ತುಮಕೂರು:
ಹೆತ್ತ ತಂದೆಯಿಂದಲೇ ಮಗಳಿಗೆ ಲೈಂಗಿಕ ಕಿರುಕುಳ ನಡೆಯುತ್ತಿದೆ ಎಂದು ಆರೋಪಿಸಿ ಆ ಬಾಲಕಿಯ ತಾಯಿಯೇ ಪೊಲೀಸರಿಗೆ ದೂರು ಸಲ್ಲಿಸಿರುವ ಘಟನೆ ತಿಪಟೂರು ನಗರದ ಗಾಂಧಿನಗರದ ಹಿಪ್ಪೇತೋಪು ಎಂಬಲ್ಲಿ ನಡೆದಿದೆ. ಈ ಹಿನ್ನೆಲೆಯಲ್ಲಿ ತಿಪಟೂರು ನಗರ ಪೊಲೀಸ್ ಠಾಣೆಯಲ್ಲಿ ತಂದೆಯ ವಿರುದ್ಧ ಪೋಸ್ಕೋ ಪ್ರಕರಣ ದಾಖಲಾಗಿದೆ.
ಅತ್ತ, ದೂರು ದಾಖಲಾಗುತ್ತಲೇ ತಂದೆಯು ನಾಪತ್ತೆಯಾಗಿದ್ದಾನೆ. ಆತನಿಗಾಗಿ ಪೊಲೀಸರು ಶೋಧ ನಡೆಸಲಾರಂಭಿಸಿದ್ದಾರೆ. ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿರುವುದಾಗಿ ಮೇ 6ರಂದೇ ದೂರು ದಾಖಲಾಗಿತ್ತು. ಆದರೆ, ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಇವರದ್ದು ಬಡಕುಟುಂಬವಾಗಿದ್ದು, ಪತಿ – ಪತ್ನಿ ಇಬ್ಬರೂ ಕೂಲಿಗಾರರಾಗಿದ್ದಾರೆ. ಆದರೆ, ತಾಯಿ ಕೂಲಿ ಹೋದ ಸಂದರ್ಭದಲ್ಲಿ ಮನೆಯಲ್ಲೇ ಉಳಿಯುತ್ತಿದ್ದ ಪತಿಯು ತನ್ನ ಸ್ವಂತ 13 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ತಾಯಿ ತನ್ನ ದೂರಿನಲ್ಲಿ ವಿವರಿಸಿದ್ದಾರೆ. ಬಾಲಕಿಯು ಅಪ್ರಾಪ್ತೆಯಾಗಿರುವುದರಿಂದ ಆತನ ಮೇಲೆ ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ನಿಗ್ರಹ ಕಾಯ್ದೆ (ಪೋಕ್ಸೋ) ಪ್ರಕಾರ ದೂರು ದಾಖಲಾಗಿದೆ.