ಶಿವಮೊಗ್ಗ:
ಮತೀಯ ಭಾವನೆ ಕೆರಳಿಸುವ ಘಟನೆಗಳು ಶಿವಮೊಗ್ಗದಲ್ಲಿ ಹಿಂದಿನಿಂದಲೂ ಆಗಿವೆ. 1948ರಿಂದ ಆರಂಭವಾದ ಕೋಮು ಸಂಘರ್ಷ ಈವರೆಗೂ ಮುಗಿದಿಲ್ಲ. ಸ್ವಾತಂತ್ರÂ ಪೂರ್ವದಲ್ಲೂ ಹಿಂದೂ-ಮುಸ್ಲಿಂ ಸಂಘರ್ಷಕ್ಕೆ ಮಲೆನಾಡಿನ ನೆಲ ಸಾಕ್ಷಿಯಾಗಿದೆ.
ಪ್ರತೀ ಬಾರಿ ಸಂಘರ್ಷ ನಡೆದಾಗಲೂ ಅಮಾಯಕರು ಬಲಿಯಾಗಿದ್ದಾರೆ.
1947; ಶಿವಮೂರ್ತಿ :
26-10-1947. ಇದು ಸ್ವಾತಂತ್ರ್ಯ ಬಂದ ವರ್ಷವೇ ನಡೆದ ಘೋರ ಘಟನೆ. 1940ರಲ್ಲೇ ಶಿವಮೊಗ್ಗದಲ್ಲಿ ಹಿಂದೂ ಮಹಾಸಭಾ ಸ್ಥಾಪನೆಯಾಗಿರುತ್ತದೆ. ವೀರ್ ಸಾರ್ವಕರ್ ಅವರು 1944ರಲ್ಲಿ ಶಿವಮೊಗ್ಗಕ್ಕೆ ಆಗಮಿಸಿ ಗಣೇಶ ಉತ್ಸವ ಆರಂಭಿಸುವಂತೆ ಕರೆ ನೀಡಿದ್ದರು. 1945, 46ರಲ್ಲಿ ಗಣೇಶ ಉತ್ಸವ ನಡೆಯುತ್ತದೆ.
ಆ ಸಂದರ್ಭ ಮಸೀದಿಯ 100 ಗಜ ಆಚೆ ಹಾಗೂ ಈಚೆ ಮಂಗಳವಾದ್ಯ ನುಡಿಸಬಾರದೆಂಬ ಅಲಿಖೀತ ನಿಯಮವಿರುತ್ತದೆ. 1945, 46ರಲ್ಲಿ ಅದೇ ರೀತಿ ಮೆರವಣಿಗೆ ನಡೆಯುತ್ತದೆ. 1947, ಅ. 26ರಂದು ಸ್ವಾತಂತ್ರÂ ಬಂದ ಮೇಲೂ ಈ ನಿಯಮ ಏಕೆ ಎಂದು ಮಂಗಳವಾದ್ಯ ನುಡಿಸಲು ಹಿರಿಯರು ತೀರ್ಮಾನಿಸಿ ಮೆರವಣಿಗೆಗೆ ಚಾಲನೆ ನೀಡುತ್ತಾರೆ.
ಧರಂಸಿಂಗ್ ಅವರು ತುತ್ತೂರಿ ಊದುತ್ತಾ ಮಸೀದಿ ಮುಂದೆ ಸಾಗುತ್ತಿದ್ದಂತೆ ಕಲ್ಲು, ಗಾಜು, ಸೋಡಾ ಬಾಟಲಿಗಳು ಗಣೇಶ ಮೂರ್ತಿ ಮೇಲೆ ತೂರಿ ಬಂದಿದ್ದವು. ಆ ವೇಳೆ ಶಿವಮೂರ್ತಿ ಎನ್ನುವ 26 ವರ್ಷದ ಯುವಕ ಗಣೇಶ ಮೂರ್ತಿ ಭಗ್ನ ಆಗುವುದನ್ನು ತಪ್ಪಿಸಲು ಅಡ್ಡ ನಿಲ್ಲುತ್ತಾನೆ. ಹೊಡೆದಾಟದಲ್ಲಿ ಶಿವಮೂರ್ತಿ ಹುತಾತ್ಮನಾಗುತ್ತಾರೆ.
ಅನಂತರ ಗಲಭೆ ನಡೆದು ಕೊನೆಗೆ ಪೊಲೀಸರೇ ಗಣೇಶ ಮೂರ್ತಿ ವಿಸರ್ಜನೆ ಮಾಡುತ್ತಾರೆ. ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿ ಅಂತಿಮವಾಗಿ ಧಾರ್ಮಿಕ ಸ್ವಾತಂತ್ರÂದ ಅಡಿಯಲ್ಲಿ ಮಸೀದಿ ಮುಂದೆ ಮಂಗಳ ವಾದ್ಯ ನುಡಿಸಬಹುದೆಂದು ತೀರ್ಪು ನೀಡುತ್ತದೆ. ಹುತಾತ್ಮ ಶಿವಮೂರ್ತಿ ನೆನಪಿಗೆ ಕುವೆಂಪು ರಸ್ತೆಯ ಸರ್ಕಲ್‌ಗೆ ವೀರ ಶಿವಮೂರ್ತಿ ಸರ್ಕಲ್ ಎಂದು ಹೆಸರಿಡಲಾಗಿದೆ.
1983-ಗೋವಿಂದ ರಾಜು :
ಇಡೀ ದೇಶದಲ್ಲಿ ಪ್ರಥಮ ಬಾರಿಗೆ ಹಿಂದೂ ಸಮಾಜೋತ್ಸವ ಶಿವಮೊಗ್ಗದಲ್ಲಿ ನಡೆದಿತ್ತು. ಸಾವಿರಾರು ಜನ ಹಿಂದೂ ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ. ಈ ವೇಳೆ ಕಿಡಿಗೇಡಿಗಳಿಂದ ಕಲ್ಲು, ಬಾಟಲಿ, ಗಾಜು ತೂರಿ ಬಂದವು. ಇದರಿಂದ ನಗರ ಉದ್ವಿಗ್ನಗೊಂಡು ಎಲ್ಲ ಕಡೆ ಗಲಾಟೆ, ಕಲ್ಲು ತೂರಾಟ ಆರಂಭವಾಗುತ್ತದೆ.
ಈ ವೇಳೆ ನ್ಯಾಶನಲ್ ಲಾ ಕಾಲೇಜಿನ ಪ್ರಾಧ್ಯಾಪಕಾರಾಗಿದ್ದ ಗೋವಿಂದ ರಾಜು ಅವರು ಸ್ಕೂಟರ್ ಮೇಲೆ ಮನೆ ಕಡೆ ಹೋಗುತ್ತಿದ್ದರು. ಈ ವೇಳೆ ದುಷ್ಕರ್ಮಿಯೊಬ್ಬ ಎಳನೀರು ಕೊಚ್ಚುವ ಕತ್ತಿಯಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದ. ಅಮಾಯಕ ಗೋವಿಂದರಾಜು ಹತ್ಯೆ ಅನಂತರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು.
1995- ಶಿವಕುಮಾರ್ :
25 ವರ್ಷದ ಹಿಂದೆ ಗಣಪತಿ ರಾಜಬೀದಿ ಮೆರವಣಿಗೆಯಲ್ಲಿ ಭಾಗವಹಿಸಿ ಮನೆ ಕಡೆ ಹೋಗುತ್ತಿದ್ದ ಶಿವಕುಮಾರ್ ಮೇಲೆ ಹಳೇ ವೈಷಮ್ಯದಿಂದ ಕುವೆಂಪು ರಂಗಮಂದಿರ ಬಳಿ ಹಲ್ಲೆ ಮಾಡಿ ಹತ್ಯೆ ಮಾಡಿದ್ದರು.
ಮರುದಿನ ಹತ್ಯೆ ವಿಚಾರ ತಿಳಿದುಬಂದಿತ್ತು. ಮೆರವಣಿಗೆ ನಡೆಸುವವರ ನಡುವಿನ ಭಿನ್ನಾಭಿಪ್ರಾಯದಿಂದ 1996ರಿಂದ 2002ರವರೆಗೆ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ ನಿಲ್ಲಿಸಲಾಗಿತ್ತು.
2004-ಗೋಕುಲ್ :
ಗಣೇಶ ವಿಸರ್ಜನ ಮೆರವಣಿಗೆ ಯಲ್ಲಿ ಉಂಟಾದ ಗಲಾಟೆಗೆ ಪ್ರತೀಕಾರ ತೀರಿಸಿಕೊಳ್ಳಲು ಭಜರಂಗ ದಳ ಕಾರ್ಯಕರ್ತ ಗೋಕುಲ್ ಎಂಬ ಯುವಕನನ್ನು ದುಷ್ಕರ್ಮಿಗಳು ಕೆಲ ದಿನಗಳ ನಂತರ ಭೀಕರವಾಗಿ ಹತ್ಯೆ ಮಾಡಿದರು. 9-01-2004ರಂದು ಗೋಕುಲ್ ಅವರು ಸಾರ್ವಜನಿಕ ಶೌಚಾಲಯ ಕಡೆ ಹೋಗುತ್ತಿದ್ದಾಗ ಏಕಾಏಕಿ ಬಂದ ಮತಾಂಧರು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದರು.
2010ರ ಕೋಮು ಗಲಭೆ :
ಮಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿಯಾಗಿ ಪತ್ರಿಕೆಯಲ್ಲಿ ಪ್ರಕಟವಾಗಿದೆ ಎಂದು ಆರೋಪಿಸಿ ಹೋಳಿ ಹಬ್ಬದ ದಿನ ಅಮೀರ್ ಅಹ್ಮದ್ ಸರ್ಕಲ್‌ನಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಇಬ್ಬರು ಬಲಿಯಾಗಿ ಗೋಲಿಬಾರ್ ಕೂಡ ನಡೆದಿತ್ತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹೆಣಗಾಡಿದ್ದರು.
2015-ವಿಶ್ವನಾಥ ಶೆಟ್ಟಿ :
2015, ಫೆ. 19ರಂದು ಶಿವಮೊಗ್ಗದಲ್ಲಿ ನಡೆದ ಪಿಎಫ್‌ಐ ಸಂಸ್ಥಾಪನ ದಿನಾಚರಣೆ ಅಂಗವಾಗಿ ನಡೆದ ರ್ಯಾಲಿಯು ಶಿವಮೊಗ್ಗ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿದೆ. ಈ ರ್ಯಾಲಿಯಲ್ಲಿ ಭಾಗವಹಿಸಲು ಹೊರ ಜಿಲ್ಲೆ, ರಾಜ್ಯದಿಂದ ಬಂದ ಕೆಲವರು ಹಿಂದೂಪರ ಬ್ಯಾನರ್‌ಗಳಿಗೆ ಬೆಂಕಿ ಹಚ್ಚಿದ್ದರು. ಇದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಇದೇ ಸಂದರ್ಭ ಗಾಜನೂರು ಬಳಿ ವಿಶ್ವನಾಥ ಶೆಟ್ಟಿ ಅವರ ಹತ್ಯೆ ನಡೆದಿತ್ತು.
ಬಜರಂಗದಳ ಕಾರ್ಯಕರ್ತ ನಾಗೇಶ್ ಮೇಲೆ ಹಲ್ಲೆ :
2020 ಡಿಸೆಂಬರ್‌ನಲ್ಲಿ ಹಳೇ ವೈಷಮ್ಯದಿಂದ ಬಜರಂಗ ದಳ ಕಾರ್ಯಕರ್ತ ನಾಗೇಶ್ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಇದರಿಂದ ಪರಿಸ್ಥಿತಿ ಬಿಗಡಾಯಿಸಿ ವಾರಗಟ್ಟಲೇ ಕರ್ಫ್ಯೂ, ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಈಗ ಬಜರಂಗದಳ ಕಾರ್ಯಕರ್ತ ಹರ್ಷನನ್ನು ಹೊಂಚು ಹಾಕಿ ಕೊಂದಿದ್ದಾರೆ.
ಶಿವಮೊಗ್ಗದ ಕೋಮು ಸಂಘರ್ಷಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದು ಇಷ್ಟು ದಿನ ಗಣೇಶ ಮೆರವಣಿಗೆಗೆ ಸೀಮಿತವಾಗಿದ್ದ ಸಂಘರ್ಷ ಈಗ ಹೊಂಚು ಹಾಕಿ ಹೊಡೆಯುವಷ್ಟು ಮಟ್ಟಕ್ಕೆ ಬೆಳೆದಿದೆ.
ಪ್ರತೀಕಾರವಿದ್ದರೂ, ಕೋಮು ಸೌಹಾರ್ದ :
ಹಿಂದೂ-ಮುಸ್ಲಿಂ ನಡುವೆ ಮಾತ್ರ ಗಲಾಟೆಗಳು, ಹತ್ಯೆ, ಪ್ರತೀಕಾರ ಗಳು ನಡೆಯುತ್ತಿದ್ದರೂ ಕೋಮು ಸೌಹಾರ್ದದ ವಾತಾವರಣವೂ ಶಿವಮೊಗ್ಗದಲ್ಲಿ ಇದೆ. ಪ್ರತಿ ಬಾರಿ ಸಂಘರ್ಷ ಏರ್ಪಟ್ಟಾಗಲೂ ಅಮಾಯಕ ಹಿಂದು, ಮುಸ್ಲಿಮರು ಸಾವನ್ನಪ್ಪಿದ್ದಾರೆ. ನಷ್ಟ ಅನುಭವಿಸಿದ್ದಾರೆ. ರಾಜಕೀಯ ಲಾಭ ಪಡೆಯುವವರಿಗೇನು ಕಡಿಮೆ ಇಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ