600 ಕೋಟಿ ಸ್ಮಾರ್ಟ್ಸಿಟಿ ಕಾಮಗಾರಿ ಸಿಎಂ ಲೋಕಾರ್ಪಣೆ
ತುಮಕೂರು
ಬದುಕನ್ನು ಕಟ್ಟಿಕೊಡುವಂತಹ ಹಲವಾರು ಯೋಜನೆಗಳನ್ನು ಕೇಂದ್ರ ಹಾಗೂ ಕರ್ನಾಟಕ ರಾಜ್ಯ ಸರ್ಕಾರ ಜಾರಿಗೊಳಿಸಿದ್ದು, , ಫಲಾನುಭವಿಗಳ ಕೃತಜ್ಞತೆ ಕಂಡು ತುಮಕೂರಿನ ಈ ನೆಲದಿಂದಲೇ ಸಮೃದ್ಧ ಕರ್ನಾಟಕ ನಿರ್ಮಾಣದ ಸಂಕಲ್ಪ ಮಾಡುತ್ತಿದ್ದೇನೆ. ಕರ್ನಾಟಕವನ್ನು ಪ್ರಗತಿಯಲ್ಲಿ ಭಾರತದ ನಂ.1 ರಾಜ್ಯವಾಗಿಸುವ ಗುರಿಹೊಂದಲಾಗಿದೆ ಎಂದು ಸಿಎಂ ಬಸವರಾಜಬೊಮ್ಮಾಯಿ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ತುಮಕೂರು ಮಹಾನಗರ ಪಾಲಿಕೆ ಹಾಗೂ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಸಹಯೋಗದಲ್ಲಿ ಭಾನುವಾರ ನಗರದ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ವಿವಿಧ ಯೋಜನೆಗಳ ಲೋಕಾರ್ಪಣೆ ಹಾಗೂ ಫಲಾನುಭವಿಗಳ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು ತುಮಕೂರು ಜಿಲ್ಲೆಯ 24 ಲಕ್ಷ ಜನರಿಗೆ ಉಭಯ ಸರ್ಕಾರಗಳ ವಿವಿಧ ಯೋಜನೆಗಳ ಸವಲತ್ತುಗಳನ್ನು ಒದಗಿಸಲಾಗಿದೆ. ನವ ಭಾರತ ನಿರ್ಮಾಣಕ್ಕೆ ನವ ಕರ್ನಾಟಕದ ಮೂಲಕ ಕೊಡುಗೆ ನೀಡಲಾಗುವುದು. ಇದಕ್ಕಾಗಿ ಜನರು ನಮ್ಮ ಕಾರ್ಯ ನೋಡಿ ಆಶೀರ್ವದಿಸಬೇಕು ಎಂದು ಕೋರಿದರು.
ಸಾಧನೆಯ ರಿಪೋರ್ಟ್ ಕಾರ್ಡ್ :
53.43 ಲಕ್ಷ ಕರ್ನಾಟಕ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಸಹಾಯಧನ ದೊರೆತಿದ್ದು 17ಲಕ್ಷ ಮನೆಗಳನ್ನು ಮಂಜೂರು ಮಾಡಲಾಗಿದೆ. ಜೆಜೆಎಂ ಯೋಜನೆಯಡಿ 40 ಲಕ್ಷ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಕಳೆದ 72 ವರ್ಷಗಳಲ್ಲಿ ಕೇವಲ 25 ಲಕ್ಷ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು ಸಾಧ್ಯವಾಗಿತ್ತು ಎಂದು ವಿಪಕ್ಷಗಳ ವಿರುದ್ಧ ಹರಿಹಾಯ್ದರು.
ಉಪನಗರಿಯಾಗಿ ಅಭಿವೃದ್ಧಿ:
ರೈತರ ಮಕ್ಕಳಿಗೆ ಸ್ಕಾಲರ್‌ಶಿಪ್ ಕೊಡಲು ರೈತ ವಿದ್ಯಾ ನಿಧಿ ಯೋಜನೆಯನ್ನು ಜಾರಿಗೆ ತಂದಿದ್ದು, ತುಮಕೂರು ಜಿಲ್ಲೆಯ 18 ಸಾವಿರ ರೈತ ಮಕ್ಕಳು ರೈತ ವಿದ್ಯಾನಿಧಿ ಯೋಜನೆಯ ಸೌಲಭ್ಯ ಪಡೆದುಕೊಂಡಿದ್ದಾರೆ. ಹಿಂದೆAದು ಕಂಡರಿಯದ ರೀತಿ 970 ಕೋಟಿ ರೂಗಳ ಸ್ಮಾರ್ಟ್ ಸಿಟಿ ಯೋಜನೆಯನ್ನು ತುಮಕೂರಿಗೆ ಘೋಷಿಸಿ ಅನುಷ್ಠಾನಗೊಳಿಸಲಾಗಿದೆ, ಎತ್ತಿನಹೊಳೆ ಯೋಜನೆಯಡಿಯೂ ಈ ವರ್ಷವೇ ನೀರು ಜಿಲ್ಲೆಗೆ ಬರಲಿದ್ದು, ಬೆಂಗಳೂರಿಗೆ ಉಪನಗರಿಯಾಗಿ ತುಮಕೂರು ಅಭಿವೃದ್ಧಿ ಹೊಂದುತ್ತಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಅವರು ಮಾತನಾಡಿ, ಡಬ್ಬಲ್ ಇಂಜಿನ್ ಸರ್ಕಾರ ಪ್ರಾಮಾಣಿಕವಾಗಿ ಜನರ ಸೇವೆ ಮಾಡುತ್ತಿದೆ. 600ಕೋಟಿ ವೆಚ್ಚದ ಸ್ಮಾರ್ಟ್ ಸಿಟಿ ಯೋಜನೆ ಲೋಕಾರ್ಪಣೆಗೊಂಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಚಿವರುಗಳಾದ ಸಿ.ಸಿ.ಪಾಟೀಲ್, ಎಸ್.ಟಿ. ಸೋಮಶೇಖರ್, ಬಿ.ಸಿ. ನಾಗೇಶ್, ಸಂಸದ ಜಿ.ಎಸ್. ಬಸವರಾಜು, ಶಾಸಕರುಗಳಾದ ಎ.ಎಸ್. ಜಯರಾಮ್, ಡಾ. ಸಿ.ಎಂ. ರಾಜೇಶ್ ಗೌಡ, ವಿಧಾನ ಪರಿಷತ್ ಶಾಸಕ ಚಿದಾನಂದ್ ಗೌಡ, ಮಹಾಪೌರರಾದ ಎಂ. ಪ್ರಭಾವತಿ ಸುಧೀಶ್ವರ್, ಉಪಮಹಾಪೌರ ಟಿ.ಕೆ. ನರಸಿಂಹಮೂರ್ತಿ, ನಗರಾಭಿವೃದ್ಧಿ ಅಧ್ಯಕ್ಷ ಹೆಚ್.ಜಿ.ಚಂದ್ರಶೇಖರ್ ಹಾಗೂ ಸ್ಮಾರ್ಟ್ ಸಿಟಿ ಲಿಮಿಟೆಡ್ ಅಧ್ಯಕ್ಷ ರಾಕೇಶ್ ಸಿಂಗ್, ಡಿಸಿ ವೈ.ಎಸ್. ಪಾಟೀಲ, ಜಿಪಂ ಸಿಇಒ ವಿದ್ಯಾಕುಮಾರಿ, ಮಹಾನಗರ ಪಾಲಿಕೆ ಆಯುಕ್ತ ಹೆಚ್.ವಿ. ದರ್ಶನ್, ಸ್ಮಾರ್ಟ್ ಸಿಟಿ ಎಂ.ಡಿ. ರಂಗಸ್ವಾಮಿ ಸೇರಿದಂತೆ ಇತರೆ ಅಧಿಕಾರಿಗಳು, ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಯೋಜನೆಯ 18 ಫಲಾನುಭವಿಗಳಿಗೆ ಮುಖ್ಯಮಂತ್ರಿಗಳು ಸಾಂಕೇತಿಕವಾಗಿ ಚೆಕ್ ವಿತರಿಸಿದರು. ಕಾರ್ಯಕ್ರಮ ಮುಗಿದ ಬಳಿಕ ಕಾರ್ಮಿಕ ಇಲಾಖೆ ಫಲಾನುಭವಿಗಳು ಶಾಲಾ ಮಕ್ಕಳ ಕಿಟ್ ಪಡೆಯಲು ಮಾಹಿತಿ ಕೊರತೆಯಿಂದ ಪರದಾಡಿದರು. ಎಷ್ಟೋ ಫಲಾನುಭವಿಗಳು ಸರಿಯಾಗಿ ಊಟ ಸಿಗಲಿಲ್ಲವೆಂದು ಅವಲತ್ತುಕೊಂಡರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ