ಚಿಕ್ಕನಾಯಕನಹಳ್ಳಿ : ಅಂಗನವಾಡಿ ನೌಕರರಿಂದ ಉಪವಾಸ ಸತ್ಯಾಗ್ರಹ

 ಚಿಕ್ಕನಾಯಕನಹಳ್ಳಿ : 

      ಅಂಗನವಾಡಿ ನೌಕರರ ಶ್ರಮಕ್ಕೆ ತಕ್ಕ ಪ್ರತಿಫಲವಾಗಿ ,ನೌಕರರಿಗೆ ಸೇವಾ ಜೇಷ್ಠತೆಯ ಆಧಾರದಲ್ಲಿ ಮಿನಿ ಅಂಗನವಾಡಿ ಕೇಂದ್ರಗಳ ಸಹಾಯಕಿ ನೇಮಕಾತಿ, ಅಂಗನವಾಡಿ ಸಹಾಯಕಿಯರಿಗೆ ಇರುವ ಸಂಬಳದ ವ್ಯತ್ಯಾಸ ಮೊತ್ತ ಹಾಗೂ ನಿವೃತ್ತಿ ಸೌಲಭ್ಯವನ್ನು ನೀಡುವಂತೆ ಆಗ್ರಹಿಸಿ ಅಂಗನವಾಡಿ ನೌಕರರು ತಾಲ್ಲೂಕಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಕಚೇರಿ ಮುಂಭಾಗ ಉಪವಾಸ ಸತ್ಯಾಗ್ರಹ ನಡೆಸಿದರು.

     ಅಂಗನವಾಡಿ ನೌಕರರು ಕಡಿಮೆ ಸವಲತ್ತುಗಳಿಗೆ ದುಡಿಯುತ್ತಿದ್ದರೂ ಕೂಡ ಕೊರೋನಾ ಸಂದರ್ಭದಲ್ಲಿ ಸರ್ಕಾರ ಸೂಚನೆ ಕೊಟ್ಟ ಕೂಡಲೇ ಯಾವುದೇ ಷರತ್ತುಗಳಿಲ್ಲದೆ ಕೆಲಸವನ್ನು ಅಂಗನವಾಡಿ ನೌಕರರು ನಿರ್ವಹಿಸಿದ್ದಾರೆ. ಕೊರೊನಾ ಸಂದರ್ಭದಲ್ಲಿ ಕೆಲಸ ಮಾಡುವಾಗ ನೌಕರರು ಕೆಲಸದ ಒತ್ತಡದಿಂದ ಹಲವರು ಮಂದಿ ಜೀವನಗಳನ್ನೇ ಮುಡುಪಾಗಿಟ್ಟು ಬಲಿಯಾಗಿದ್ದಾರೆ.

      173 ಜನರಿಗೆ ಕೊರೋನಾ ಬಂದು ಆ ದಿನಗಳಲ್ಲಿ ಅವರ ಕುಟುಂಬದ ಆದಾಯವನ್ನು ಕಳೆದುಕೊಂಡಿದ್ದಾರೆ, ರಾಜ್ಯ ಹೈಕೋರ್ಟ್ ಕೊರೊನಾ ಸಂದರ್ಭದಲ್ಲಿ ಮಕ್ಕಳಿಗೆ, ಮಹಿಳೆಯರ ಅಪೌಷ್ಠಿಕತೆಯನ್ನು ತಡೆಯಲು ಪೌಷ್ಠಿಕ ಆಹಾರ ಫಲಾನುಭವಿಗಳಿಗೆ ತಲುಪಿಸುವುದನ್ನು ಖಾತ್ರಿ ಪಡಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿತ್ತು. ಅಂತಹ ಎಲ್ಲಾ ದೂರುಗಳಿಂದ ಎಚ್ಚರಿಕೆಗಳಿಂದ ಸರ್ಕಾರದ ಘನತೆಯನ್ನು ಕಾಪಾಡಿದ್ದೂ ಅಂಗನವಾಡಿ ನೌಕರರೇ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

      ಕೊರೋನಾ ಸಾಂಕ್ರಾಮಿಕದ ಭೀಕರತೆ ಇದ್ದಾಗಲೂ ಮಲೆನಾಡು, ಗುಡ್ಡಗಾಡು, ಕೊಳಚೆ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ತಮ್ಮ ಕುಟುಂಬದ ವಾಹನಗಳನ್ನು ಬಳಸಿ ಆಹಾರ ಸಾಮಗ್ರಿಗಳನ್ನು ಮನೆಮನೆಗೆ ಹಂಚಿದ್ದು, ಕ್ವಾರಂಟೈನ್ ಆದ ಸ್ಥಳಗಳಿಗೆ ಮಾಸ್ಕ್, ಸ್ಯಾನಿಟೈಸರ್, ಮಾತ್ರೆಗಳು ಇಲ್ಲದಿದ್ದರೂ ತಮ್ಮ ಕೈಯಿಂದ ಎಲ್ಲಾ ಖರ್ಚು ಮಾಡಿಕೊಂಡು ಆಹಾರ ವಿತರಣೆ ಮಾಡಿದ್ದಾರೆ. ಕೊರೋನಾ ರೋಗಿಗಳನ್ನು ಸಂತೃಪ್ತಿಸಿದ್ದು ಮಾತ್ರವಲ್ಲದೆ ಸಾರ್ವಜನಿಕರಿಂದ ಹಲ್ಲೆಗೊಳಗಾದರೂ ಕೂಡ ಎದೆಗುಂದದೆ ಕೆಲಸ ಮಾಡಿದ ಅಂಗನವಾಡಿ ನೌಕರರ ಸೇವೆಯನ್ನು ಪರಿಗಣಿಸಿ ಅವರ ಬೇಡಿಕೆ ಈಡೇರಿಸಲೇಬೇಕಾಗಿದೆ ಎಂದಿದ್ದಾರೆ.

       ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸೇವಾ ಜೇಷ್ಟತೆಯ ಆಧಾರದಲ್ಲಿ 153.25 ಕೋಟಿ, ಮಿನಿ ಅಂಗನವಾಡಿ ಕೇಂದ್ರಗಳ ಸಹಾಯಕಿ ನೇಮಕಾತಿ 6.99ಕೋಟಿ,ಅಂಗನವಾಡಿ ಸಹಾಯಕಿಯರಿಗೆ ಸಂಬಳದ ವ್ಯತ್ಯಾಸ 131.42 ಕೋಟಿ, ನಿವೃತ್ತಿ ಸೌಲಭ್ಯ 47.82 ಕೋಟಿ ಒಟ್ಟು 339.48 ಕೋಟ ಶಿಫಾರಸ್ಸು ಮಾಡಲಾಗಿತ್ತು ಈ ಮೊತ್ತ ನೀಡಿದ್ದರೆ 1 ಲಕ್ಷ 30ಸಾವಿರ ಕುಟುಂಬಗಳಿಗೆ ಸಹಾಯವಾಗುತ್ತಿತ್ತು, ಆದರೆ ರಾಜ್ಯ ಸರ್ಕಾರ ಈ ಮೂರು ಶಿಫಾರಸ್ಸುಗಳಲ್ಲಿ ಯಾವುದೇ ಒಂದು ಅಂಶವನ್ನು ಪರಿಗಣನೆ ಮಾಡಿಲ್ಲ, 2016ರಿಂದ 7304 ಜನ ನಿವೃತ್ತಿಯಾಗಿದ್ದಾರೆ. ಅವರಿಗೆ ಕೊಡಬೇಕಿದ್ದ ಇಡಗಂಟನ್ನು ಕೂಡ ಸರ್ಕಾರ ಪರಿಗಣನೆ ಮಾಡಿಲ್ಲ, ಹೆಸರಿಗೆ ಮಾತ್ರ ಅಂತರಾಷ್ಟ್ರೀಯ ಮಹಿಳಾ ದಿನಾಚಾರಣೆಯೆಂದು ಬಜೆಟ್ ಮಂಡಿಸಿದೆ. ಆದರೆ ಮಹಿಳಾ ವಿರೋಧಿ ನೀತಿ ಅನುಸರಿಸಿರುವುದನ್ನು ನಾವು ಖಂಡಿಸುತ್ತೇವೆ, ಎಂದಿರುವ ಅವರು, ಇಲಾಖೆಯ ಶಿಫಾರಸ್ಸುಗಳನ್ನು ಬಜೆಟ್ ಅಂತಿಮಗೊಳಿಸುವಾಗ ಸೇರ್ಪಡೆ ಮಾಡಬೇಕೆಂದೂ ಒತ್ತಾಯಿಸುತ್ತಿದ್ದಾರೆ ಹಾಗೂ ಹೆಚ್ಚುವರಿ ಕೆಲಸಗಳಾದ ಇ-ಸರ್ವೆ, ಆರ್ ಡಿಪಿಆರ್ ನಿಂದ ಕೊಟ್ಟಿರುವ ಸರ್ವೆ, ಬಿಪಿಎಲ್ ಕಾರ್ಡ್, ಆರ್ ಸಿ ಎಚ್ ಸರ್ವೆ, ಭಾಗ್ಯಲಕ್ಷ್ಮೀ, ಮಾತೃವಂದನಾ, ಮಾತೃಶ್ರೀ, ಸ್ತ್ರೀಶಕ್ತಿ ಚುನಾವಣಾ ಮುಂತಾದ ಕೆಲಸಗಳ ಬಹಿಷ್ಕರಿಸುವ ಬಗ್ಗೆ ಸಂಘಟನೆ ಕರೆ ಕೊಟ್ಟಿರುವುದಾತಿ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

      ಉಪವಾಸ ಸತ್ಯಾಗ್ರಹದಲ್ಲಿ ಅಧ್ಯಕ್ಷೆ ಪೂರ್ಣ್ಣಮ್ಮ, ಉಪಾಧ್ಯಕ್ಷೆ ಲಲಿತಮ್ಮ, ಪ್ರಧಾನ ಕಾರ್ಯದರ್ಶಿ ಹೆಚ್.ಎ.ಪುಷ್ಪಾವತಮ್ಮ, ಖಜಾಂಚಿ ಶಕುಂತಲ, ಸೇರಿದಂತೆ ಹಲವರು ಅಂಗನವಾಡಿ ಕಾರ್ಯಕರ್ತರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link