ಬೆಳಗಾವಿ
ಬೆಳಗಾವಿ ಸುವರ್ಣಸೌಧದಲ್ಲಿ ಇಂದಿನಿಂದ ಆರಂಭವಾದ ವಿಧಾನಮಂಡಲದ ಚಳಿಗಾಲ ಅಧಿವೇಶನದಲ್ಲಿ ಅಗಲಿದ ಗಣ್ಯರಿಗೆ ಮೇಲ್ಮನೆಯಾದ ವಿಧಾನಪರಿಷತ್ನಲ್ಲಿ ಸಂತಾಪ ಸೂಚಿಸಲಾಯಿತು.ವಿಧಾನ ಪರಿಷತ್ತಿನ ಮಾಜಿ ಶಾಸಕರಾದ ಕೆ.ಎಚ್. ಶ್ರೀನಿವಾಸ, ಶುಭಲತಾ ವಸಂತ ಅಸ್ನೋಟಿಕರ್, ಕಾಲೇಬುಡ್ಡೆ ಇಸ್ಮಾಯಿಲ್ ಸಾಬ್, ನರೇಂದ್ರ ಖೇಣಿ, ಕೆ ನಿರಂಜನ ನಾಯ್ಡು, ಸಾವಿತ್ರಮ್ಮ ಎಂ ಗುಂಡಿ, ಮಾಜಿ ಸಚಿವರು ಹಾಗೂ ವಿಧಾನಸಭೆಯ ಮಾಜಿ ಉಪಾಧ್ಯಕ್ಷರಾಗಿದ್ದ ಮನೋಹರ್ ತಹಸೀಲ್ದಾರ, ರಾಷ್ಟ್ರಕಂಡ ಶ್ರೇಷ್ಠ ಕೈಗಾರಿಕೋದ್ಯಮಿ ಮತ್ತು ಮಾನವತಾವಾದಿ ರತನ್ ನಾವಲ್ ಟಾಟಾ, ಕಲಬುರಗಿ ಜಿಲ್ಲೆಯ ಖಾಜಾ ಬಂದೇ ನವಾಜ್ ವಿಶ್ವ ವಿದ್ಯಾಲಯದ ಕುಲಪತಿಗಳು ಹಾಗೂ ಶಿಕ್ಷಣ ತಜ್ಞರಾದ ಡಾ.ಸೈಯದ್ ಶಹಾ ಖುಸ್ರೊ ಹುಸೇನಿ, ಖ್ಯಾತ ಸಾಹಿತಿಗಳಾದ ರಾಜಶೇಖರ ನೀರಮಾನ್ವಿ ಅವರಿಗೆ ಸಂತಾಪ ಸೂಚಿಸಲಾಯಿತು.
ಆರಂಭದಲ್ಲಿ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರು ಸಂತಾಪ ಸೂಚನೆಯ ನಿರ್ಣಯದ ಪ್ರತಿಯನ್ನು ಸಭೆಗೆ ಮಂಡಿಸಿದರು.
ಸಂತಾಪ ನಿರ್ಣಯ ಬೆಂಬಲಿಸಿ ಮಾತನಾಡಿದ ಸಭಾ ನಾಯಕರಾದ ಸಚಿವ ಎನ್.ಎಸ್.ಭೋಸರಾಜು ಮತ್ತು ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಅವರು ಅಗಲಿದ ಗಣ್ಯರು ನಾಡಿಗೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು. ಇದೇ ಸಂದರ್ಭದಲ್ಲಿ ಮೃತರುಗಳ ಆತ್ಮಕ್ಕೆ ಸದ್ಗತಿಯನ್ನು ಕೋರಿದರು. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ಪರಮಾತ್ಮನು ಕರುಣಿಸಲೆಂದು ಪ್ರಾರ್ಥಿಸುವುದಾಗಿ ಹೇಳಿದರು.
ವಿಧಾನಪರಿಷತ್ನ ಶಾಸಕರು ಅಗಲಿದ ಗಣ್ಯರ ಸೇವೆ ಮತ್ತು ಒಡನಾಟ ಸೇರಿ ಇನ್ನೀತರ ವಿಷಯಗಳನ್ನು ಇದೇ ಸಂದರ್ಭದಲ್ಲಿ ಸ್ಮರಿಸಿಕೊಂಡರು.ಅಗಲಿದ ಗಣ್ಯರ ಗೌರವಾರ್ಥ ಮಾನ್ಯ ಶಾಸಕರು ಎದ್ದು ನಿಂತು ಒಂದು ನಿಮಿಷ ಮೌನಾಚರಣೆ ಮಾಡುವುದರ ಮೂಲಕ ನಮನ ಸಲ್ಲಿಸಿದರು.
ಅಗಲಿದ ಗಣ್ಯರ ವಿವರ
ಕೆ.ಎಚ್.ಶ್ರೀನಿವಾಸ್:
1938ರಲ್ಲಿ ಸಾಗರ ತಾಲೂಕಿನಲ್ಲಿ ಜನಿಸಿದ್ದ ಕೆ ಎಚ್ ಶ್ರೀನಿವಾಸ ಅವರು ಸಚಿವರಾಗಿ, ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ.ಇವರು ವಕೀಲರು ಮತ್ತು ಕೃಷಿಕರಾಗಿದ್ದರು. ದೇವರಾಜು ಅರಸು ಸಂಪುಟದಲ್ಲಿ ಇಂಧನ, ವಾರ್ತಾ, ಯುವಜನ ಸೇವೆ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಯೋಜನಾ ಸಚಿವರಾಗಿದ್ದರು. 1998 ರಿಂದ 2004ರವರೆಗೆ ಪರಿಷತ್ತಿನ ಶಾಸಕರಾಗಿ ಮತ್ತು ವಿರೋಧ ಪಕ್ಷದ ನಾಯಕರಾಗಿದ್ಧರು. ಶ್ರೀಯುತರು ಸಾಹಿತಿ ಸಂಗೀತ ಪ್ರೇಮಿಯಾಗಿದ್ದರು. 2024ರ ಆಗಸ್ಟ್ 30ರಂದು ನಿಧನರಾದರು.
ಶುಭಲತಾ ವಸಂತ ಅಸ್ನೋಟಿಕರ್:
1957ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲದಲ್ಲಿ ಜನಿಸಿದರು. 2004-2010ರ ಅವಧಿಯಲ್ಲಿ ವಿಧಾನ ಪರಿಷತಗೆ ಚುನಾಯಿತರಾಗಿ ಸೇವೆ ಸಲ್ಲಿಸಿದರು. ಕೂಲಿ ಕಾರ್ಮಿಕರ ಸಂಘದ ಸಲಹೆಗಾರರಾಗಿ ಸೇವೆ ಮಾಡಿದರು. 2024ರ ಸೆಪ್ಟೆಂಬರ್ 25ರಂದು ನಿಧನರಾದರು.
ಕಾಲೇಬುಡ್ಡೆ ಇಸ್ಮಾಯಿಲ್ ಸಾಬ್:
1937ರಲ್ಲಿ ಹುಬ್ಬಳ್ಳಿಯಲ್ಲಿ ಜನಿಸಿದರು. 1998-2004ರ ಅವಧಿಯಲ್ಲಿ ವಿಧಾನ ಪರಿಷತ್ಗೆ ಚುನಾಯಿತರಾಗಿದ್ಧರು. ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಿ ಕೋಮು ಸೌಹಾರ್ದತೆ ಉತ್ತೇಜಿಸಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು. 2024ರ ಅಕ್ಟೋಬರ್ 14ರಂದು ನಿಧನರಾದರು.
ನರೇಂದ್ರ ಖೇಣಿ:
1937ರಲ್ಲಿ ಜನಿಸಿದರು. ಬೀದರ ಜಿಲ್ಲೆಯ ಸ್ಥಳೀಯ ಸಂಸ್ತೆಗಳ ಕ್ಷೇತ್ರದಿಂದ ಎರಡು ಬಾರಿ ವಿಧಾನ ಪರಿಷತ್ತಿಗೆ ಚುನಾಯಿತರಾಗಿದ್ದರು. 2024ರ ಅಕ್ಟೋಬರ್ 8ರಂದು ನಿಧನರಾದರು.
ಕೆ.ನಿರಂಜನ ನಾಯ್ಡು:
1951 ರಲ್ಲಿ ಬಳ್ಳಾರಿಯಲ್ಲಿ ಜನಿಸಿದರು. ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ, ವಿಧಾನ ಪರಿಷತ್ತಿನ ನಾಮ ನಿರ್ದೇಶಿತ ಸದಸ್ಯರಾಗಿ ಸೇವೆ ಸಲ್ಲಿಸಿದರು. ಸಂಘಟಕರಾಗಿದ್ದರು. 2024ರ ನವೆಂಬರ್ 10 ರಂದು ನಿಧನರಾದರು.
ಸಾವಿತ್ರಮ್ಮ ಎಂ ಗುಂಡಿ:
1942ರಲ್ಲಿ ದಾವಣಗೆರೆಯಲ್ಲಿ ಜನಿಸಿದರು. ವೃತ್ತಿಯಲ್ಲಿ ವಕೀಲರಾಗಿದ್ಧರು. ಮಹಿಳಾ ಸಂಘಟಕರಾಗಿದ್ದರು. ಹುಬ್ಬಳ್ಳಿಯ ಕೊಳಗೇರಿ ನಿವಾಸಿಗಳ ಪುನರ್ವಸತಿಗಾಗಿ ಶ್ರಮಿಸಿದರು. ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರು. 2024ರ ನವೆಂಬರ್ 10 ರಂದು ನಿಧನರಾದರು.
ಮನೋಹರ ತಹಸೀಲ್ದಾರ್:
1946ದಲ್ಲಿ ಹರಿಹರದಲ್ಲಿ ಜನಿಸಿದರು. ಎಸ್ ಎಮ್ ಕೃಷ್ಣ ಅವರು ಸಿಎಂ ಆಗಿದ್ದಾಗ ವಿಧಾನಸಭೆಯ ಉಪ ಸಭಾಧ್ಯಕ್ಷರಾಗಿದ್ದರು. 4 ಬಾರಿ ವಿಧಾನಸಭೆಯ ಶಾಸಕರಾಗಿದ್ದರು. ಶ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದರು. 2024ರ ನವೆಂಬರ್ 20ರಲ್ಲಿ ನಿಧನರಾದರು.
ರತನ್ ನಾವಲ್ ಟಾಟಾ:
1937ರಲ್ಲಿ ಬಾಂಬೆನಲ್ಲಿ ಜನಿಸಿದ್ಧರು. ನ್ಯೂಯಾರ್ಕದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಟಾಟಾ ಸ್ಟೀಲ್, ಟಾಟಾ ಮೋಟರ್ಸ, ಟಾಟಾ ಟಿ, ಟಾಟಾ ಫೈನಾನ್ಸ್ ಸೇರಿದಂತೆ ಹಲವು ಉದ್ಯಮ ಕಟ್ಟಿ ಬೆಳೆಸಿ ಜಾಗತಿಕ ಮಟ್ಟದಲ್ಲಿ ಭಾರತದ ಹೆಸರು ಗುರುತಿಸುವಂತೆ ಮಾಡಿದರು. ಕೇವಲ ಲಕ್ಷ ರೂ ಗೆ ನ್ಯಾನೋ ಕಾರ್ ಸೃಷ್ಟಿಸಿ ಬಡವರ ಕನಸು ನನಸು ಮಾಡಿದರು. ಹಲವಾರು ದೇಶಗಳಲ್ಲಿ ಕಂಪನಿ ಸ್ಥಾಪಿಸಿದರು. ಔದ್ಯಮಿಕ ಸಾಮಾಜಿಕ ಸೇವೆಗಾಗಿ ಪದ್ಮಭೂಷಣ, ಪದ್ಮವಿಭೂಷಣ ಪುರಸ್ಕಾರ ಗಿಟ್ಟಿಸಿದ್ದರು. 2024ರ ಅಕ್ಟೋಬರ್ನಲ್ಲಿ ನಿಧನರಾದರು.
ಡಾ.ಸಯ್ಯದ್ ಶಹಾ ಖುಸ್ರೋ ಹುಸೇನಿ:
1945ರಲ್ಲಿ ಹೈದರಾಬಾದನ ಸೂಫಿ ಮನೆತನದಲ್ಲಿ ಜನಿಸಿದರು. ಕೆನಡಾದಲ್ಲಿ ಎಂಎ ಪಿಎಚ್ ಡಿ ಪದವಿ ಪಡೆದರು. ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಶಿಕ್ಷಣಕ್ಕೆ ಮಹತ್ವ ನೀಡಿದರು. ಮಹಿಳೆಯರಿಗಾಗಿ ಪ್ರೌಢಶಾಲೆ, ಪಿಯುಸಿ ಪದವಿ ಅರೇಬಿಕ್ ಭಾಷೆಯ ಕಾಲೇಜ ತೆರೆದರು. ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ರಾಜ್ಯೋತ್ಸವ ಪುರಸ್ಕಾರ ಪಡೆದರು. 2024ರ ನವೆಂಬರ್ ದಲ್ಲಿ ನಿಧನರಾದರು.
ರಾಜಶೇಖರ ನೀರಮಾನ್ವಿ:
ರಾಯಚೂರ ಜಿಲ್ಲೆಯ ನೀರಮಾನ್ವಿ ಗ್ರಾಮದಲ್ಲಿ ಜನಿಸಿದರು. ಗೋಕಾಕ ಚಳುವಳಿ, ಜೆ.ಪಿ.ಚಳವಳಿ ಮತ್ತು ವಾಟಾಳ್ ಚಳುವಳಿಯಲ್ಲಿ ಭಾಗವಹಿಸಿದ್ದರು. ಇವರ ಕಥೆಗಳು ಬೇರೆ ಬೇರೆ ಭಾಷೆಗಳಿಗೆ ಅನುವಾದವಾಗಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ, ರಾಜ್ಯೋತ್ಸವ ಪುರಸ್ಕಾರದ ಗೌರವಕ್ಕೆ ಪಾತ್ರರಾಗಿದ್ದರು. 2024ರ ಆಗಸ್ಟ್ 8ರಲ್ಲಿ ನಿಧನರಾದರು.