ಬೆಂಗಳೂರು:
ಲೋಕಸಭೆ ಚುನಾವಣೆ ಮುಗಿದು ಫಲಿತಾಂಶ ಹೊರಬಿದ್ದಿದೆ. ಈಗ ನೀತಿ ಸಂಹಿತೆ ಕೊನೆಗೊಳ್ಳಲಿದ್ದು ಅಭಿವೃದ್ಧಿ ಚಟುವಟಿಕೆಗಳಿಗೆ ಚಾಲನೆ ಸಿಗಲಿದೆ.
ಹದಿನೆಂಟನೆ ಲೋಕಸಭೆ ಚುನಾವಣೆಗೆ ಮಾರ್ಚ್ 16ರಂದು ಕೇಂದ್ರ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿತ್ತು. ಆ ದಿನದಿಂದಲೇ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿತ್ತು.
ಅಲ್ಲಿಂದ ಜೂನ್ 6 ರವರೆಗೆ ಅಂದರೆ ಸುಮಾರು 85 ಸುದೀರ್ಘ ದಿನಗಳ ಕಾಲ ರಾಜ್ಯದಲ್ಲಿ ತರ್ತು ಸಂದರ್ಭಗಳು ಹೊರತುಪಡಿಸಿ ದೈನಂದಿನ ಆಡಳಿತ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ನಿರ್ಬಂಧ ಬಿದ್ದಿತ್ತು. ಇದೀಗ ಜೂನ್ 6ಕ್ಕೆ ನೀತಿ ಸಂಹಿತೆ ಕೊನೆಗೊಳ್ಳಲಿದ್ದು, ಎಲ್ಲಾ ಅಡೆತಡೆಗಳು ದೂರವಾಗಿ ಆಡಳಿತ ಯಂತ್ರಕ್ಕೆ ಚಾಲನೆ ಸಿಗಲಿದೆ.
ಚುನಾವಣಾ ನೀತಿ ಸಂಹಿತೆ ಜಾರಿಯಾಗುವುದಕ್ಕಿಂತ ಮುಂಚೆ ಅನುಷ್ಠಾನಗೊಂಡ ಕಾಮಗಾರಿಗಳು, ಕಾರ್ಯಾದೇಶಗಳು, ಘೋಷಣೆಗಳ ಅನುಷ್ಠಾನಕ್ಕೆ ನಿರ್ಬಂಧ ಇರಲಿಲ್ಲ. ಆದರೆ, ಹೊಸ ಘೋಷಣೆಗಳಿಗೆ ಅವಕಾಶ ಇರಲಿಲ್ಲ. ಸರ್ಕಾರದ ಸಚಿವರು ಸಭೆಗಳನ್ನು ನಡೆಸುವಂತಿರಲಿಲ್ಲ. ಆದರೆ, ಬರ-ಪ್ರವಾಹದಂತಹ ಪ್ರಾಕೃತಿಕ ವಿಕೋಪಗಳ ನಿರ್ವಹಣೆ, ಬಿತ್ತನೆ ಬೀಜ-ಗೊಬ್ಬರಗಳ ಪೂರೈಕೆ, ಶಾಲಾ-ಸಮವಸ್ತ್ರ-ಪಠ್ಯಪುಸ್ತಕ ಪೂರೈಕೆಗೆ ಟೆಂಡರ್ ಕರೆಯುವ ವಿಚಾರ ಸೇರಿದಂತೆ ತುರ್ತು ಹಾಗೂ ಕಾಲಬದ್ಧವಾಗಿ ಮಾಡಬೇಕಾದ ಕೆಲಸಗಳಿಗೆ ಮುಖ್ಯ ಕಾರ್ಯದರ್ಶಿ ನೇತೃತ್ವದ ಸ್ಕ್ರೀನಿಂಗ್ ಕಮಿಟಿ ಚುನಾವಣಾ ಆಯೋಗದ ಅನುಮತಿ ಪಡೆದು, ಮುಂದಿನ ಕ್ರಮಗಳನ್ನು ಕೈಗೊಳ್ಳುತ್ತಿತ್ತು.
ಉಳಿದಂತೆ ಸಚಿವರು, ಇಲಾಖಾ ಅಧಿಕಾರಿಗಳಿಗೆ ಸೀಮಿತ ಅಧಿಕಾರ ಇತ್ತು. ಈಗ ಗುರುವಾರದಿಂದ (ಜೂ.6) ಇದಕ್ಕೆಲ್ಲ ಮುಕ್ತಿ ಸಿಗಲಿದ್ದು, ಆಡಳಿತಕ್ಕೆ ವೇಗ ಸಿಗಲಿದೆ.
ರಾಜ್ಯದಲ್ಲಿ ಏಪ್ರಿಲ್ 26ರಂದು ಮೊದಲ ಹಂತದಲ್ಲಿ ಹಾಗೂ ಮೇ 7ರಂದು ಎರಡನೇ ಹಂತದಲ್ಲಿ ಮತದಾನ ನಡೆದಿತ್ತು. ಎರಡನೇ ಹಂತದ ಮತದಾನ ಮುಗಿದ ಬಳಿಕ ಚುನಾವಣಾ ನೀತಿ ಸಂಹಿತೆ ಸಡಿಲಿಕೆಗೆ ರಾಜ್ಯ ಸರ್ಕಾರ ಮನವಿ ಮಾಡಿತ್ತು. ಆದರೆ, ಚುನಾವಣಾ ಆಯೋಗ ಅದು ಸಾಧ್ಯವಿಲ್ಲ ಎಂದು ಹೇಳಿತ್ತು. ಆದಾಗ್ಯೂ ಸಿಎಂ, ಸಚಿವರು ಸಭೆಗಳನ್ನು ನಡೆಸುವುದು ಸೇರಿದಂತೆ ಕೆಲವೊಂದು ವಿನಾಯಿತಿಗಳನ್ನು ಚುನಾವಣಾ ಆಯೋಗ ನೀಡಿತ್ತು.
