ಕೇಂದ್ರಕ್ಕೆ ಸಿಎಂ ತಿರುಗೇಟು….!

ಬೆಂಗಳೂರು:

    ಮೇಕೆದಾಟು ಯೋಜನೆ ವಿಚಾರವಾಗಿ ಕೇಂದ್ರ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡುವೆ ಮಾತಿನ ಸಮರ ಮತ್ತೆ ಮುಂದುವರೆದಿದ್ದು, ಸತ್ಯದ ಘೋರಿ ಕಟ್ಟಿ ಸುಳ್ಳಿನ ವಿಜೃಂಭಣೆ ಮಾಡುವಾಗ ಕನಿಷ್ಠ ಆತ್ಮಸಾಕ್ಷಿಯನ್ನಾದರೂ ಪ್ರಶ್ನಿಸಿಕೊಳ್ಳಿ ಎಂಬ ಕೇಂದ್ರ ಸರ್ಕಾರದ ಹೇಳಿಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದಾರೆ.

    ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರ ಹೇಳಿಕೆ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಮುಖ್ಯಮಂತ್ರಿಗಳು ಸರಣಿ ಟ್ವೀಟ್ ಮಾಡಿ ತಿರುಗೇಟು ನೀಡಿದ್ದಾರೆ.

    ನರೇಂದ್ರ ಮೋದಿ ನೇತೃತ್ವದ ನಿಮ್ಮ ಬಿಜೆಪಿ ಸರ್ಕಾರಕ್ಕೆ ಮುಖಭಂಗವಾಗುವುದನ್ನು ತಪ್ಪಿಸುವ ಸಲುವಾಗಿ ತಾವು ವ್ಯರ್ಥ ಕಸರತ್ತು ಮಾಡುತ್ತಿದ್ದೀರಿ. ಜನತೆಯ ಬಾಯಾರಿಕೆಯನ್ನು ತಣಿಸಬೇಕಾದ ಕೇಂದ್ರ ಸರ್ಕಾರ ಬದಲಿಗೆ ತನ್ನ ಸುಳ್ಳುಗಳ ದಾಹ ತಣಿಸಿಕೊಳ್ಳಲು ಮುಂದಾಗಿ ನೀರಿನ ವಿಚಾರದಲ್ಲಿ ಕ್ಷುಲ್ಲಕ ರಾಜಕಾರಣ ನಡೆಸಿರುವುದು ಬೇಸರದ ಸಂಗತಿ. ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿರುವುದು ನೀವು ಮತ್ತು ನಿಮ್ಮ ಸರ್ಕಾರ ಎಂದು ಹೇಳಿದ್ದಾರೆ.

    ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಕರ್ನಾಟಕದ ವಿರುದ್ಧ ದ್ವೇಷ ಸಾಧಿಸುವಂತೆ ನಿರಂತರವಾಗಿ ಅನ್ಯಾಯ ಮಾಡಲಾಗುತ್ತಿದೆ. ರಾಜ್ಯದ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಕೇಂದ್ರ ಸರ್ಕಾರದ ಗಮನಸೆಳೆಯಲು ಆನ್ಸರ್ ಮಾಡಿ ಮೋದಿ ಎಂಬ ಅಭಿಯಾನವನ್ನು ಪ್ರಾರಂಭಿಸಿ ಕೇಂದ್ರ ಜಲಸಂಪನ್ಮೂಲ ಖಾತೆ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು 5 ಪ್ರಶ್ನೆಗಳನ್ನು ಕೇಳಿದ್ದೆ. ಅವುಗಳಲ್ಲಿ ಎರಡು ಪ್ರಶ್ನೆಗಳಿಗಷ್ಟೇ ಉತ್ತರಿಸಿರುವ ಸಚಿವರು ಉಳಿದಂತೆ ನೀಡಿರುವ ಉತ್ತರಗಳಿಗೂ ನಮ್ಮ ಪ್ರಶ್ನೆಗಳಿಗೂ ಸಂಬಂಧವೇ ಇಲ್ಲದಂತಿದ್ದಾರೆ.

    ರಾಜ್ಯಕ್ಕೆ ಸಂಬಂಧಿಸಿದ ನೀರಾವರಿ ಯೋಜನೆಗಳು ಹೇಗೆ ಬಿಜೆಪಿ ಸರ್ಕಾರದ ತಿರಸ್ಕಾರ, ಅವಗಣನೆಯಿಂದಾಗಿ ಧೂಳು ಹಿಡಿಯುತ್ತಿವೆ ಎನ್ನುವುದನ್ನು ಮತ್ತೊಮ್ಮೆ ವಾಸ್ತವಾಂಶಗಳ ಮೂಲಕ ನಿಮ್ಮ ಮುಂದಿರಿಸುತ್ತಿದ್ದೇನೆ. ತಾವು ವಿಷಯವನ್ನು ಸರಿಯಾಗಿ ಗ್ರಹಿಸಿ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಮೋದಿ ನೇತೃತ್ವದ ಸರ್ಕಾರದ ನಿರ್ಲಕ್ಷ್ಯದ ಧೋರಣೆ ಮತ್ತು ಉದ್ದೇಶಪೂರ್ವಕವಾದ ಅನ್ಯಾಯವನ್ನು ಸರಿಪಡಿಸುತ್ತಿರಿ ಎಂದು ಭಾವಿಸುತ್ತೇನೆಂದು ತಿಳಿಸಿದ್ದಾರೆ.

    ಕೃಷ್ಣಾ ಮತ್ತು ಕಾವೇರಿ ಎಂಬ ಎರಡು ಜೀವನದಿಗಳು ಕರ್ನಾಟಕದ ಎರಡು ಕಣ್ಣುಗಳು. ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತಕ್ಕಾಗಿ ಕರ್ನಾಟಕ ರಾಜ್ಯಕ್ಕೆ 130 ಟಿಎಂಸಿ ನೀರು ಹಂಚಿಕೆಯಾಗಿದೆ. ಈ ಪ್ರಮಾಣದ ನೀರನ್ನು ಬಳಕೆಗೆ ಲಭ್ಯವಾಗಿಸಬೇಕೆಂದರೆ ಆಲಮಟ್ಟಿ ಜಲಾಶಯದ ಎತ್ತರವನ್ನು ಸಮುದ್ರ ಮಟ್ಟದಿಂದ ಪ್ರಸಕ್ತ ಇರುವ 519.60 ಅಡಿಯಿಂದ 524.256 ಅಡಿಗಳಿಗೆ ಏರಿಸಬೇಕಾಗಿದೆ.

    ಯೋಜನೆಯ ಮೂರನೇ ಹಂತದ ಅನುಷ್ಠಾನದಿಂದ ಬರಪೀಡಿತ ಉತ್ತರ ಕರ್ನಾಟಕದ 5.94 ಲಕ್ಷ ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಸಾಧ್ಯವಾಗಲಿದೆ. ವಿಪರ್ಯಾಸವೆಂದರೆ, ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ – 2 ತೀರ್ಪು ಘೋಷಿಸಿ ಒಂದು ದಶಕವೇ ಕಳೆದರೂ ತೀರ್ಪಿನ ಗೆಜೆಟ್‌ ಸೂಚನೆಯನ್ನು ಕೇಂದ್ರ ಸರ್ಕಾರ ಹೊರಡಿಸಿಲ್ಲ. ಇದಕ್ಕಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ಸೂಕ್ತ ಅರ್ಜಿ ದಾಖಲಿಸುವಂತೆ ರಾಜ್ಯ ಸರ್ಕಾರವು ಹಲವು ಬಾರಿ ಕೇಂದ್ರಕ್ಕೆ ಮನವಿ ಮಾಡಿದ ಹೊರತಾಗಿಯೂ ಈ ಕುರಿತು ಕೇಂದ್ರ ಮುಂದಾಗಿಲ್ಲ. ಇದು ಯೋಜನೆಯ ಜಾರಿಗೆ ತೊಡಕಾಗಿ ಪರಿಣಮಿಸಿದೆ.

    ಕಳಸಾ ಮತ್ತು ಬಂಡೂರ ಯೋಜನೆ ವಿಚಾರದಲ್ಲಿಯೂ ಕೂಡ ಯೋಜನೆ ಅನುಷ್ಠಾನಕ್ಕೆ ಅಗತ್ಯವಾದ ವಿವಿಧ ಅನುಮತಿಗಳನ್ನು ದೊರಕಿಸಿಕೊಡುವಲ್ಲಿ ಕೇಂದ್ರ ಸರ್ಕಾರ ಸೋತಿದೆ. ಅರಣ್ಯ ಮತ್ತು ಪರಿಸರ ಇಲಾಖೆಯಿಂದ ದೊರೆಯಬೇಕಾದ ತಿರುವಳಿ ಪ್ರಸ್ತಾವನೆಗಳಿಗೆ ಸಂಬಂಧಿಸಿದ ಅನುಮತಿ, 2006ರ ಇಐಎ ಅಧಿಸೂಚನೆಯಿಂದ ವಿನಾಯಿತಿ, ರಾಷ್ಟ್ರೀಯ ವನ್ಯಜೀವಿ ಮಂಡಳಿಯಿಂದ ಕಳಸಾ ಯೋಜನೆಗೆ ಅಗತ್ಯವಾಗಿರುವ ವನ್ಯಜೀವಿ/ಹುಲಿ ಕಾರಿಡಾರ್ ವಿಚಾರವಾಗಿ ದೊರೆಯಬೇಕಾದ‌ ಅನುಮತಿ, ಭೀಮಗಡ ವನ್ಯಜೀವಿ ಅಭಯಾರಣ್ಯದ ಪರಿಸರ ಸೂಕ್ಷ್ಮ ವಲಯ ಘೋಷಣೆ ಕುರಿತಾದ ವಿಚಾರಗಳು ಕೇಂದ್ರ ಸರ್ಕಾರದ ಕಡೆಯಿಂದ ಬಾಕಿ ಉಳಿದಿವೆ.

    ಭದ್ರಾ ಮೇಲ್ದಂಡೆ ಮಧ್ಯ ಕರ್ನಾಟಕದ ಪ್ರಮುಖ ಏತ ನೀರಾವರಿ ಯೋಜನೆಯಾಗಿದ್ದು 29.90 ಟಿಎಂಸಿ ನೀರಿನ ಬಳಕೆಯೊಂದಿಗೆ ಸೂಕ್ಷ್ಮ ನೀರಾವರಿ ಯೋಜನೆ ಮೂಲಕ 2,25,515 ಹೆಕ್ಟೇರ್‌ ಕೃಷಿ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವುದು ಇದರ ಉದ್ದೇಶವಾಗಿದೆ. ಯೋಜನೆಯನ್ನು ‘ರಾಷ್ಟ್ರಿಯ ಯೋಜನೆ’ ಎಂದು ಘೋಷಿಸಲು ಅಗತ್ಯವಾದ ಎಲ್ಲ ಸಕ್ಷಮ ಪ್ರಾಧಿಕಾರಿಗಳ ಅನುಮತಿ, ಅನುಮೋದನೆಗಳ ಹೊರತಾಗಿಯೂ ಕೇಂದ್ರ ಸರ್ಕಾರವು ಯೋಜನೆಯನ್ನು ‘ರಾಷ್ಟ್ರೀಯ ಯೋಜನೆ’ ಎಂದು ಘೋಷಿಸದೆ ವಿಳಂಬ ಧೋರಣೆ ಅನುಸರಿಸುತ್ತಿದೆ. ಸದರಿ ಯೋಜನೆಗಾಗಿ 2023-24ರ ಕೇಂದ್ರ ಆಯವ್ಯಯದಲ್ಲಿ ರೂ.5,300 ಕೋಟಿ ಸಹಾಯಧನ ಘೋಷಿಸಿರುವುದರ ಹೊರತಾಗಿಯೂ ಈವರೆಗೆ ಯೋಜನೆಗೆ ಯಾವುದೇ ಸಹಾಯಧನವನ್ನು ಕೇಂದ್ರ ಬಿಡುಗಡೆ ಮಾಡಿಲ್ಲ.

    ಮೇಕೆದಾಟು ಯೋಜನೆಯ ಬಗ್ಗೆ ಕೇಂದ್ರ ಸರ್ಕಾರದ ನಿರ್ಲಕ್ಷದ ಬಗೆಗಿನ ನಮ್ಮ ಪ್ರಶ್ನೆಗೆ ಉತ್ತರಿಸಿರುವ ಗಜೇಂದ್ರ ಸಿಂಗ್ ಶೇಖಾವತ್ ಅವರು ಯೋಜನೆಯ ಪ್ರಸ್ತಾವವನ್ನು ಸಭೆಯ ಅಜೆಂಡಾದಲ್ಲಿ ಸೇರಿಸಲಾಗಿತ್ತು ಎಂದು ಉತ್ತರಿಸಿದ್ದಾರೆ. ಸಭೆಯ ಅಜೆಂಡಾದಲ್ಲಿ ಸೇರಿಸುವುದಷ್ಟೇ ಪ್ರಧಾನ ಮಂತ್ರಿ ಮತ್ತು ಜಲಸಂಪನ್ಮೂಲ ಸಚಿವರ ಕೆಲಸವೇ? ಯೋಜನೆಯ ತ್ವರಿತ ಅನುಷ್ಠಾನಕ್ಕೆ ಕ್ರಮಕೈಗೊಳ್ಳುವುದು ಕೂಡಾ ಪ್ರಧಾನಿ ಮತ್ತು ಸಚಿವರ ಕರ್ತವ್ಯ ಅಲ್ಲವೇ? ಈ ಕೆಲಸದಲ್ಲಿ ಇಬ್ಬರೂ ವಿಫಲವಾಗಿದ್ದಾರೆ ಎಂದು ಕನ್ನಡಿಗರಿಗೆ ಅನಿಸಿದರೆ ತಪ್ಪಾದೀತೇ?

    ಕಾವೇರಿ ಜಲಾನಯನ ಪ್ರದೇಶದಲ್ಲಿನ ಸಂಕಷ್ಟ ಪರಿಸ್ಥಿತಿಯ ನಿವಾರಣೆಗೆ ಮೇಕೆದಾಟು ಯೋಜನೆಯು ದೀರ್ಘಕಾಲೀನ ಶಾಶ್ವತ ಪರಿಹಾರ ಯೋಜನೆಯಾಗಿರುತ್ತದೆ. ಈ ಯೋಜನೆಯನ್ನು CWMA/CWC ಪರಿಗಣಿಸಿ ಅಗತ್ಯ ಅನುಮತಿ ಹಾಗೂ ಸಮ್ಮತಿಗಳನ್ನು ನೀಡುವ ಮೂಲಕ ಬೆಂಗಳೂರು ಮತ್ತು ಸುತ್ತಮುತ್ತಲಿನ ಊರುಗಳ ಕುಡಿಯುವ ನೀರಿನ ಸಮಸ್ಯೆಯನ್ನು ಮೋದಿ ನೇತೃತ್ವದ ಸರ್ಕಾರ ಪರಿಹರಿಸುತ್ತದೆ ಎಂದು ನಾನು ನಂಬಿದ್ದೇನೆಂದು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link