ನಾ ಡಿಸೋಜಾ ನಿಧನ : ಸಿಎಂ ಸೇರಿ ವಿವಿಧ ಗಣ್ಯರಿಂದ ಸಂತಾಪ….!

ಬೆಂಗಳೂರು:

    ನಾಡಿನ ಹಿರಿಯ ಸಾಹಿತಿ ನಾ. ಡಿಸೋಜ ಅವರು ವಿಧಿವಶರಾಗಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಬಿಜೆಪಿ ಹಿರಿಯ ನಾಯಕ ಬಿ,ಎಸ್.ಯಡಿಯೂರಪ್ಪ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

    ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಾಡಿನ ಹಿರಿಯ ಸಾಹಿತಿ ನಾ.ಡಿಸೋಜಾ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಸಾಹಿತ್ಯ ಕೃಷಿಯ ಜೊತೆಯಲ್ಲಿ ಪರಿಸರ ರಕ್ಷಣೆಯ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ನಾ.ಡಿಸೋಜಾ ಅವರು ಜನಪರ ಕಾಳಜಿಯ ಲೇಖಕ. ನಾ.ಡಿಸೋಜಾ ಅವರ ಕುಟುಂಬ ಮತ್ತು ಅಭಿಮಾನಿಗಳ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆಂದು ಹೇಳಿದ್ದಾರೆ.

   ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಪೋಸ್ಟ್ ಮಾಡಿ, ಹಿರಿಯ ಸಾಹಿತಿ ಡಾ. ನಾ ಡಿಸೋಜ ದೈವಾಧೀನರಾದ ವಿಷಯ ತಿಳಿದು ಅತೀವ ದುಃಖವಾಗಿದೆ. ವಿಶೇಷವಾಗಿ ಮಲೆನಾಡಿನ ಸೊಬಗು, ಸಂಸ್ಕೃತಿಗಳಿಗೆ ಅಕ್ಷರ ರೂಪ ನೀಡುತ್ತಿದ್ದ ನಾ ಡಿಸೋಜ ಅವರ ನಿಧನದಿಂದ ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ನಷ್ಟವುಂಟಾಗಿದೆ. ಅವರ ಆತ್ಮಕ್ಕೆ ಸದ್ಗತಿ ಪ್ರಾರ್ಥಿಸುತ್ತಾ, ಕುಟುಂಬದವರಲ್ಲಿ ತೀವ್ರ ಸಂತಾಪ ಸಲ್ಲಿಸುತ್ತೇನೆಂದು ಹೇಳಿದ್ದಾರೆ.

   ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು ಪೋಸ್ಟ್ ಮಾಡಿ, ಕನ್ನಡ ಸಾರಸ್ವತ ಲೋಕದ ಬಹುದೊಡ್ಡ ಹೆಸರು, ಬಹುಮುಖ ಪ್ರತಿಭೆಯ ಬರಹಗಾರರು ಆಗಿದ್ದ ಡಾ.ನಾ ಡಿಸೋಜ ಅವರ ನಿಧನದ ಸುದ್ದಿ ಕೇಳಿ ಬಹಳ ದುಃಖವಾಯಿತು. ಆರು ದಶಕಗಳ ಕಾಲ ಕನ್ನಡ ಸಾಹಿತ್ಯಸಿರಿಯನ್ನು ಶ್ರೀಮಂತಗೊಳಿಸಿದ ಶ್ರೀಯುತರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿ ಅನೇಕ ಪ್ರತಿಷ್ಠಿತ ಗೌರವಗಳಿಗೆ ಪಾತ್ರರಾಗಿದ್ದಾರೆ. ಮಂಜಿನ ಕಾನು, ಈ ನೆಲ ಈ ಜಲ, ನೆಲೆ, ಗಾಂಧಿ ಬಂದರು, ದ್ವೀಪ, ಜೀವಕಳೆ, ಚೆನ್ನಮ್ಮ ಚೆನ್ನಮ್ಮಾಜಿ, ಒಡ್ಡು ಸೇರಿ 40ಕ್ಕೂ ಹೆಚ್ಚು ಕೃತಿಗಳನ್ನು ಬರೆದಿರುವ ಅವರ ಕೊಡುಗೆ ಅನನ್ಯ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬ ಸದಸ್ಯರಿಗೆ, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆಂದು ತಿಳಿಸಿದ್ದಾರೆ.

   ಬಿಜೆಪಿ ರಾಜ್ಯಾಧ್ಯಕ್ಷ ಬಿವೈ.ವಿಜಯೇಂದ್ರ ಅವರು ಪೋಸ್ಟ್ ಮಾಡಿ, ಖ್ಯಾತ ಕನ್ನಡ ಸಾಹಿತಿ ಡಾ. ನಾ.ಡಿಸೋಜಾ ಅವರ ನಿಧನದ ಸುದ್ದಿ ತಿಳಿದು ಅತ್ಯಂತ ವೇದನೆಯಾಯಿತು. ಸರಳ ಸಜ್ಜನಿಕೆಯ ಬಹುಮುಖ ಪ್ರತಿಭೆಯ ಡಿಸೋಜಾ ಅವರು ಕನ್ನಡ ನಾಡು ಕಂಡ ಅಪರೂಪದ ಸಾಹಿತಿಯಾಗಿದ್ದರು. ಮಲೆನಾಡಿನ ಸೊಬಗನ್ನು ಮೈಗೂಡಿಸಿಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಶೈಲಿಯಿಂದ ಸರ್ವಜನರ ಹೃದಯವನ್ನು ತಟ್ಟಿ ಸಾಹಿತ್ಯ ಪ್ರೇಮಿಗಳಿಗೆ ಹಾಗೂ ಸಾಹಿತ್ಯದ ವಿದ್ಯಾರ್ಥಿಗಳಿಗೆ ಆದರ್ಶದ ಬೆಳಕಾಗಿದ್ದ ಅವರು ಜಾತಿ, ಮತ, ಧರ್ಮದ ಎಲ್ಲೆಯನ್ನು ಮೀರಿದ ಕನ್ನಡ ವಾಗ್ದೇವಿಯ ಸುಪುತ್ರರಾಗಿದ್ದರು.

   ನಾಡು ಮೆಚ್ಚಿದ ಜನಮೆಚ್ಚಿದ ಸಾಹಿತಿಯಾಗಿ ನೈಜ ವೈಚಾರಿಕ ಪ್ರಜ್ಞೆಯ ಚಿಂತಕರಾಗಿ ಸರ್ವಧರ್ಮ ಸಮಭಾವದ ಪ್ರತಿಪಾದಕರಾಗಿ, ವಿಶ್ವಮಾನವತ್ವ ಮೈಗೂಡಿಸಿಕೊಂಡು ದಾರ್ಶನಿಕ ಸಾಹಿತಿಯಾಗಿದ್ದ ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಪರಿಸರ ಕಾಳಜಿ, ಕನ್ನಡ ಕಳಕಳಿ ಅವರ ಆದ್ಯತೆಯಾಗಿತ್ತು, ತಮ್ಮ ಸಾಹಿತ್ಯದ ಮೂಲಕ ಸಾಮಾಜಿಕ ವ್ಯವಸ್ಥೆಗೆ ಚಿಕಿತ್ಸೆ ನೀಡಬೇಕೆನ್ನುವುದು ಅವರ ಅಭಿಲಾಷೆಯಾಗಿತ್ತು, ಈ ನಿಟ್ಟಿನಲ್ಲಿ ಅವರು ಇಟ್ಟ ಹೆಜ್ಜೆ ಗುರುತುಗಳು ಕನ್ನಡ ಸಾಹಿತ್ಯ ಪ್ರಪಂಚ ಇರುವವರಿಗೆ ಅಜರಾಮರ. ಅವರ ಅಗಲಿಕೆಯಿಂದ ಅವರ ಅಭಿಮಾನಿಗಳು ಹಾಗೂ ಕುಟುಂಬ ವರ್ಗದವರಿಗೆ ಉಂಟಾಗಿರುವ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆಂದು ಹೇಳಿದ್ದಾರೆ.

    ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ. ನೋರ್ಬೆರ್ಟ್ ಡಿಸೋಜ ತೀವ್ರ ಅನಾರೋಗ್ಯದಿಂದ ಭಾನುವಾರ ವಿಧಿವಶರಾಗಿದ್ದಾರೆ. 88 ವರ್ಷದ ಡಿಸೋಜ ಅವರು ಅನಾರೋಗ್ಯ ಹಿನ್ನೆಲೆಯಲ್ಲಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ

Recent Articles

spot_img

Related Stories

Share via
Copy link