ಚಿಕ್ಕನಾಯಕನಹಳ್ಳಿ :
ಕಳೆದ ಕೆಲ ತಿಂಗಳಿಂದ ರೈತರ ಕುರಿ, ಮೇಕೆಗಳನ್ನು ತಿನ್ನುತ್ತಾ, ಗ್ರಾಮದ ಜನರಲ್ಲಿ ಭಯ, ಭೀತಿ ಉಂಟುಮಾಡಿದ್ದ ಚಿರತೆಗಳಲ್ಲಿ ಒಂದು ಚಿರತೆಯು ಬೋನಿನಲ್ಲಿ ಸೆರೆಯಾಗಿದೆ.
ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಮಲಗೊಂಡನಹಳ್ಳಿ ಬಳಿಯ ನಾಗೇನಹಳ್ಳಿಯ ಕೆರೆ ಅಂಗಳದ ಪೆÇದೆಯೊಳಗೆ ಇದ್ದ ಚಿರತೆಗಳು ಮೇಕೆ, ಕುರಿ ಮೇಯಿಸಲು ಹೋದಾಗ ಅವುಗಳನ್ನು ಹಿಡಿದು ತಿನ್ನುತ್ತಿದ್ದ ಬಗ್ಗೆ ಇದರಿಂದ ಈ ಭಾಗದ ಜನ ಭಯಭೀತರಾಗಿದ್ದ ಬಗ್ಗೆ ಪತ್ರಿಕೆ ವರದಿ ಮಾಡಿತ್ತು. ಈ ಬಗ್ಗೆ ಎಚ್ಚೆತ್ತುಕೊಂಡ ಅರಣ್ಯ ಇಲಾಖೆಯವರು ಚಿರತೆಯನ್ನು ಹಿಡಿಯಲು ಬೋನನ್ನು ಇಟ್ಟಿದ್ದು ಸೋಮವಾರ ರಾತ್ರಿ ಬೋನಿಗೆ ಒಂದು ಚಿರತೆ ಸೆರೆಯಾಗಿದೆ.
ಮಲಗೊಂಡನಹಳ್ಳಿ ಕೆರೆಯಲ್ಲಿ ಕುರುಚಲ ಗಿಡಗಳು ಬೆಳೆದಿದ್ದು, ಇಲ್ಲಿ ಚಿರತೆ ಹಾಗೂ ಕಾಡು ಪ್ರಾಣಿಗಳ ಹಾವಳಿಯಿಂದ ಇಲ್ಲಿನ ಜನರು ರಾತ್ರಿ ವೇಳೆಯಲ್ಲಿ ತೋಟಗಳಿಗೆ ಹೋಗಲು ಭಯ ಪಡುತ್ತಿದ್ದಾರೆ. ಈಗ ಅರಣ್ಯ ಇಲಾಖೆಯವರು ಒಂದು ಚಿರತೆಯನ್ನು ಬೋನಿನಲ್ಲಿ ಸೆರೆಹಿಡಿದಿದ್ದು, ಇನ್ನೂ ಮೂರು ಚಿರತೆಗಳಿವೆ ಎಂದು ಸ್ಥಳೀಯರು ಹೇಳುತ್ತಾರೆ. ಚಿರತೆಗಳು ನಿತ್ಯ ಒಂದಿಲ್ಲೊಂದು ಕುರಿಗಳ ಮೇಲೆ ದಾಳಿ ಮಾಡಿ ಕುರಿಗಳನ್ನು ಹೊತ್ತೊಯ್ಯುತ್ತಿದ್ದು, ಈಗಾಗಲೇ 20ಕ್ಕೂ ಹೆಚ್ಚು ಕುರಿಗಳನ್ನು ತಿಂದಿವೆ ಎಂದು ಹೇಳುತ್ತಾರೆ.
ಸ್ಥಳಕ್ಕೆ ಭೇಟಿ ನೀಡಿದ ವಲಯ ಅರಣ್ಯಾಧಿಕಾರಿ ಸುನೀಲ್ ಅವರು ಮಾತನಾಡಿ, ಸುಮಾರು ಐದಾರು ವರ್ಷ ವಯಸ್ಸಿನ ಚಿರತೆ ಇದಾಗಿದ್ದು, ಸೆರೆಸಿಕ್ಕಂತಹ ಚಿರತೆಯನ್ನು ಬಿಸಿಲೆ ಅರಣ್ಯ ಭಾಗಕ್ಕೆ ಬಿಡುವುದಾಗಿ ತಿಳಿಸಿದರು. ಈ ವೇಳೆ ಅರಣ್ಯ ಇಲಾಖೆಯ ಮಂಜುನಾಥ್ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ