ನವದೆಹಲಿ
ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಕೇವಲ ಎರಡು ದಿನಗಳ ನಂತರ, ಮುಂಬೈ ಮತ್ತು ಇತರ ಹಲವಾರು ನಗರಗಳಲ್ಲಿ ಸಿಎನ್ಜಿ ಬೆಲೆಯನ್ನು ಕೆಜಿಗೆ 2 ರೂ.ಗಳಷ್ಟು ಹೆಚ್ಚಿಸಲಾಗಿದೆ. ಮುಂಬೈ ಸೇರಿದಂತೆ ದೇಶದ ಹಲವೆಡೆ ಸಿಎನ್ಜಿ ದರ ಏರಿಕೆ ಮಾಡಲಾಗಿದ್ದು, ದೆಹಲಿಗೆ ವಿನಾಯಿತಿ ನೀಡಲಾಗಿದೆ.
ದೇಶೀಯವಾಗಿ ಕಚ್ಚಾ ನೈಸರ್ಗಿಕ ಅನಿಲದ ಉತ್ಪಾದನೆ ಕಡಿಮೆಗೊಳಿಸಲಾಗುತ್ತಿದ್ದು, ಇದರಿಂದ ಸಿಎನ್ಜಿ ರೀಟೇಲ್ ಬೆಲೆ ಹೆಚ್ಚಳವಾಗಿದೆ. ಸತತ ಎರಡನೇ ತಿಂಗಳಲ್ಲಿ ಕೂಡ ಅಗ್ಗದ ಗ್ಯಾಸ್ ಪೂರೈಕೆ ಕಡಿತಗೊಂಡ ಹಿನ್ನೆಲೆಯಲ್ಲಿ ಸಿಎನ್ ಜಿ ಬೆಲೆ ಏರಿಕೆ ಮಾಡುವಂತೆ ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (IGL) ಮತ್ತು ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್ ನ ಪ್ರಸ್ತಾಪವನ್ನು ಕೇಂದ್ರ ಮೊದಲು ತಳ್ಳಿ ಹಾಕಿತ್ತು. ಬೆಂಗಳೂರಿನಲ್ಲಿ ಸಿಎನ್ಜಿ ದರ ಪ್ರತಿ ಕೆಜಿಗೆ 86.85 ರೂ.ನಷ್ಟಿದೆ.
ನೋಯ್ಡಾ, ಗ್ರೇಟರ್ ನೋಯ್ಡಾ, ಗಾಜಿಯಾಬಾದ್, ಗುರುಗ್ರಾಮ್ ಮತ್ತು ಇತರ ನಗರಗಳಲ್ಲಿ ಸಿಎನ್ಜಿ ಬೆಲೆಯನ್ನು ಹೆಚ್ಚಿಸಲಾಗಿದೆ, ಆದರೆ ದೆಹಲಿಗೆ ಇದರಿಂದ ವಿನಾಯಿತಿ ನೀಡಲಾಗಿದೆ, ಅಲ್ಲಿ ಕೆಲವೇ ತಿಂಗಳುಗಳಲ್ಲಿ ಚುನಾವಣೆ ನಡೆಯಲಿದೆ. ಮುಂಬೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಎನ್ಜಿ ಬೆಲೆಯನ್ನು ಕೆಜಿಗೆ 2 ರೂಪಾಯಿ ಹೆಚ್ಚಿಸಲಾಗಿದೆ.








