ಚಿಕ್ಕನಾಯಕನಹಳ್ಳಿ : ಉರ್ದು ಶಾಲೆ ಹಿಂಭಾಗಕ್ಕೆ ಸಂತೆ ಸ್ಥಳಾಂತರಿಸಲು ಒತ್ತಾಯ

 ಚಿಕ್ಕನಾಯಕನಹಳ್ಳಿ : 

      ಎಪಿಎಂಸಿ ಜಾಗದಲ್ಲಿ ಸಂತೆ ನಡೆಯುತ್ತಿರುವುದರಿಂದ ಪಟ್ಟಣದ ಶೇ.85%ರಷ್ಟು ಜನರಿಗೆ ಸಂತೆಗೆ ತೆರಳಲು ಸಾಧ್ಯವಾಗುತ್ತಿಲ್ಲ ಹಾಗೂ ಪುರಸಭೆಗೆ ಸುಂಕ ವಸೂಲಿ ಆಗದೆ ಪುರಸಭೆಗೆ ಯಾವುದೇ ಆದಾಯ ಬರುತ್ತಿಲ್ಲ ಹಾಗಾಗಿಯನ್ನು ಸಂತೆಯನ್ನು ನೆಹರು ಸರ್ಕಲ್ ಬಳಿ ಇರುವ ಉರ್ದು ಶಾಲೆಯ ಹಿಂಭಾಗಕ್ಕೆ ಸ್ಥಳಾಂತರಿಸುವಂತೆ ಕನ್ನಡ ಸಂಘದ ಅಧ್ಯಕ್ಷ ಸಿ.ಬಿ.ರೇಣುಕಸ್ವಾಮಿ ಹೇಳಿದರು.

      ಪಟ್ಟಣದ ಪುರಸಭಾ ಸಭಾಂಗಣದಲ್ಲಿ ನಡೆದ ಸಾರ್ವಜನಿಕರ ಬಜೆಟ್ ತಯಾರಿಯ ಪೂರ್ವಭಾವಿಯಾಗಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮುಖ್ಯಾಧಿಕಾರಿ ಶ್ರೀನಿವಾಸ್ ಮಾತನಾಡಿ, ಈ ಹಿಂದೆ ಸಂತೆ ಮಾಡುತ್ತಿದ್ದ ಜಾಗದಲ್ಲಿ ಶಾಲಾ, ಮಕ್ಕಳಿಗೆ ತೊಂದರೆಯಾಗುತ್ತದೆ ಎಂದು ಸಂತೆ ಸ್ಥಳವನ್ನು ಬದಲಾಯಿಸಲಾಗಿದೆ, ಈ ಬಗ್ಗೆ ಚರ್ಚಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

     ಭುವನೇಶ್ವರಿ ಸಂಘದ ಗೌರವಾಧ್ಯಕ್ಷ ಶಾಂತಕುಮಾರ್ ಮಾತನಾಡಿ, ಪಟ್ಟಣದ ನೆಹರು ಸರ್ಕಲ್ ನಲ್ಲಿ ಶೌಚಾಲಯವಿಲ್ಲದಿರುವುದರಿಂದ ಬಸ್ ಗಾಗಿ ಬರುವ ಪ್ರಯಾಣಿಕರಿಗೆ ಶೌಚಾಲಯದ ತೊಂದರೆ ಎದುರಾಗುತ್ತಿದೆ, ಕೂಡಲೇ ನೆಹರು ಸರ್ಕಲ್ ನಲ್ಲಿ ಶೌಚಾಲಯ ನಿರ್ಮಿಸುವಂತೆ ಒತ್ತಾಯಿಸಿದರು.

     ಮುಖ್ಯಾಧಿಕಾರಿ ಶ್ರೀನಿವಾಸ್ ಮಾತನಾಡಿ, ಸಾರ್ವಜನಿಕರಿಗೆ, ಪ್ರಯಾಣಿಕರಿಗೆ ನೆಹರು ಸರ್ಕಲ್ ನಲ್ಲಿ ಶೌಚಾಲಯ ತೊಂದರೆಯಾಗುತ್ತಿರುವ ಬಗ್ಗೆ ತಿಳಿದಿದ್ದು, ಶೌಚಾಲಯ ನಿರ್ಮಿಸಲು ಸ್ಥಳ ಹುಡಕಲಾಗುವುದು, ಎಲ್ಲಿಯೂ ಜಾಗ ದೊರಕದಿದ್ದರೆ ಮುಂದಿನ ದಿನಗಳಲ್ಲಿ ಪುರಸಭೆ ಹಿಂಭಾಗ ಶೌಚಾಲಯ ನಿರ್ಮಿಸಲಾಗುವುದು ಎಂದರು.

      ಡಿಎಸ್‍ಎಸ್ ಲಿಂಗದೇವರು ಮಾತನಾಡಿ, ಈಗಿರುವ ಸ್ಮಶಾನದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಯಾವುದೇ ರೀತಿಯ ಸೌಲಭ್ಯಗಳಿಲ್ಲ, ಸ್ಮಶಾನದಲ್ಲಿ ಕುಡಿಯುವ ನೀರು, ಕಾಂಪೌಂಡ್ ಯಾವ ವ್ಯವಸ್ಥೆಯೂ ಇಲ್ಲ, ಈ ಸ್ಥಳದಲ್ಲಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಒದಗಿಸಲು ಒತ್ತಾಯಿಸಿದರು.

     ಮುಖಂಡ ಮಲ್ಲಿಕಾರ್ಜುನ್ ಮಾತನಾಡಿ, ಪಟ್ಟಣದಲ್ಲಿ ಪರವಾನಿಗೆ ಇಲ್ಲದೆ ಹೋಟೆಲ್ ಗಳನ್ನು ನಡೆಸುತ್ತಿದ್ದಾರೆ, ಪರವಾನಿಗೆ ಪಡೆಯದೇ ಆಹಾರದ ಗುಣಮಟ್ಟ ಹೇಗಿರುತ್ತದೆ ತಿಳಿಯದು ಹಾಗಾಗಿ ಇದರಿಂದ ಮುಂದಿನ ದಿನಗಳಲ್ಲಿ ತೊಂದರೆಯಾಗುವುದನ್ನು ತಪ್ಪಿಸಿ ಎಂದರಲ್ಲದೆ ಪಟ್ಟಣದಲ್ಲಿರುವ ಟವರ್ ಗಳಿಂದ ಪುರಸಭೆಗೆ ಯಾವುದೇ ಆದಾಯ ಬರುತ್ತಿಲ್ಲ ಈ ಬಗ್ಗೆ ಪುರಸಭೆಯವರು ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಮಾಜಿ ಪುರಸಭಾ ಸದಸ್ಯ ಸಿ.ಹೆಚ್.ಪ್ರಕಾಶ್ ಮಾತನಾಡಿ, ಸ್ಮಶಾನದಲ್ಲಿ ವಿದ್ಯುತ್ ಶವಗಾರ ಹಾಗೂ ಮುಕ್ತಿ ವಾಹನವನ್ನು ಪಟ್ಟಣದ ಜನತೆಗೆ ಅನುಕೂಲವಾಗಲು ತರಲು ಒತ್ತಾಯಿಸಿದರು.

      ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ಮುಕ್ತಿ ವಾಹನಕ್ಕೆ ಹಣ ಮೀಸಲಿಟ್ಟಿದ್ದು ಕೆಲವು ತಿಂಗಳುಗಳಲ್ಲಿ ಮುಕ್ತಿ ವಾಹವನ್ನು ತರಲಾಗುವುದು ಎಂದರು. ಆಟೋ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಪಟ್ಟಣದಲ್ಲಿ 6ಸಾವಿರ ಮನೆಗಳಿದ್ದು ಎರಡೂವರೆ ಸಾವಿರ ಕೊಳಾಯಿ ಇವೆ, ಇನ್ನೂ 3 ಸಾವಿರ ಮನೆಗಳಿಗೆ ಕೊಳಾಯಿಗಳು ಲೆಕ್ಕಕ್ಕೆ ಸಿಕ್ಕಿಲ್ಲ, ಇದರಿಂದ ಪುರಸಭೆಗೆ ಆದಾಯ ಬರುತ್ತಿಲ್ಲ ಈ ಬಗ್ಗೆ ಬಜೆಟ್ ನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

      ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ಪುಷ್ಪ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ರುದ್ರಮುನಿ , ನಿಶಾನಿ ಕಿರಣ್, ಪುರಸಭೆ ಅಧಿಕಾರಿಗಳಾದ ನಿರ್ವಾಣಯ್ಯ ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link