ಕಳಸಾ-ಬಂಡೂರಿ ಯೋಜನೆಗೆ ಶೀಘ್ರ ಅನುಮೋದನೆ : ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ

ಬೆಂಗಳೂರು:

    ಉತ್ತರ ಕರ್ನಾಟಕ ಭಾಗದ ಜನರ ಜೀವನಾಡಿಯಾಗಿರುವ ಕಳಸಾ ಬಂಡೂರಿ ನಾಲಾ ಕುಡಿಯುವ ನೀರಿನ ಯೋಜನೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮೋದನೆ ಒದಗಿಸಿಕೊಡುವಂತೆ ಮಂಡಳಿಯ ಅಧ್ಯಕ್ಷರಾಗಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ನಿನ್ನೆ ಪ್ರಧಾನ ಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ಸಿದ್ದರಾಮಯ್ಯಯನವರು ಜನ್ಮದಿನದ ಶುಭಾಶಯ ತಿಳಿಸಿ ನಾಲಾ ಯೋಜನೆಯ ಬಗ್ಗೆ ವಿವರವಾಗಿ ಬರೆದಿದ್ದಾರೆ.

   ‘ ನಿಮ್ಮ ಜನ್ಮದಿನಕ್ಕೆ ಶುಭಾಶಯಗಳು, ನಿಮಗೆ ಭಗವಂತ ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ನೀಡಲಿ ಎಂದು ಬರವಣಿಗೆ ಆರಂಭಿಸಿದ ಸಿದ್ದರಾಮಯ್ಯನವರು,ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ ಮಹತ್ವದ ವಿಷಯವನ್ನು ನಿಮ್ಮ ತುರ್ತು ಗಮನಕ್ಕೆ ತರಲು ನಾನು ಈ ಪತ್ರ ಬರೆಯುತ್ತಿದ್ದೇನೆ ಎಂದು ಉಲ್ಲೇಖಿಸಿದ್ದಾರೆ.

    ಉತ್ತರ ಕರ್ನಾಟಕ ಭಾಗದ ಜನರ ಕುಡಿಯುವ ನೀರಿನ ಅಗತ್ಯತೆ ಪೂರೈಸಲು ನಿರ್ಣಾಯಕವಾಗಿರುವ ಕಳಸಾ-ಬಂಡೂರಿ ನಾಲಾ ತಿರುವು ಯೋಜನೆಯು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ   ವನ್ಯಜೀವಿ ಅನುಮೋದನೆಗಾಗಿ ದೀರ್ಘಕಾಲದಿಂದ ಬಾಕಿ ಉಳಿದಿದೆ. ಮಹದಾಯಿ ವಾಟರ್ ಡಿಸ್​ಪ್ಯೂಟ್ ಟ್ರಿಬ್ಯೂನಲ್ ಅವಾರ್ಡ್ ನ್ನು 14-08-2018 ರಂದು ಘೋಷಿಸಲಾಯಿತು. 27-02-2020 ರಂದು ಭಾರತದ ಗೆಜೆಟ್‌ನಲ್ಲಿ ಪ್ರಕಟಿಸಲಾಯಿತು.

   ಕರ್ನಾಟಕ ರಾಜ್ಯಕ್ಕೆ ಒಟ್ಟು 13.42 ಟಿಎಂಸಿ ಹಂಚಿಕೆಯಾಗಿದೆ. ಅದರಲ್ಲಿ 3.9 ಟಿಎಂಸಿ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕಾಗಿ ತಿರುಗಿಸಲು (ಕಳಸಾ ನಾಲಾದಿಂದ 1.72 ಟಿಎಂಸಿ ಮತ್ತು ಬಂಡೂರ ನಾಲಾದಿಂದ 2.18 ಟಿಎಂಸಿ) ರಾಜ್ಯ ಸರ್ಕಾರವು 16-06-2022 ರಂದು CWC ಗೆ ಕಳಸಾ ಮತ್ತು ಬಂಡೂರಿ ನಾಲಾ ತಿರುವು ಯೋಜನೆ (ಲಿಫ್ಟ್ ಯೋಜನೆಗಳು) ಮಾರ್ಪಡಿಸಿದ ಪೂರ್ವ-ಕಾರ್ಯಸಾಧ್ಯತಾ ವರದಿಯನ್ನು ಅನುಮೋದನೆಗಾಗಿ ಸಲ್ಲಿಸಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ವರದಿ ಸಲ್ಲಿಕೆ ಕುರಿತ ಪೋರ್ಟಲ್ ಸಂಖ್ಯೆಯನ್ನೂ ಮುಖ್ಯಮಂತ್ರಿಗಳು ಉಲ್ಲೇಖಿಸಿದ್ದಾರೆ.

   ಇಲ್ಲಿಯವರೆಗೆ ನೀವು ಅಧ್ಯಕ್ಷರಾಗಿರುವ ವನ್ಯಜೀವಿ ರಾಷ್ಟ್ರೀಯ ಮಂಡಳಿಯು ಯೋಜನೆಗೆ ಅಗತ್ಯ ಅನುಮತಿಯನ್ನು ನೀಡಿಲ್ಲ. ಗೋವಾದ ಮುಖ್ಯ ವನ್ಯಜೀವಿ ವಾರ್ಡನ್ ಕಳಸಾ ಬಂಡೂರಿಯಲ್ಲಿ ಕರ್ನಾಟಕ ಯಾವುದೇ ಚಟುವಟಿಕೆಗಳನ್ನು ಕೈಗೊಳ್ಳದಂತೆ ಕಾನೂನುಬಾಹಿರ ಆದೇಶವನ್ನು ಹೊರಡಿಸಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

Recent Articles

spot_img

Related Stories

Share via
Copy link
Powered by Social Snap