ತೆಂಗಿಗೆ ಬಿಳಿ ಕೀಟದ ಕಾಟ : ಸೊರಗುತ್ತಿವೆ ಫಲಭರಿತ ಮರಗಳು

ಹುಳಿಯಾರು :

     ಕಾಯಿಲೆಗಳು ಮನುಷ್ಯನಿಗೆ ಬರದೆ ಮರಕ್ಕೆ ಬರುತ್ತವೆಯೇ? ಎಂಬ ಮಾತಿತ್ತು. ಆದರೆ 20 ವರ್ಷಗಳ ಹಿಂದೆ ನುಸಿ ರೋಗ ತೆಂಗಿಗೆ ಬಂದು ಈ ಮಾತನ್ನು ಸುಳ್ಳಾಗಿಸಿತು. ನಂತರದ ದಿನಗಳಲ್ಲಿ ತೆಂಗಿಗೆ ಹಳದಿ ರೋಗ, ಬೆಂಕಿ ರೋಗ, ಅಣಬೆ ರೋಗ, ನುಸಿ ರೋಗ, ಕೆಂಪುಮೂತಿ ಹುಳ, ಸಿರಿಕೊಳೆ ರೋಗ ಹೀಗೆ ಅನೇಕ ರೋಗಗಳು ಕಾಡುವ ಮೂಲಕ ತೆಂಗು ಬೆಳೆಗಾರರನ್ನು ಅಕ್ಷರಶಃ ಕಂಗಾಲಾಗಿಸಿದ್ದವು. ಈಗ ಈ ರೋಗಗಳ ಪಟ್ಟಿಗೆ ಬಿಳಿ ಹುಳುಗಳ ಕಾಟ ಸಹ ಸೇರ್ಪಡೆಯಾಗಿದೆ.

     ಹೌದು, ಕೇರಳದ ಪಾಲಕ್ಕಾಡ್‍ನಲ್ಲಿ 2016ರಲ್ಲಿ ಕಾಣಿಸಿಕೊಂಡ ಈ ರೋಗಾಣು ಬಳಿಕ ತಮಿಳುನಾಡು, ಆಂಧ್ರಪ್ರದೇಶದಲ್ಲೂ ತೆಂಗಿನ ಬೆಳೆಯನ್ನು ಬಹುವಾಗಿ ಕಾಡಿ ಕರ್ನಾಟಕಕ್ಕೆ ಕಾಲಿಟ್ಟಿದೆ. ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಮೊದಲು ಆರಂಭವಾದ ಬಿಳಿ ಹುಳು ಕಾಟ ಈಗ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ತಮ್ಮಡಿಹಳ್ಳಿ ಗೊಲ್ಲರಹಟ್ಟಿಯ ತೋಟಗಳಿಗೆ ಪ್ರವೇಶಿಸಿ ಇಲ್ಲಿನ ರೈತರ ಆತಂಕಕ್ಕೆ ಕಾರಣವಾಗಿದೆ.

     ತೆಂಗಿನ ಗರಿಗಳ ಕೆಳ ಭಾಗದಲ್ಲಿ ಬಿಳಿ ಬಲೆ ಕಟ್ಟಿಕೊಂಡು ಅದರೊಳಗೆ ಕುಳಿತು ಕೊಳ್ಳುವ ಈ ಬಿಳಿ ಕೀಟ ನೋಡುವುದಕ್ಕೆ ಪುಟ್ಟ ನೊಣದ ರೀತಿ ಕಾಣುತ್ತದೆ. ಚಿಟ್ಟೆಯಂತೆ ಒಂದು ಗರಿಯಿಂದ ಮತ್ತೊಂದು ಗರಿಗೆ ಹಾರಾಡುತ್ತವೆ. ರಾತ್ರಿ ಸಂದರ್ಭದಲ್ಲಿ ಕುಳಿತಲ್ಲೇ ಕುಳಿತು ಗರಿಯಲ್ಲಿನ ರಸವನ್ನು ಹೀರುತ್ತದೆ. ಪರಿಣಾಮ ಗರಿಗಳು ಕಪ್ಪಾಗುತ್ತದೆಯಲ್ಲದೆ ತೆಂಗಿನ ಹರಳುಗಳು ಉದುರುತ್ತಿವೆ. ತೆಂಗಿನ ಗರಿಗಳ ಬೆಳವಣಿಗೆ ಹಾಗೂ ಇಳುವರಿ ಎರಡೂ ಕುಂಠಿತವಾಗಿ ಕ್ರಮೇಣ ಇಡೀ ಮರ ಕಪ್ಪು ಬಣ್ಣಕ್ಕೆ ತಿರುಗುತ್ತಿವೆ.

      ತಮ್ಮಡಿಹಳ್ಳಿ ಗೊಲ್ಲರಹಟ್ಟಿಯ ಒಂದೆರಡು ಮರಗಳಲ್ಲಿ ಕಾಣಿಸಿಕೊಂಡ ಈ ಬಿಳಿ ಕೀಟ ಈಗ ಒಂದು ಮರದಿಂದ ಒಂದು ಮರಕ್ಕೆ ಹಬ್ಬುತ್ತಿದೆ. ಇದರಿಂದ ತೆಂಗಿನ ತೋಟಗಳು ಸಾಂಕ್ರಾಮಿಕವಾಗಿ ಈ ರೋಗಕ್ಕೆ ತುತ್ತಾಗಿ ಈಗಾಗಲೇ ನೂರಾರು ಫಲಭರಿತ ಮರ ಹಾಗೂ ಸಸಿಗಳು ಸೊರಗಿವೆ. ಅಲ್ಲದೆ ಕೀಟ ಹಬ್ಬಿರುವ ರೈತರ ಅಕ್ಕಪಕ್ಕದ ರೈತರ ನೆಮ್ಮದಿಗೆ ಭಂಗ ತಂದಿವೆ.

      ಅರಸೀಕೆರೆ, ತಿಪಟೂರು ಬಿಟ್ಟರೆ ಚಿಕ್ಕನಾಯಕನಹಳ್ಳಿ ತಾಲೂಕು ಹೆಚ್ಚು ತೆಂಗು ಬೆಳೆಯುವ ಪ್ರದೇಶವಾಗಿದೆ. ಇಲ್ಲಿನ ಸಾವಿರಾರು ಕುಟುಂಬಗಳು ತೆಂಗು ನಂಬಿ ಜೀವನ ನಡೆಸುತ್ತಿವೆ. ಸಾವಿರ ಅಡಿ ಆಳಕ್ಕೆ ಕೊಳವೆ ಬಾವಿ ಕೊರೆಸಿ ನೀರು ಮೇಲೆತ್ತಿ ತೆಂಗು ಬೆಳೆಯುತ್ತಿದ್ದಾರೆ. ಬರಗಾಲದಲ್ಲಿ ಟ್ಯಾಂಕರ್‍ನಲ್ಲಿ ನೀರು ಹೊಡೆಸಿ ತೆಂಗನ್ನು ಉಳಿಸಿಕೊಂಡಿರುವ ನಿದರ್ಶನವಿದೆ. ಆದರೆ ಈ ಬಿಳಿ ಕೀಟ ರೈತರ ನಿದ್ದೆಗೆಡಿಸಿದ್ದು ಇದರಿಂದ ತೆಂಗು ಉಳಿಸುವ ಸವಾಲು ಎದುರಾಗಿದೆ.

      ಆರಂಭದಲ್ಲಿ ಕೀಟಗಳ ಹಾವಳಿ ತಡೆದರೆ ವ್ಯಾಪಕವಾಗಿ ತೋಟದಿಂದ ತೋಟಕ್ಕೆ ಹಬ್ಬುವುದನ್ನು ತಡೆಯಬಹುದಾಗಿದೆ. ಆದರೆ ತೋಟಗಾರಿಗೆ ಇಲಾಖೆ ಏಕೋ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಬಿಳಿ ಕೀಟ ತಗುಲಿದ ತಕ್ಷಣ ಮಾಹಿತಿ ನೀಡಿದರೂ ಇಲ್ಲಿಯವರೆವಿಗೆ ಬಂದು ನೋಡಿಲ್ಲ ಎಂಬುದು ರೈತರ ಆರೋಪವಾಗಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಕೀಟಗಳ ಹತೋಟಿಗೆ ಮುಂದಾಗುವರೆ ಎಂಬದನ್ನು ಕಾದು ನೋಡಬೇಕಿದೆ.

ಇಲಾಖೆಯಲ್ಲಿ ಔಷಧಿ ಇಲ್ಲ :

      ಹೌದು, ನಮ್ಮ ಭಾಗದಲ್ಲಿ ತೆಂಗಿಗೆ ಬಿಳಿ ಹುಳು ಕಾಟ ಆರಂಭವಾಗಿದೆ. ಇದಕ್ಕೆ ರ್ಯೂಗೊಸ್ ವೈಟ್ ಪ್ಲೈ ಅಂತಾರೆ ಇದಕ್ಕೆ 1 ಲೀಟರ್ ನೀರಿಗೆ 1 ಎಂಎಲ್ ಬೇವಿನ ಎಣ್ಣೆ ಹಾಕಿ ಸಿಂಪಡಣೆ ಮಾಡುವುದು ಹಾಗೂ ಎಕರೆಗೆ 3-4 ಆಕರ್ಷಕ ಬಲೆ ಇಟ್ಟರೆ ಕೀಟಗಳು ಬಂದು ಅಂಟಿಕೊಳ್ಳುತ್ತವೆ. ಸದ್ಯಕ್ಕೆ ಇಷ್ಟು ಬಿಟ್ಟರೆ ಬೇರೆ ಯಾವುದೇ ಔಷದೋಪಚಾರ ಇಲ್ಲ. ಇಲಾಖೆಯಲ್ಲಿ ಬಿಳಿ ಹುಳು ರೋಗಕ್ಕೆ ಔಷಧಿ ಸಪ್ಲೈ ಇಲ್ಲ. ಬೇವಿನ ಎಣ್ಣೆಯೂ ಸಹ ಸ್ಟಾಕ್ ಇದ್ದರೆ ಕೊಡ್ತಿವಿ, ಇಲ್ಲವೆಂದರೆ ಇಲ್ಲ. ರೈತರು ತಮ್ಮ ಭಾಗದ ತೋಟಗಾರಿಗೆ ಅಧಿಕಾರಿಗಳನ್ನು ವಿಚಾರಿಸಲಿ.

-ಸಿ.ಚಿತ್ತೇಶ್, ಸಹಾಯಕ ನಿರ್ದೇಶಕರು, ತೋಟಗಾರಿಗೆ ಇಲಾಖೆ, ಚಿಕ್ಕನಾಯಕನಹಳ್ಳಿ

-ಎಚ್.ಬಿ.ಕಿರಣ್‍ಕುಮಾರ್

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link