ಚಿಕ್ಕನಾಯಕನಹಳ್ಳಿ :
ಕಳೆದ ಒಂದು ವರ್ಷದಿಂದ ಕುಡಿಯುವ ನೀರಿಗೆ ಗ್ರಾಮದಲ್ಲಿ ತೊಂದರೆಯಾಗಿದೆ, ಗ್ರಾಮಸ್ಥರೆಲ್ಲರೂ ನೀರಿಗಾಗಿಯೇ ಕಿಲೋ ಮೀಟರ್ ನಡೆದು ನೀರು ತರುವ ಪರಿಸ್ಥಿತಿ ಎದುರಾಗಿದೆ, ಸಮಸ್ಯೆ ಬಗ್ಗೆ ಪಂಚಾಯಿತಿಗೆ, ಹಲವು ಬಾರಿ ಮನವಿ ಮಾಡಿದರೂ ಈವರೆಗೂ ಸಮಸ್ಯೆ ಬಗೆಹರಿದಿಲ್ಲ ಎಂದು ಆಗ್ರಹಿಸಿ ಹೊಸಹಳ್ಳಿ ಗ್ರಾಮಸ್ಥರು ಹೊನ್ನೆಬಾಗಿ ಗ್ರಾಮ ಪಂಚಾಯಿತಿಗೆ ಬೀಗ ಜಡಿದ ಘಟನೆ ನಡೆಯಿತು.
ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿ ಹಲವು ದಿನಗಳಾಗಿವೆ, ಈಗಾಗಲೇ ಸಮಸ್ಯೆ ಬಗ್ಗೆ ಅಧಿಕಾರಿಗಳಿಗೆ,ಜನಪ್ರತಿನಿಧಿಗಳಿಗೆ ತಿಳಿಸಿದ್ದೇವೆ, ಪತ್ರಿಕೆಗಳಲ್ಲಿ ಸಮಸ್ಯೆ ಬಗ್ಗೆ ವರದಿಯೂ ಪ್ರಕಟವಾಗಿದೆ ಆದರೂ ಯಾರೂ ಇತ್ತ ಗಮನ ಹರಿಸದಿರುವುದು ಗ್ರಾಮದ ಬಗ್ಗೆ ಅಧಿಕಾರಿಗಳಲ್ಲಿ ಇರುವ ಅಸೆಡ್ಡೆ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಹೊಸಹಳ್ಳಿ ಗ್ರಾಮದಲ್ಲಿ ಈಗ ಕುಡಿಯುವ ನೀರಿಗಾಗಿಯೇ ಟ್ಯಾಂಕರ್ ಮೂಲಕ ನೀರು ಕೊಡಲಾಗುತ್ತಿದೆ ಆದರೆ ಬರುವ ಟ್ಯಾಂಕರ್ ನನ್ನು ತೊಳೆದು ಎಷ್ಟು ದಿನಗಳಾಗಿದೆಯೋ ತಿಳಿಯದಾಗಿದೆ, ಹಲವು ಬಾರಿ ಈ ಸಮಸ್ಯೆ ಬಗ್ಗೆ ನಾವು ತಿಳಿಸಿದ್ದೇವೆ ಆದರೂ ಟ್ಯಾಂಕರ್ ಮೂಲಕ ನೀರು ಹರಿಸುವುದೇ ಇವರ ಆಡಳಿತವಾಗಿದೆ, ಒಂದು ವರ್ಷಗಳಿಂದಲೂ ನೀರಿನ ಸಮಸ್ಯೆ ಇದ್ದರೂ ಯಾವ ಅಧಿಕಾರಿಗಳೂ ಹೊಸಹಳ್ಳಿ ಗ್ರಾಮದಲ್ಲಿ ಬೋರ್ ವೆಲ್ ಕೊರೆಸಲು ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಗ್ರಾಮಸ್ಥ ಆನಂದ ಮಾತನಾಡಿ, ಹೊಸಹಳ್ಳಿ ಸಮಸ್ಯೆ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದೇವೆ, ನಮ್ಮೂರಿಗೆ ಟ್ಯಾಂಕರ್ ನಲ್ಲಿ ನೀರು ಬಿಟ್ಟರೂ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದೆ, ಟ್ಯಾಂಕರ್ ನಲ್ಲಿ ನೀರು ಖಾಲಿಯಾಗುತ್ತಿದ್ದಂತೆ ಪುನಃ ಕುಡಿಯುವ ನೀರಿಗೆ ಪರದಾಟವಾವಂತಾಗಿದೆ, ಈಗಾಗಲೇ ಬೇಸಿಗೆ ಕಾಲವೂ ಆರಂಭವಾಗಿದೆ ನಮಗೆ ಟ್ಯಾಂಕರ್ ನಲ್ಲಿ ನೀರು ಬಿಡುವುದರ ಬದಲು ಗ್ರಾಮದಲ್ಲೇ ಹೊಸದಾಗಿ ಬೋರ್ ವೆಲ್ ಕೊರೆಸಬೇಕು ನೀರು ನೀಡಬೇಕು ಆಗಲೇ ಗ್ರಾಮದವರ ಸಮಸ್ಯೆ ನಿವಾರಣೆಯಾಗುತ್ತದೆ, ನಮ್ಮ ಬೇಡಿಕೆ ಈಡೇರುವವರೆಗೂ ನಾವು ಪ್ರತಿಭಟನೆ ನಿಲ್ಲುಸುವುದಿಲ್ಲ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಹೊಸಹಳ್ಳಿ ಗ್ರಾಮದ ಚಂದ್ರಣ್ಣ, ಜಗದೀಶ್, ವೆಂಕಟೇಶ್, ಬಸವಣ್ಣ, ನಾರಾಯಣ್ಪ, ಶಿವರಾಜು ಗ್ರಾಮಸ್ಥರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ