ಚಿಕ್ಕನಾಯಕನಹಳ್ಳಿ :
ರಭಸವಾಗಿ ಹರಿಯುತ್ತಿರುವ ನೀರು, ಕುಣಿದು ಕುಪ್ಪಳಿಸುತ್ತಿರುವ ಜನ, ಆಕರ್ಷಣೀಯ ಜಲ ತಾಣದಂತೆ ಬದಲಾಗುತ್ತಿರುವ ತಾಲ್ಲೂಕಿನ ಅಂಕಸಂದ್ರ ಅಣೆ, ಈ ಸ್ಥಳಕ್ಕೆ ಹೇಮಾವತಿ ನೀರು ಹರಿದ ದಿನದಿಂದ ಸ್ಥಳೀಯರು, ಅಕ್ಕಪಕ್ಕ ತಾಲ್ಲೂಕಿನಿಂದ ಜನತೆ ಅಣೆಯತ್ತ ದಾಪುಗಾಲಾಕುತ್ತಾ ಹರಿಯುವ ನೀರಿನಲ್ಲಿಳಿದು ಸಂತಸ ವ್ಯಕ್ತ ಪಡಿಸುತ್ತಿದ್ದಾರೆ.
ತಾಲ್ಲೂಕಿನಲ್ಲಿ ಪ್ರವಾಸಿ ತಾಣಗಳಾಗಿ ಹಲವು ಕ್ಷೇತ್ರಗಳಿವೆ, ಅದಕ್ಕೆ ಅಂಕಸಂದ್ರ ಅಣೆ ಹೊಸ ಸೇರ್ಪಡೆಯಾಗಿದೆ. ಹೇಮಾವತಿ ನೀರು ಹರಿಯುತ್ತಿರುವುದೇ ಪ್ರಮುಖ ಕಾರಣ. ಯುವಕರು, ಹೆಂಗಸರು, ಮಕ್ಕಳು ದಿನನಿತ್ಯ ಅಂಕಸಂದ್ರ ಅಣೆಯತ್ತ ತೆರಳುತ್ತಿದ್ದಾರೆ, ಹರಿಯುತ್ತಿರುವ ಹೇಮಾವತಿ ನೀರನ್ನು ಕಂಡು ಸಂಭ್ರಮಿಸುತ್ತಿದ್ದಾರೆ, ರಜಾದಿನಗಳು ಬಂದರಂತೂ ಪಟ್ಟಣದ ಜನತೆ ಜೊತೆಗೆ ಹೊರ ತಾಲ್ಲೂಕಿನವರೂ ಅಂಕಸಂದ್ರ ಅಣೆಯತ್ತ ತಮ್ಮ ದಿಕ್ಕನ್ನು ಬದಲಿಸುತ್ತಿದ್ದಾರೆ.
ಅಂಕಸಂದ್ರ ಅಣೆಯು ಸುಮಾರು 24 ಅಡಿಗಳಷ್ಟು ಆಳವಿದೆ, ಜಲಪ್ರಿಯರು ನೀರಿನಲ್ಲಿ ಇಳಿಯುತ್ತಾ ಜಲಕ್ರೀಡೆಯಾಡುತ್ತಾ ಸಂಭ್ರಮಿಸುತ್ತಿದ್ದಾರೆ, ಮಹಿಳೆಯರು, ಮತ್ತು ಮಕ್ಕಳು ರಭಸವಾಗಿ ಹರಿಯುತ್ತಿರುವ ನೀರನ್ನೇ ಕಂಡು ಖುಷಿ ಪಡುತ್ತಿದ್ದಾರೆ,
ಹೇಮಾವತಿ ನೀರಿನಿಂದ ಸಾಸಲು ಕೆರೆ, ಶೆಟ್ಟಿಕೆರೆ ಕೆರೆ ನಂತರ ಈಗ ಅಂಕಸಂದ್ರ ಕೆರೆಯ ತುಂಬಿ ಹರಿಯುತ್ತಿದೆ, ಕೆರೆ ತುಂಬಿ ಹರಿಯುತ್ತಿರುವುದನ್ನು ಕಂಡ ನೂರಾರು ರೈತರು, ಸಾರ್ವಜನಿಕರು ಪ್ರತಿನಿತ್ಯ ಕೆರೆಗಳತ್ತ ಭೇಟಿ ಕೊಟ್ಟು ತಮ್ಮ ಸಂತಸವನ್ನು ಫೇಸ್ ಬುಕ್, ವಾಟ್ಸ್ ಆಪ್ ಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ತಾಲ್ಲೂಕಿನ ಅಂಕಸಂದ್ರ ಗ್ರಾಮದ ಅಣೆ ತುಂಬಿ ಕೋಡಿ ಬಿದ್ದು ತಿಮ್ಲಾಪುರ ಹಳ್ಳದತ್ತ ಹರಿಯುತ್ತಿದೆ, ಈ ಭಾಗದ ಸುತ್ತಮುತ್ತಲ ಜನರು ಕೆರೆಯು ಒಣಗಿ ಹೋಗಿದ್ದನ್ನು ದಶಕಗಳ ಕಾಲ ಹೇಳುತ್ತಲೇ ಇದ್ದರು, ನೀರಿಲ್ಲದೆ ತೋಟಗಳು ಒಣಗುತ್ತಿವೆ, ಬರಡು ಭೂಮಿಯಾಗುತ್ತಿದೆ ಎಂದು ತಮ್ಮ ಅನಿಸಿಕೆಗಳನ್ನು ಗ್ರಾಮಗಳಿಗೆ ತೆರಳಿದಾಗಲೆಲ್ಲಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು, ಈಗ ಕೆರೆ ತುಂಬಿ ಕೋಡಿ ಬಿದ್ದು ಬೇರೆ ಹಳ್ಳ, ಕೊಳ್ಳ, ಕೆರಯತ್ತ ಹರಿಯುತ್ತಿರುವುದನ್ನು ಕಂಡು ತಾವು ಭೇಟಿ ನೀಡುವುದಲ್ಲದೆ ತಮ್ಮ ಜೊತೆ ಹೊರ ಜನತೆಯನ್ನು ಕರೆದುಕೊಂಡು ಬರುತ್ತಿದ್ದಾರೆ.
ಸ್ಥಳೀಯ ನಿವಾಸಿ ಬಸವಲಿಂಗಪ್ಪ ಮಾತನಾಡಿ, 1998ರಲ್ಲಿ ಈ ಅಣೆ ತುಂಬಿದ್ದು ಆನಂತರ, ಈಗಷ್ಟೇ ನೋಡುತ್ತಿರುವುದು, ಹೇಮಾವತಿ ನೀರು ತುಂಬಿ ಹರಿಯುತ್ತಿರುವುದು ಕಂಡು ನಮ್ಮೂರಿನ ಜನರಿಗೆಲ್ಲಾ ಸಂತಸವಾಗುತ್ತಿದೆ, ಈ ಕೆರೆಯು 11 ವರ್ಷಗಳ ಹಿಂದೆ ತುಂಬಿತ್ತು, ಈಗ ಪುನಃ ತುಂಬಿರುವುದು ನಮಗೆಲ್ಲಾ ಸಂತಸವಾಗುತ್ತಿದೆ, ಕೆರೆಯು ಸುಮಾರು 600ಎಕರೆ ಇದೆ ಕೆಲವರು ಕೆರೆಯನ್ನು ಒತ್ತುವರಿ ಮಾಡಿದ್ದಾರೆ, ಈ ಕೆರೆ ತುಂಬಿರುವುದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ, ಕುಪ್ಪೂರು, ಬೇವಿನಹಳ್ಳಿ, ಬೆನಕನಕಟ್ಟೆ, ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಿಗೆ ಹೇಮಾವತಿ ನೀರು ಅನುಕೂಲವಾಗಲಿದೆ.
ಈ ಕೆರೆಯ ಅಣೆಯಿಂದ ಕಳೆಗೆ ಸುಮಾರು 25 ಅಡಿಗಳಷ್ಟು ಆಳವಿದೆ, ಹಿಂದೆ ಈ ಕೆರೆ ತುಂಬಿದಾಗ ಮೀನುಗಳು ದಡಕ್ಕೆ ಹಾರುತ್ತಿದ್ದವು ಮತ್ತೆ ಕೆರೆ ತುಂಬಿದೆ ಅಂತಹ ಸಂತಸವನ್ನೇ ಕಾಣುವಂತಾಗಲಿ ಎಂದು ಬಯಸುತ್ತೇನೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಬೋರ್ಗರೆಯುತ್ತಿರುವ ಅಂಕಸಂದ್ರ ಅಣೆಯಿಂದ ಧುಮ್ಮುಕ್ಕಿ ಹರಿಯುತ್ತಿದೆ, ಕೆಳಗಡೆ ಮುಳ್ಳು, ಪೊದೆ, ಹಾಗೂ ಕಸ ತುಂಬಿದ್ದು ಸಣ್ಣ ನೀರಾವರಿ ಇಲಾಖೆಯಿಂದಲೋ ಅಥವಾ, ಸಚಿವರು ಇಲ್ಲ ಸ್ಥಳೀಯ ಜನಪ್ರತಿನಿಧಿಗಳು ಸ್ವಚ್ಛತೆ ಮಾಡಿಸಿದರೆ ಈ ಸ್ಥಳ ಪೂರ್ಣ ಪ್ರಮಾಣದಲ್ಲಿ ಪ್ರವಾಸಿ ತಾಣವಾಗುತ್ತದೆ.
ಹರಿಯುವ ನೀರನ್ನು ಕಾಣಲು, ಆ ನೀರಿನಲ್ಲಿ ಸಂಭ್ರಮಿಸಲು ನಾವು ಮೈಸೂರು, ಮಡಿಕೇರಿ, ಮಂಡ್ಯದಂತಹ ಜಿಲ್ಲೆಗಳಲ್ಲಿರುವ ಪ್ರವಾಸಿ ತಾಣಗಳಿಗೆ ಆಗಾಗ್ಗೆ ಭೇಟಿ ನೀಡುತ್ತಲೇ ಇರುತ್ತೇವೆ, ನಮ್ಮ ತಾಲ್ಲೂಕಿನಲ್ಲೇ ಇರುವ ಅವಕಾಶಕ್ಕೆ ಅನುಕೂಲವಾಗಲು, ಪ್ರವಾಸಿಗರು ಆಗಮಿಸಲು ತಾಲ್ಲೂಕು ಆಡಳಿತ, ಸರ್ಕಾರ ನೆರವಾದರೆ ತಾಲ್ಲೂಕು ಇನ್ನಷ್ಟು ಪ್ರಗತಿ ಕಾಣುತ್ತದೆ, ಹಾಗೂ ಈ ಸ್ಥಳದಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಿದರೆ ಹೆಚ್ಚಿನ ಪ್ರವಾಸಿಗರನ್ನು ಕಾಣಬಹುದು.
– ಮಲ್ಲಿಕಾರ್ಜುನ್, ಅಂಕಸಂದ್ರ ಅಣೆ ವೀಕ್ಷಿಸಲು ಬಂದಿದ್ದ ತಿಪಟೂರಿನ ಪ್ರವಾಸಿಗ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ