ಲಾಕ್ ಡೌನ್ ನಿಯಮ ಉಲ್ಲಂಘಿಸಿದ ವಾಹನಗಳು-ಅಂಗಡಿಗಳ ಮೇಲೆ ಎಫ್.ಐ.ಆರ್

ಚಿಕ್ಕನಾಯಕನಹಳ್ಳಿ : 

     ಕೊರೋನಾ ಲಾಕ್ ಡೌನ್ ಸಮಯದಲ್ಲಿ ಸರ್ಕಾರ ನೀಡಿರುವ ಅವಧಿಯನ್ನೂ ಮೀರಿ ಅಂಗಡಿಗಳನ್ನು ತೆರೆಯುವವರಿಗೆ ಅದರಲ್ಲೂ ಸಂಜೆಯಾಗುತ್ತಲೆ ಕದ್ದುಮುಚ್ಚಿ ವ್ಯಾಪಾರ ಮಾಡುವವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ, ಐದು ಅಂಗಡಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. ಲಾಕ್ ಡೌನ್ ಘೋಷಣೆಯಾದ ದಿನದಿಂದ ಇಲ್ಲಿಯ ವರೆಗೆ 13 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಹಾಗೂ ಎಂಟು ಸಾವಿರ ರೂ ಗಳನ್ನು ದಂಡ ರೂಪದಲ್ಲಿ ವಸೂಲಿ ಮಾಡಿದ್ದಾರೆ.

      ಸರ್ಕಾರ ವಿಧಿಸಿರುವ ವಿಪತ್ತು ನಿರ್ವಹಣೆ ಹಾಗೂ ಸಾಂಕ್ರಾಮಿಕ ರೋಗಗಳ ನಿಯಮಗಳನ್ನು ಉಲ್ಲಂಘಿಸಿದವರಿಗೆ ಇಲ್ಲಿನ ಸಬ್ ಇನ್ಸ್‍ಪೆಕ್ಟರ್ ಹರೀಶ್ ಸಿವಿಲ್ ಡ್ರೆಸ್ ನಲ್ಲಿ ಆಗಮಿಸಿ ದಂಡ ವಿಧಿಸುವುದು ಹಾಗೂ ಲಾಠಿ ರುಚಿ ತೋರಿಸುತ್ತಲೂ ಇದ್ದಾರೆ. ಸಂಜೆ ಯಾಗುತ್ತಲೇ ಪಟ್ಟಣದಲ್ಲಿ ಕೆಲವರು ಅಂಗಡಿಗಳನ್ನು ಕದ್ದು ಮುಚ್ಚಿ ವ್ಯಾಪಾರ ಮಾಡುತ್ತಿರುವುದು ಪೊಲೀಸರ ಕಣ್ಣಿಗೆ ಬಿದ್ದಿದೆ, ಈ ಹಿನ್ನೆಲೆಯಲ್ಲಿ ಪೊಲೀಸರು ಬೈಕ್ ನಲ್ಲಿ ಸಿವಿಲ್ ಡ್ರೆಸ್ ನಲ್ಲಿ ರಾತ್ರಿ ವೇಳೆ ಸಂಚರಿಸುತ್ತಿದ್ದಾರೆ, ಅಲ್ಲಲ್ಲಿ ಗುಂಪು ಗೊಳ್ಳುವ ಜನರಿಗೆ ಲಾಠಿ ರುಚಿ ತೋರಿಸುತ್ತಿದ್ದಾರೆ.

      ರಾಜ್ಯಾದ್ಯಂತ ಕರ್ಪ್ಯೂ ವಿದ್ದರೂ ಗ್ರಾಮೀಣ ಜನರು ಸಂಜೆಯಾಗುತ್ತಲೇ ಹಳ್ಳಿಕಟ್ಟೆ, ದೇವಸ್ಥಾನ ಹಾಗೂ ಅಲ್ಲಲಿ ಕುಳಿತುಕೊಂಡು ಕಾಲಹರಣ ಮಾಡುತ್ತಿದ್ದಾರೆ, ಇವರಿಗೆ ಕೊರೋನಾ ವೈರಸ್ ಭೀತಿಯೂ ಇಲ್ಲದೆ, ಕರ್ಪ್ಯೂ ಆದೇಶವಿದ್ದರೂ ಯಾವುದೇ ಮಾಸ್ಕ್ ಧರಿಸದೆ, ವ್ಯಕ್ತಿಗತ ಅಂತರ ಪಾಲಿಸುತ್ತಿಲ್ಲ, ಇಂತಹವರನ್ನು ಕಂಡತಹ ಪೊಲೀಸರು ಲಾಠಿ ರುಚಿ ತೋರಿಸುವ ಜೊತೆಗೆ ಆಗಾಗ್ಗೆ ಭೇಟಿ ನೀಡಿ ಎಚ್ಚರಿಕೆಯನ್ನೂ ಹಾಗೂ ಅರಿವನ್ನೂ ನೀಡುತ್ತಿದ್ದಾರೆ.

ಕೋವಿಡ್ ಲಸಿಕೆ ಹಾಕಿಸಲು ಔಷಧಿ ತರಲು ಹೋದವರ ಮೇಲೂ ದಂಡ ಪ್ರಹಾರ : 

      ಕೋವಿಡ್ ಲಸಿಕೆ ಪಡೆದು ಮನೆಗೆ ವಾಪಸ್ ಆಗುವಾಗ ಪೊಲೀಸರು ನಮ್ಮ ವಾಹನವನ್ನು ತಡೆದು ಪೊಲೀಸರು ದಂಡ ವಿಧಿಸಿದ್ದಾರೆ. ಎಂದು ರೋಟರಿ ಕ್ಲಬ್‍ನ ಪದಾಧಿಕಾರಿಯೊಬ್ಬರು ಆರೋಪಿಸಿದ್ದಾರೆ.

      ಲಸಿಕೆ ಕೊಡುವುದು ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ಈ ಸಮಯದಲ್ಲಿ, ಲಸಿಕೆ ಹಾಕಿಸಿಕೊಂಡು ಮನೆಗೆ ಹಿಂತಿರುಗುವಾಗ ಪೊಲೀಸರು ತಡೆದು ದಂಡ ಹಾಕಿದರು ಎಂದು ದೂರಿದ್ದಾರೆ.

     ಇನ್ನೋರ್ವ ಮೆಡಿಕಲ್ ಶಾಷ್‍ಗೆ ಔಷಧಿ ತರಲು ಹೋಗುವ ಸಂದರ್ಭದಲ್ಲಿ ಹೊಸಹಳ್ಳಿಯ ಯುವಕನೊಬ್ಬನಿಗೂ ಇದೇ ರೀತಿಯ ಅನುಭವವಾಗಿದ್ದು, ಔಷಧಿ ತರಲೆಂದು ತಂದ ಹಣದಲ್ಲಿ ದಂಡ ಕಟ್ಟಿ ಔಷಧಿ ಇಲ್ಲದೆ ಬರಿ ಕೈಯಲ್ಲಿ ಮನೆಗೆ ವಾಪಸ್ ಆಗಿದ್ದಾನೆ.

      ಪೊಲೀಸರು ನಿಯಮ ಪಾಲಿಸುವಲ್ಲಿ ನಿಷ್ಟೆ ತೋರಿದ್ದಾರೆ. ಅದೇ ರೀತಿ ಮಾನವೀಯ ಮೌಲ್ಯಗಳ ಬಗ್ಗೆಯೂ ಕಾಳಜಿವಹಿಸಿ ರಸ್ತೆಯಲ್ಲಿ ಓಡಾಡುವರನ್ನು ಪೂರ್ಣ ವಿಚಾರಣೆ ಮಾಡಿ ಅನಗತ್ಯವಾಗಿ ಓಡಾಡುತ್ತಿದ್ದರೆ ಅಂತಹವರಿಗೆ ದಂಡ ವಿಧಿಸುವುದು ಸೂಕ್ತ ಎಂಬುದು ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳ ಅಭಿಪ್ರಾಯವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap