ರಾಹುಲ್‌ ಗಾಂಧಿ ವಿರುದ್ಧ ಹೈ ಗ್ರೌಂಡ್ಸ್‌ ಠಾಣೆಯಲ್ಲಿ ದೂರು ದಾಖಲು….!

ಬೆಂಗಳೂರು

   ಮೀಸಲಾತಿ ಬಗ್ಗೆ ಅಮೆರಿಕದಲ್ಲಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ   ನೀಡಿರುವ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ರಾಹುಲ್​ ಗಾಂಧಿ ವಿರುದ್ಧ ಹೈಗ್ರೌಂಡ್ಸ್ ಠಾಣೆಗೆ ಬಿಜೆಪಿಯಿಂದ  ದೂರು ಸಲ್ಲಿಸಲಾಗಿದೆ. ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್, ರಾಜಕುಮಾರ್ ಪಾಟೀಲ್, ಬಿಜೆಪಿ ಕಾನೂನು ಪ್ರಕೋಷ್ಠದ ಸಂಚಾಲಕ ವಸಂತಕುಮಾರ್​ ಸೇರಿ ಬಿಜೆಪಿ ನಾಯಕರು ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಗೆ ದೂರು ನೀಡಿದ್ದಾರೆ.

   ಇತ್ತೀಚೆಗೆ ಅಮೆರಿಕ ಪ್ರವಾಸ ಕೈಗೊಂಡ ಸಮಯದಲ್ಲಿ ರಾಹುಲ್‌ ಗಾಂಧಿ ಅವರು, ‘ಭಾರತದಲ್ಲಿ ಸಮಾನತೆಯ ಸ್ಥಿತಿ ಮೂಡಿದ ನಂತರ ಮೀಸಲಾತಿ ವ್ಯವಸ್ಥೆಯ ರದ್ದತಿ ಕುರಿತು ಕಾಂಗ್ರೆಸ್‌ ಪಕ್ಷ ಚಿಂತಿಸಲಿದೆ’ ಎಂದು ಹೇಳಿದ್ದರು. ನಂತರದ ಮಾಧ್ಯಮ ಸಂವಾದದಲ್ಲಿ, ‘ನಾನು ಮೀಸಲಾತಿಗೆ ವಿರುದ್ಧವಾಗಿ ಇದ್ದೇನೆ ಎಂಬಂತೆ ನನ್ನ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗಿದೆ. ಮೀಸಲಾತಿ ಮಿತಿಯನ್ನು ನಾವು ಶೇ 50 ಮೀರಿ ವಿಸ್ತರಿಸಲಿದ್ದೇವೆ’ ಎಂದು ಸ್ಪಷ್ಟಪಡಿಸಿದ್ದರು.

   ಈ ಸಂಬಂಧ ರಾಜ್ಯದೆಲ್ಲೆಡೆ, ಬಿಜೆಪಿ ವಲಯದಲ್ಲಿ ಆಕ್ರೋಶ ಭುಗಿಲೆದ್ದಿತ್ತು. ಬಿಜೆಪಿ ನಾಯಕರು ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದ್ದಾರೆ. ಸಂವಿಧಾನವನ್ನು ಗೌರವಿಸುವ ಯಾರೊಬ್ಬರೂ ರಾಹುಲ್‌ ಗಾಂಧಿ ಅವರ ನಡೆಯನ್ನು ಒಪ್ಪುವುದಿಲ್ಲ. ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರ ಇಂತಹ ನಿಲುವು ಅವರ ಸಂವಿಧಾನ ವಿರೋಧಿ ಮನಃಸ್ಥಿತಿ ತೋರಿಸುತ್ತದೆ ಎಂದು ಉಪ ರಾಷ್ಟ್ರಪತಿ ಜಗದೀಪ್‌ ಧನ್‌ಕರ್ ಅವರು ರಾಹುಲ್‌ ಗಾಂಧಿ ಅವರನ್ನು ಟೀಕಿಸಿದ್ದಾರೆ. 

   ರಾಹುಲ್ ಗಾಂಧಿ ಅವರ ನಾಲಗೆ ಕತ್ತರಿಸುವ ವ್ಯಕ್ತಿಗೆ 11 ಲಕ್ಷ ರೂಪಾಯಿ ನೀಡುವುದಾಗಿ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಬಣದ ಶಾಸಕ ಸಂಜಯ್‌ ಗಾಯಕ್‌ವಾಡ್‌ ಹೇಳಿದ್ದಾರೆ. ಇನ್ನು ಇತ್ತೀಚೆಗೆ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲಾಯಿತು. ಬಿಜೆಪಿ ಕಾರ್ಯಕರ್ತರು ರಾಹುಲ್ ಗಾಂಧಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.

Recent Articles

spot_img

Related Stories

Share via
Copy link
Powered by Social Snap