಜಾರಿಗೆ ತರಲು ಇದು ಪ್ರೋತ್ಸಾಹಿಸುತ್ತದೆ ಎಂದು ಸ್ಟಾಲಿನ್ ಹೇಳಿದ್ದಾರೆ. 1971 ರ ಜನಸಂಖ್ಯೆಯು ಕ್ಷೇತ್ರ ಪುನರ್ವಿಂಗಡಣೆಗೆ ಆಧಾರವಾಗಿ ಮುಂದುವರಿಯುತ್ತದೆ ಎಂದು ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು 2000 ರಲ್ಲಿ ಸಂಸತ್ತಿನಲ್ಲಿ ಭರವಸೆ ನೀಡಿದ್ದರು ಎಂದು ತಮಿಳುನಾಡು ಸಿಎಂ ನೆನಪಿಸಿಕೊಂಡರು.
ಇಂದು ಮಧ್ಯಾಹ್ನ 12.30 ಕ್ಕೆ ಸರ್ವಪಕ್ಷ ಸಭೆ ಆರಂಭವಾಗಿದ್ದು, ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಿದ್ದಾರೆ. ಸಿಎಂ ಸ್ಟಾಲಿನ್ ತಮ್ಮ ಆರಂಭಿಕ ಭಾಷಣದಲ್ಲಿ ಪ್ರಸ್ತಾಪಿಸಿದ ನಿರ್ಣಯಗಳನ್ನು ಸಭೆಯಲ್ಲಿ ಇನ್ನೂ ಅಂಗೀಕರಿಸಬೇಕಾಗಿದೆ.
1971 ರ ಜನಸಂಖ್ಯೆಗೆ ಅನುಗುಣವಾಗಿ ಸಂಸದೀಯ ಕ್ಷೇತ್ರಗಳನ್ನು ಹೆಚ್ಚಿಸಿದರೆ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳ ಸಂಸತ್ತಿನ ಉಭಯ ಸದನಗಳ ಪ್ರಸ್ತುತ ಪ್ರಾತಿನಿಧ್ಯವನ್ನು ಉಳಿಸಿಕೊಳ್ಳಲು ಅಗತ್ಯವಾದ ಸಾಂವಿಧಾನಿಕ ತಿದ್ದುಪಡಿಗಳನ್ನು ತರಬೇಕೆಂದು ಸ್ಟಾಲಿನ್ ಮತ್ತೊಂದು ನಿರ್ಣಯ ಮಂಡಿಸಿದ್ದಾರೆ.ಈ ಬೇಡಿಕೆಗಳನ್ನು ತಮಿಳುನಾಡಿನ ಕನಿಷ್ಠ ಬೇಡಿಕೆಗಳಾಗಿ ಪ್ರಸ್ತಾಪಿಸಲಾಗುತ್ತಿದೆ ಎಂದು ಅವರು ಹೇಳಿದರು.
ಕ್ಷೇತ್ರ ಪುನರ್ವಿಂಗಡಣೆ ನಿರ್ಣಯಕ್ಕೆ ಸಂಬಂಧಿಸಿದ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಮತ್ತು ಈ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ವಿವಿಧ ಪಕ್ಷಗಳ ದಕ್ಷಿಣ ಭಾರತದ ರಾಜ್ಯಗಳ ಸಂಸದರೊಂದಿಗೆ “ಜಂಟಿ ಕ್ರಿಯಾ ಗ್ರೂಪ್” ರಚಿಸುವ ಪ್ರಸ್ತಾಪವನ್ನು ಸ್ಟಾಲಿನ್ ಮುಂದಿಟ್ಟಿದ್ದಾರೆ.
“ತಮಿಳುನಾಡಿನ ಈ ನಿರ್ಣಾಯಕ ವಿಷಯದ ಬಗ್ಗೆ ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಒಗ್ಗಟ್ಟಿನಿಂದ ಬೆಂಬಲಿಸಬೇಕೆಂದು ನಾನು ಮನವಿ ಮಾಡುತ್ತೇನೆ. ಎಲ್ಲಾ ರಾಜಕೀಯ ಪಕ್ಷಗಳು ಈ ನಿಟ್ಟಿನಲ್ಲಿ ಪಕ್ಷಾತೀತವಾಗಿ ಧ್ವನಿ ಎತ್ತಬೇಕು ಎಂದಿದ್ದಾರೆ.
