ಬೆಂಗಳೂರು:
ವಿಧಾನ ಪರಿಷತ್ ನಲ್ಲಿ ಶುಭ ಶಕುನ ಕುರಿತು ಶುಕ್ರವಾರ ಚರ್ಚೆಯಾಗಿದ್ದು, ಬಿಜೆಪಿ ನಾಯಕರ ಪ್ರಶ್ನೆ, ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರ ಪ್ರತಿಕ್ರಿಯೆಗೆ ಸದನ ನಗೆಗಡಲಲ್ಲಿ ತೇಲಿದ ಪ್ರಸಂಗ ನಡೆಯಿತು.ನೀವು ಅತ್ಯಂತ ಪ್ರಸನ್ನರಾಗಿದ್ದು, ಬಹಳ ಲವಲವಿಕೆಯಿಂದ ಇದ್ದೀರಿ, ಶುಭ ಶಕುನ ಏನಾದರೂ ಸಿಕ್ಕಿದೆಯೇ ಎಂದು ಬಿಜೆಪಿ ಸದಸ್ಯ ಸಿ.ಟಿ ರವಿ ಅವರು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಪ್ರಶ್ನಿಸಿದರು. ಇದಕ್ಕೆ ಎನ್ ರವಿಕುಮಾರ್ ಅವರೂ ಕೂಡ ಧ್ವನಿ ಗೂಡಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ಸಂತೋಷಂ ಜನೇತ್ ಪ್ರಾಜ್ಞಃ ತದೈವ ಈಶ್ವರಂ ಪೂಜ್ಯಂ ಎಂಬ ಶ್ಲೋಕವು ಜನರನ್ನು ಸಂತೋಪಡಿಸುವುದೇ ನಿಜವಾದ ಈಶ್ವರನ ಪೂಜೆ ಎಂಬ ಸಂದೇಶ ನೀಡುತ್ತದೆ. ಅದೇ ರೀತಿ ನಿಮಗೆ ಸಂತೋಷಪಡಿಸಿದರೆ ನಾನು ಸಂತೋಷ ಪಟ್ಟಂತೆ. ಆ ಪ್ರಯತ್ನದಲ್ಲಿ ನಾನಿದ್ದೇನೆ” ಎಂದು ನಗುತ್ತಲೇ ತಿರುಗೇಟು ನೀಡಿದರು.
ನಿಮಗೆ ಸಂತೋಷವಾಗುವ ಸುದ್ದಿ ಬರುವುದು ಯಾವಾಗ ಎಂದು ರವಿಕುಮಾರ್ ಅವರು ಮರು ಪ್ರಶ್ನೆ ಹಾಕಿದಾಗ, ಡಿ.ಕೆ.ಶಿವಕುಮಾರ್ ಅವರು ಪ್ರತಿಕ್ರಿಯಿಸಿ “ನಾನು 1984ರಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದು, ಅಂದಿನಿಂದ ಇಲ್ಲಿಯವರೆಗೂ ಹಂತ ಹಂತವಾಗಿ ಮೇಲೇರುತ್ತಿದ್ದೇನೆ. ನಿಮ್ಮ ಸಹಕಾರ, ಶುಭ ಹಾರೈಕೆ ಇರಲಿ. ನಿಮ್ಮ ಕಾಟದಿಂದಲೇ ನಾನು ಸ್ವಲ್ಪ ಕೆಳಗೆ ಕುಸಿದಿದ್ದೇನೆ. ನನ್ನನ್ನು ತಿಹಾರ್ ಜೈಲಿಗೆ ಕಳುಹಿಸಿ ಈಗ ಈ ರೀತಿ ಕೇಳುತ್ತಿದ್ದಾರೆ ಎಂದು ಕಾಲೆಳೆದರು.
ಆಗ ಸಭಾಪತಿ ಬಸವರಾಜ ಹೊರಟ್ಟಿ ಅವರು ಮಾತನಾಡಿ, ಉಪಮುಖ್ಯಮಂತ್ರಿಗಳೇ ಇಂದು ಎಲ್ಲರೂ ನಿಮ್ಮನ್ನು ಬಹಳ ಹೊಗಳಿದ್ದಾರೆ. ಸಂಜೆವರೆಗೂ ಬಹಳ ಹುಷಾರಾಗಿರಿ ಎಂದು ಎಚ್ಚರಿಕೆ ನೀಡಿದರು.
