ಕಮಿಷನರ್‌ ಕಚೇರಿ ಆವರಣದಲ್ಲೇ ಆರೋಪಿಯ ಕಾರಿನಿಂದ 11 ಲಕ್ಷ ರೂ. ಎಗರಿಸಿದ ಪೊಲೀಸ್‌ ಸಿಬ್ಬಂದಿ!

ಬೆಂಗಳೂರು

     ಸಿದ್ದಾಪುರ ಬ್ಯಾಂಕ್‌ ಎಟಿಎಂ ದರೋಡೆಯಲ್ಲಿ  ಪೊಲೀಸ್‌ ಕಾನ್‌ಸ್ಟೇಬಲ್‌ ಕೈವಾಡದ ಪ್ರಕರಣ ಮಾಸುವ ಮುನ್ನವೇ ಮತ್ತೊಬ್ಬ ಪೊಲೀಸ್ ಸಿಬ್ಬಂದಿಯ ಮೇಲೆ ಕಳ್ಳತನ  ಆರೋಪ ಬಂದಿದೆ. ಪೊಲೀಸ್ ಆಯುಕ್ತರ ಕಚೇರಿಯ ಆವರಣದಲ್ಲಿಯೇ ಕಳ್ಳತನ ನಡೆದಿದೆ. ಸೈಬರ್ ಪ್ರಕರಣದ  ಆರೋಪಿಯನ್ನು ವಿಚಾರಣೆಗೆ ಕರೆತಂದಾಗ ಆತನ ಕಾರಿನಲ್ಲಿದ್ದ 11 ಲಕ್ಷ ರೂ. ಹಣದ ಬ್ಯಾಗ್ ಅನ್ನು ಹೆಡ್ ಕಾನ್ಸ್‌ಟೇಬಲ್‌  ಜಬೀವುಲ್ಲಾ ಎಂಬಾತ ಕದ್ದಿರುವ  ಆರೋಪ ಕೇಳಿಬಂದಿದೆ.

    ಹಣ ಕಳ್ಳತನ ಮಾಡಿ ತನಗೇನೂ ಗೊತ್ತೇ ಇಲ್ಲ ಎನ್ನುವಂತೆ ಜಬೀವುಲ್ಲಾ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಇತ್ತ ಆರೋಪಿಯನ್ನು ಬಂಧಿಸಿದ್ದ ಇನ್‌ಸ್ಪೆಕ್ಟರ್ ಉಮೇಶ್ ಮತ್ತು ಟೀಂ ಆತನನ್ನು ಜೈಲಿಗಟ್ಟಿತ್ತು. ಬಳಿಕ ಜಾಮೀನು ಪಡೆದು ಹೊರಬಂದ ಆರೋಪಿ ತನ್ನ ಕಾರಿನಲ್ಲಿ ಇದ್ದ ಹಣದ ಬ್ಯಾಗ್ ನಾಪತ್ತೆ ಆಗಿರುವುದನ್ನ ನೋಡಿ ಈ ಬಗ್ಗೆ ಸೈಬರ್ ಪೊಲೀಸರ   ಬಳಿ ಪ್ರಶ್ನೆ ಮಾಡಿದ್ದಾನೆ. ಪರಿಶೀಲನೆ ಮಾಡಿದಾಗ, ಕಾರಿನಲ್ಲಿದ್ದ ಹಣವನ್ನು ಜಬೀವುಲ್ಲಾ ತೆಗೆದುಕೊಂಡು ಹೋಗಿರುವುದು ಗೊತ್ತಾಗಿದೆ.

     ಸಿಸಿಟಿವಿ ಕ್ಯಾಮೆರಾದಲ್ಲಿ ಜಬೀವುಲ್ಲಾ ಹಣದ ಬ್ಯಾಗ್ ಕಳ್ಳತನ ಮಾಡಿರುವುದು ಗೊತ್ತಾಗಿದೆ. ಸುಮಾರು 11 ಲಕ್ಷ ಹಣ ಕಳ್ಳತನ ಮಾಡಿ ಹೆಡ್ ಕಾನ್‌ಸ್ಟೇಬಲ್‌ ಜಬಿವುಲ್ಲಾ ಆರಾಮಾಗಿ ಓಡಾಡಿಕೊಂಡಿದ್ದ. ಘಟನೆಯ ಬಗ್ಗೆ ಸಿಸಿಬಿ ಡಿಸಿಪಿ ರಾಜಾ ಇಮಾಮ್ ಖಾಸಿಂಗೆ ಹಣ ಕಳೆದುಕೊಂಡ ವ್ಯಕ್ತಿ ದೂರು ನೀಡಿದ್ದರು. ದೂರು ಪಡೆದುಕೊಂಡು ಕಾನ್ಸ್‌ಟೇಬಲ್‌ ಜಬೀವುಲ್ಲಾ ಮನೆ ಸರ್ಚ್ ಮಾಡಲು ತೆರಳಿದಾಗ ಮನೆಯ ಬಳಿ ಜಬೀವುಲ್ಲಾ ಹೈಡ್ರಾಮಾ ಮಾಡಿದ್ದಾನೆ. ಮನೆಯ ಒಳಗೆ ಸೈಬರ್ ಪೊಲೀಸರನ್ನ ಬಿಡದೆ ಗಲಾಟೆ ಮಾಡಿದ್ದಾನೆ. ಮನೆ ಸರ್ಚ್‌ ಮಾಡಿದಾಗ ಆತನ ಕೋಣೆಯ ಬೆಡ್ ಕೆಳಗೆ ಲಕ್ಷ ಲಕ್ಷ‌ ಹಣ ಜೋಡಿಸಿಟ್ಟಿದ್ದು ಬಯಲಾಗಿದೆ. ಅಲ್ಲದೇ ಕದ್ದ ಹಣದಿಂದಲೇ ಪತ್ನಿಗೆ ಒಡೆವೆಗಳನ್ನೂ ಕೊಡಿಸಿದ್ದ ಅನ್ನೋದು ಕಂಡುಬಂದಿದೆ. ಸದ್ಯ ಹೆಡ್ ಕಾನ್ಸ್‌ಟೇಬಲ್‌ ಜಬಿವುಲ್ಲಾ 2 ಲಕ್ಷ ರೂ. ಹಣ ವಾಪಸ್ ಕೊಟ್ಟಿದ್ದಾನೆ. ಉಳಿದ ಹಣ ವಾಪಸ್‌ ಕೊಡುವಂತೆ ಹಿರಿಯ ಅಧಿಕಾರಿಗಳು ತಾಕೀತು ಮಾಡಿದ್ದಾರೆ. 

    ಸಿದ್ದಾಪುರ ದರೋಡೆ ಕೇಸ್‌ನಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಅಣ್ಣಪ್ಪ ನಾಯಕ್ ಬಂಧನವಾಗಿದ್ದರೆ, ಜೆ.ಪಿ‌ ನಗರದಲ್ಲಿ ಸೀನಿಯರ್ ಸಿಟಿಜನ್ ಬಳಿ ಹಣ‌ ಪಡೆದ ಹಿನ್ನೆಲೆ ಇಬ್ಬರ ಅಮಾನತು ಮಾಡಲಾಗಿತ್ತು. ಬೆಳ್ಳಂದೂರು ಪೊಲೀಸರ ಮೇಲೆ ಸಾವಿನಲ್ಲೂ ಹಣ ಪಡೆದ ಆರೋಪ ಬಂದಿತ್ತು. ಇದೀಗ ಸೈಬರ್ ಠಾಣೆಯ ಸಿಬ್ಬಂದಿ ಹೆಡ್ ಕಾನ್ಸ್‌ಟೇಬಲ್‌ ಜಬಿವುಲ್ಲಾ ಮೇಲೆ ಕಳ್ಳತನದ ಆರೋಪ ಬಂದಿದ್ದು, ದೂರು ಪಡೆದಿರುವ ಪೊಲೀಸರಿಂದ‌ ಪ್ರಕರಣ ಮುಚ್ಚಿ ಹಾಕಲು ಯತ್ನ ನಡೆದಿದೆ ಎಂಬ ಆರೋಪ ಸಹ ಕೇಳಿ ಬಂದಿದೆ.

Recent Articles

spot_img

Related Stories

Share via
Copy link