ನವದೆಹಲಿ:
ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರೆದಿದ್ದು, ಯುದ್ಧ ಭೀಕರತೆಗೆ ಕಂಗೆಟ್ಟ ಜನರು ಉಕ್ರೇನ್ ತೊರೆಯುತ್ತಿದ್ದಾರೆ. ಈ ನಡುವೆ ಉಕ್ರೇನ್ ನಲ್ಲಿರುವ ಭಾರತೀಯರ ರಕ್ಷಣೆಗೆ ತೊಡಕುಂಟಾಗಿದೆ ಎಂದು ತಿಳಿದುಬಂದಿದೆ.
ಉಕ್ರೇನ್ ನಲ್ಲಿರುವ ಭಾರತೀಯರ ಸ್ಥಳಾಂತರಕ್ಕೆಂದು ದೆಹಲಿಯಿಂದ ಉಕ್ರೇನ್ ಗೆ ತೆರಳಬೇಕಿದ್ದ ವಿಶೇಷ ವಿಮಾನಕ್ಕೆ ಅನುಮತಿ ಸಿಕ್ಕಿಲ್ಲ.
ಈ ಹಿನ್ನೆಲೆಯಲ್ಲಿ ಸಮಸ್ಯೆ ಎದುರಾಗಿದೆ.
ದೆಹಲಿ ಹಾಗೂ ಮುಂಬೈನಿಂದ ಎರಡು ವಿಶೇಷ ವಿಮಾನಗಳು ಉಕ್ರೇನ್ ಗೆ ತೆರಳಬೇಕಿತ್ತು. ಮುಂಬೈನಿಂದ ಹೊರಡಬೇಕಿದ್ದ ವಿಮಾನಕ್ಕೆ ಅನುಮತಿ ಸಿಕ್ಕಿದ್ದರಿಂದ ಈಗಾಗಲೇ ಉಕ್ರೇನ್ ಗೆ ತೆರಳಿದೆ. ಆದರೆ ದೆಹಲಿಯಿಂದ ಹೊರಡಬೇಕಿದ್ದ ವಿಮಾನಕ್ಕೆ ಅನುಮತಿ ಸಿಗದ ಕಾರಣ ವಿಳಂಬವಾಗುತ್ತಿದೆ.
ಈಗಾಗಲೇ ಉಕ್ರೇನ್ ನ ವಿವಿಧ ಭಾಗಗಳಲ್ಲಿ ಸಿಲುಕಿರುವ ಭಾರತೀಯರನ್ನು ವಿಶೇಷ ಬಸ್ ಗಳ ಮೂಲಕ ಗಡಿ ಭಾಗಕ್ಕೆ ಕರೆತರಲಾಗುತ್ತಿದೆ. ಈ ಮಧ್ಯೆ ಉಕ್ರೇನ್ ನಲ್ಲಿರುವ ಭಾರತೀಯರಿಗೆ ಧೈರ್ಯ ತುಂಬಿರುವ ಭಾರತೀಯ ರಾಯಭಾರ ಕಚೇರಿ ಯಾರೂ ಕೂಡ ಆತಂಕಕ್ಕೆ ಒಳಗಾಗಬೇಡಿ, ನಡೆದು ಗಡಿ ಭಾಗಕ್ಕೆ ಬರುವ ದುಸ್ಸಾಹಸ ಮಾಡದಂತೆ ಮನವಿ ಮಾಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
