ಚಿಕ್ಕನಾಯಕನಹಳ್ಳಿ :
ತಾಲ್ಲೂಕಿನ ಅಂಕಸಂದ್ರ ಅಣೆಯಲ್ಲಿ ಹೇಮಾವತಿ ನೀರು ಹರಿದು ಕೋಡಿ ಬೀಳುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿ, ತಾಲ್ಲೂಕು ಶಾಶ್ವತ ಕುಡಿಯುವ ನೀರಾವರಿ ಹೋರಾಟ ಸಮಿತಿ ವತಿಯಿಂದ ಬಾಗಿನ ಅರ್ಪಿಸಲಾಯಿತು.
ತಾಲ್ಲೂಕಿನಲ್ಲಿ ಹೇಮಾವತಿ ನೀರು ಚಾನಲ್ ಮೂಲಕ ಹರಿದು ಸಾಸಲು ಕೆರೆ, ಶೆಟ್ಟಿಕೆರೆ ಕೆರೆ ತುಂಬಿ ಈಗ ಅಂಕಸಂದ್ರ ಕೆರೆಯೂ ತುಂಬಿ ಹರಿಯುತ್ತಿದೆ, ಈ ಹಿನ್ನೆಲೆಯಲ್ಲಿ ತಾಲ್ಲೂಕಿನ ನೀರಿಗಾಗಿ ಹೋರಾಟ ಮಾಡಿದ ಶಾಶ್ವತ ಕುಡಿಯುವ ನೀರಿನ ಹೋರಾಟ ಸಮಿತಿ ಅಂಕಸಂದ್ರ ಅಣೆಯತ್ತ ಭೇಟಿ ನೀಡಿತ್ತು.
ಕುಪ್ಪೂರು ಮಠದ ಪೀಠಾಧ್ಯಕ್ಷ ಡಾ.ಯತೀಶ್ವರ ಶಿವಾಚಾರ್ಯಸ್ವಾಮೀಜಿ ಹರಿಯುತ್ತಿರುವ ನೀರಿಗೆ ಬಾಗಿನ ಅರ್ಪಿಸಿ ಮಾತನಾಡಿ, ಎಲ್ಲಾ ಸಂಘ-ಸಂಸ್ಥೆಗಳು ಜಾತಿ, ಮತ, ಪಂಥಗಳನ್ನು ಮರೆತು ಹೇಮಾವತಿ ನೀರು ತರಲು ಹೋರಾಡಿದ್ದಾರೆ, ಬಯಲಪ್ಪನ ಮಠದ ಮುಸ್ಲಿಂ ಗುರುಗಳು ಸಹ ಈ ಒಂದು ಹೋರಾಟದಲ್ಲಿ ಬೆಂಬಲಿಸಿದ್ದರು ಆಗಿನ ಕಾಲದಲ್ಲಿ ಕಿರಣ್ ಕುಮಾರ್, ಸಿ.ಬಿ.ಸುರೇಶ್ ಬಾಬು ಸಹ ಸಹಕರಿಸಿದ್ದರಲ್ಲದೆ ಚಿಕ್ಕನಾಯಕನಹಳ್ಳಿಯಿಂದ ಕೆ.ಬಿ.ಕ್ರಾಸ್ ಗೆ ಪಾದಯಾತ್ರೆ ಮಾಡುವ ಸಮಯದಲ್ಲಿ ಅಂದಿನ ಕಾಲದ ಮಾಜಿ ಶಾಸಕರಾದ ಜೆ.ಸಿ.ಮಾಧುಸ್ವಾಮಿಯವರೂ ಸಹ ಬೆಂಬಲಿಸಿದ್ದರು, ನಂತರ ನಾಲಾ ಕೆಲಸ ನೆನಗುದಿಗೆಗೆ ಬಿದ್ದಿದ್ದನ್ನು ಗಮನಿಸಿದ ಅವರು, ಗೆದ್ದ ಮೇಲೆ ಪ್ರಥಮ ಆದ್ಯತೆ ನೀಡಿ ಹೇಮಾವತಿ ಕೈಗೆತ್ತುಕೊಂಡರು. ಸಚಿವ ಜೆ.ಸಿ.ಎಂ.ರವರು ನನ್ನ ಕಾಲಾವಧಿಯಲ್ಲಿ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸುವುದೇ ನನ್ನ ಗುರಿ ಎಂದು ತಿಳಿಸಿರುವುದಾಗಿ ಹೇಳಿದರು.
ಶಾಶ್ವತ ಕುಡಿಯುವ ನೀರಾವರಿ ಹೋರಾಟ ಸಮಿತಿಯ ಡಾ.ಪರಮೇಶ್ವರ್ ಮಾತನಾಡಿ, ಹುಳಿಯಾರಿನ 64 ದಿನಗಳ ಅಹೋರಾತ್ರಿ ಧರಣಿ, ಎಲ್ಲರ ಹೋರಾಟದ ಫಲ, ಶ್ರಮ ಹೇಮಾವತಿ ನೀರು ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ ಹರಿದಿದೆ, ಸಚಿವರಾದ ನಂತರ ಮಾಧುಸ್ವಾಮಿಯವರು ತಾಲ್ಲೂಕಿಗೆ ಹೇಮಾವತಿ ನೀರು ಹರಿಸಲು ಹೆಚ್ಚು ಶ್ರಮ ವಹಿಸಿದರು ಎಂದು ತಿಳಿಸಿದರು.
ಹುಳಿಯಾರಿನಲ್ಲಿ 64 ದಿನಗಳ ಕಾಲ ಹೋರಾಟ ಮಾಡುವ ಸನ್ನಿವೇಶದಲ್ಲಿ ಅಷ್ಟೂ ದಿನ ಸಹಾಯ ಮಾಡಿದ ಎಲ್ಲಾ ಸಂಘ, ಸಂಸ್ಥೆಗಳು ಮತ್ತು ಜನರನ್ನು ಈ ಸಮಯದಲ್ಲಿ ನೆನೆಯಬೇಕು, ಅಂಕಸಂದ್ರ ಕೆರೆಯನ್ನು ಮುಂಬರುವ ದಿನಗಳಲ್ಲಿ ಪ್ರೇಕ್ಷಣೀಯ ಸ್ಥಳವನ್ನಾಗಿ ಮಾಡಬೇಕು, ಇದಕ್ಕಾಗಿ ನಾವು ಕೈ ಜೋಡಿಸೋಣ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಬರಪೀಡಿತ ಎಂಬ ಹಣೆಪಟ್ಟಿಯನ್ನು ಕಿತ್ತೆಸೆದು ಶ್ರೀಮಂತ ನಾಡು ಎಂಬಂತಾಗಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಪುರಸಭಾಧ್ಯಕ್ಷ ಸಿ.ಡಿ.ಚಂದ್ರಶೇಖರ್, ಕಾಂಗ್ರೆಸ್ ಮುಖಂಡ ಕೆ.ಜಿ.ಕೃಷ್ಣೆಗೌಡ, ಕರವೇ ಗುರುಮೂರ್ತಿ, ಡಿಎಸ್‍ಎಸ್ ಮುಖಂಡ ಬೇವಿನಹಳ್ಳಿ ಚನ್ನಬಸವಯ್ಯ, ಕಿರಣ್ ಸೇರಿದಂತೆ ಹಲವರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ