ಚಿಕ್ಕನಾಯಕನಹಳ್ಳಿ :
ಪಟ್ಟಣದ ಎಪಿಎಂಸಿ ಆವರಣದಲ್ಲಿ ಪ್ರತಿ ಸೋಮವಾರ ನಡೆಯುವ ಕುರಿ ಸಂತೆಗೆ, ಈ ಮಂಗಳವಾರ ಹಿರಿಯರ ಹಬ್ಬ ನಡೆಯುವ ಹಿನ್ನೆಲೆಯಲ್ಲಿ ತಾಲ್ಲೂಕಿನ ವಿವಿಧ ಭಾಗಗಳಿಂದ ಸಾವಿರಾರು ಮೇಕೆ ಹಾಗೂ ಕುರಿಗಳು ಬಂದಿದ್ದು ಭರ್ಜರಿ ವ್ಯಾಪಾರ ನಡೆದಿದೆ.
ಪಟ್ಟಣದಲ್ಲಿ ನಡೆಯುವ ಕುರಿ ಸಂತೆಯಿಂದ ರಾಜ್ಯದ ಮೈಸೂರು, ಮಂಡ್ಯ, ಹಾಸನ, ಚನ್ನರಾಯಪಟ್ಟಣ, ಮಾಲೂರು, ಮಡಿಕೇರಿ ಮುಂತಾದ ಸ್ಥಳಗಳಿಂದ ಕುರಿಗಳನ್ನು ತೆಗೆದುಕೊಂಡು ಹೋಗುತ್ತಾರೆ.
ಚಾಚೂ ತಪ್ಪದೆ ಬರುವ ಅಣ್ಣ-ತಮ್ಮಂದಿರು :
ಮಹಾಲಯ ಅಮಾವಾಸ್ಯೆ ದಿನ ನಡೆಯುವ ಹಿರಿಯರ ಹಬ್ಬಕ್ಕೆ ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಹಾಗೂ ಬೆಂಗಳೂರು ಹಾಗೂ ರಾಜ್ಯದ ವಿವಿಧ ಭಾಗಗಳಲ್ಲಿ ವಾಸಿಸುವ ಅಣ್ಣ-ತಮ್ಮಂದಿರು, ಬಂಧುಗಳು ಅಮಾವಾಸ್ಯೆಯಂದು ನಡೆಯುವ ಹಿರಿಯರ ಹಬ್ಬಕ್ಕೆ ಚಾಚೂ ತಪ್ಪದೆ ಬರುತ್ತಾರೆ.
ಲಾಭವಿಲ್ಲವೆಂದ ವ್ಯಾಪಾರಿಗಳು :
ಪ್ರತಿ ಸೋಮವಾರ ನಡೆಯುವ ಕುರಿ ಸಂತೆಗೆ ಈ ಬಾರಿ ನೂರಾರು ಲಾರಿ ಸೇರಿದಂತೆ ಮಿನಿ ಲಾರಿಗಳಲ್ಲಿ ಬಂದಿದ್ದವು. ಕುರಿಗಳನ್ನು ಇಲ್ಲಿಂದ ಕೊಂಡೊಯ್ದು ಅಂಗಡಿಗಳಲ್ಲಿ ಕುರಿಗಳನ್ನು ಕುಯ್ದು ಮಾಂಸ ಮಾರಾಟ ಮಾಡುತ್ತೇವೆ, ಈ ಬಾರಿ ಅಧಿಕ ಬೆಲೆ ಕೊಟ್ಟು ತೆಗೆದುಕೊಂಡು ಹೋದರೆ ಲಾಭವಿಲ್ಲ, ಅಸಲು ಸಹ ಬರುತ್ತಿಲ್ಲ, ಬೇರೆ ವ್ಯಾಪಾರ ನಮಗೆ ಗೊತ್ತಿಲ್ಲ ಲಾಭನೋ-ನಷ್ಟವೋ ಮಾಂಸ ಮಾರಾಟ ಮಾಡುತ್ತೇವೆ ಎಂದು ಮೈಸೂರಿನ ಮಾಂಸ ವ್ಯಾಪಾರಿಗಳಾದ ಪರುಶುರಾಂ ಹಾಗೂ ರಾಕೇಶ್ ಹೇಳಿದರು.
ಮಾಂಸದ ಎಡೆ, ಆತ್ಮಗಳಿಗೆ ತೃಪ್ತಿ :
ಹಿರಿಯರ ಹಬ್ಬಕ್ಕೆ ಮಾಂಸ ಮಾಡುವುದರಿಂದ ಎಷ್ಟು ಬೆಲೆಯಾದರೂ ಕುರಿ ಅಥವಾ ಆಡುಗಳನ್ನು ತೆಗೆದುಕೊಂಡು ಹೋಗಲೇಬೇಕು, ಹಿರಿಯರ ಹಬ್ಬಕ್ಕೆ ಎಡೆ ಇಟ್ಟರೆ ಮಾತ್ರ ಆತ್ಮ ತೃಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ ಎಂದು ಹನುಮಂತಯ್ಯ ಹೇಳಿದರು. ಎಪಿಎಂಸಿ ಆವರಣದಲ್ಲಿ ನಡೆಯುವ ಕುರಿ ಸಂತೆಗೆ ಪ್ರತಿ ಕುರಿಗೆ 5 ರೂ ಕರ ವಸೂಲಿ ಮಾಡಲಾಗುತ್ತದೆ.
ಈ ಬಾರಿ ಎಪಿಎಂಸಿ ಆವರಣಕ್ಕೆ ಹಳ್ಳಿಗಳಿಂದ ಸಾವಿರಾರು ಕುರಿಗಳು ಬಂದಿದ್ದು, ವ್ಯಾಪಾರ ಭರದಿಂದ ಸಾಗಿದೆ. 15 ರಿಂದ 25 ಸಾವಿರ ರೂ. ವರೆಗೆ ಕುರಿಗಳ ವ್ಯಾಪಾರ ನಡೆದಿದ್ದು, ಕುರಿ ಸಾಕಾಣಿಕೆದಾರರಿಗೆ ಉತ್ತಮ ಧಾರಣೆ ಸಿಕ್ಕಿದೆ.
-ಪರಮೇಶ್ವರಪ್ಪ, ರೈತ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ