ಧ್ರುವ ನಾರಾಯಣ್‌ ನಿಧನಕ್ಕೆ ಗಣ್ಯರ ಕಂಬನಿ…!

ಬೆಂಗಳೂರು

     ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಂಸದ ಆರ್. ಧ್ರುವನಾರಾಯಣ್ ಅವರು ಹೃದಯಾಘಾತದಿಂದ ಇಂದು ಮುಂಜಾನೆ ಮೈಸೂರಿನಲ್ಲಿ ನಿಧನರಾಗಿದ್ದಾರೆ. ಧ್ರುವನಾರಾಯಣ್ ಅವರಿಗೆ ಬೆಳಿಗ್ಗೆ ಎದೆ ನೋವು ಕಾಣಿಸಿಕೊಂಡಿದ್ದು, ಅವರನ್ನು ತಕ್ಷಣವೇ ಮೈಸೂರಿನ ಒಂಟಿಕೊಪ್ಪಲಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಬದುಕುಳಿಯಲಿಲ್ಲ.

    ಧ್ರುವನಾರಾಯಣ್‌ರವರು (61) ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮೊದಲ ಬಾರಿಗೆ ಸಂತೆ ಮರಳ್ಳಿ ಕ್ಷೇತ್ರದಿಂದ 2004ರಲ್ಲಿ ಒಂದು ಮತದಿಂದ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿ ಶಾಸಕರಾಗಿ ಆಯ್ಕೆಯಾಗಿದ್ದ ಧ್ರುವನಾರಾಯಣ್, ಎರಡು ಬಾರಿ ಚಾಮರಾಜನಗರ ಲೋಕಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಶ್ರೀನಿವಾಸ್‌ಪ್ರಸಾದ್ ವಿರುದ್ಧ ಪರಾಭವಗೊಂಡಿದ್ದ ಅವರು, ಸದ್ಯ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದರು.

    ಚಾಮರಾಜನಗರ ತಾಲ್ಲೂಕಿನ ಹೆಗ್ಗವಾಡಿಯಲ್ಲಿ 1961ರ ಆ. 31 ರಂದು ಜನಿಸಿದ್ದ ಧ್ರುವ ನಾರಾಯಣ್‌ರವರು, ಬಿಎಸ್ಸಿ ಕೃಷಿ ಪದವಿ ಪಡೆದುಕೊಂಡಿದ್ದರು. ಹಾಗೆಯೇ, ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದ ಅವರು, 1983ರಲ್ಲಿ ಸಾಮಾನ್ಯ ಕಾರ್ಯಕರ್ತರಾಗಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿ, ಮಾಜಿ ಸಚಿವ ಎಂ. ರಾಜಶೇಖರಮೂರ್ತಿ ಅವರ ಪಟ್ಟ ಶಿಷ್ಯರಾಗಿದ್ದರು.1999ರಲ್ಲಿ ಸಂತೇಮರಳ್ಳಿ ಕ್ಷೇತ್ರದಿಂದ ಒಂದು ಮತದಿಂದ ಗೆಲ್ಲುವ ಮೂಲಕ ಇಡೀ ದೇಶಾದ್ಯಂತ ಸುದ್ದಿಯಾಗಿದ್ದರು.

    2008ರ ಚುನಾವಣೆಯಲ್ಲಿ ಕೊಳ್ಳೆಗಾಲದಿಂದ 2ನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾದರು. 2009ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಲೋಕಸಭೆಗೆ ಆಯ್ಕೆಯಾದ ಅವರು, 2014ರಲ್ಲಿ ಮತ್ತೆ ಲೋಕಸಭೆಗೆ ಆಯ್ಕೆಯಾಗಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಅವರು ಸೋತಿದ್ದರು. ಸಂಸದರಾಗಿದ್ದ ಅವಧಿಯಲ್ಲಿ ಅವರು ಅನುದಾನ ಬಳಕೆಯಲ್ಲಿ ಮುಂಚೂಣಿಯಲ್ಲಿದ್ದು, ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಹೆಸರುಗಳಿಸಿದ್ದರು.

    ಲೋಕಸಭಾ ಚುನಾವಣೆಯ ಸೋಲಿನ ನಂತರ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಯ ಜವಾಬ್ದಾರಿ ಹೊತ್ತಿದ್ದ ಧ್ರುವನಾರಾಯಣ್, ಈ ವಿಧಾನಸಭಾ ಚುನಾವಣೆಯಲ್ಲಿ ನಂಜನಗೂಡು ಕ್ಷೇತ್ರದಿಂದ ಕಣಕ್ಕಿಳಿಯಲು ನಿರ್ಧರಿಸಿದ್ದರು. ಅವರಿಗೆ ಟಿಕೆಟ್ ಕೂಡ ಪಕ್ಕಾ ಆಗಿತ್ತು.ಅತ್ಯಂತ ಸರಣ ಹಾಗೂ ಸಜ್ಜನ ರಾಜಕಾರಣಿಯಾಗಿದ್ದ ಧ್ರುವನಾರಾಯಣ್, ರಾಜಕಾರಣದಲ್ಲಿ ಯಾವುದೇ ಕಪುö್ಪಚುಕ್ಕೆ ಇಲ್ಲದೆ ಕಾರ್ಯನಿರ್ವಹಿಸಿದ್ದರು. ಜನರ ಜತೆಯೂ ಉತ್ತಮ ಸಂಪರ್ಕ ಹೊಂದಿದ್ದರು. ಇವರ ಸಾವು ಎಲ್ಲರಿಗೂ ಒಂದು ರೀತಿ ಆಘಾತ ತಂದಿದೆ.

ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

    ಮಾಜಿ ಸಂಸದ ಧ್ರುವನಾರಾಯಣ್‌ರವರ ಅಂತ್ಯಕ್ರಿಯೆ ನಾಳೆ ಮಧ್ಯಾಹ್ನ ಸರ್ಕಾರಿ ಗೌರವದೊಂದಿಗೆ ಅವರ ಹುಟ್ಟೂರಾದ ಹೆಗ್ಗವಾಡಿಯಲ್ಲಿ ನಡೆಯಲಿದೆ. ಇಂದು ಸಂಜೆ 4 ಗಂಟೆಯವರೆಗೂ ಮೈಸೂರಿನ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಿ ನಂತರ ಪಾರ್ಥೀವ ಶರೀರವನ್ನು ಅವರ ಸ್ವಗ್ರಾಮಕ್ಕೆ ತೆಗೆದುಕೊಂಡು ಹೋಗಲಾಗುವುದು ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಭಾನೋತ್ ಮಾಹಿತಿ ನೀಡಿದ್ದಾರೆ.

ಗಣ್ಯರ ಕಂಬನಿ

     ಮಾಜಿ ಸಂಸದ ಧ್ರುವನಾರಾಯಣ್‌ರವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ಗಾಂಧಿ, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಗಾಂಧಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಹೆಚ್.ಡಿ. ಕುಮಾರಸ್ವಾಮಿ ಸರ್ಕಾರದ ಹಲವು ಸಚಿವರು, ಕಾಂಗ್ರೆಸ್‌ನ ಹಲವು ಸಚಿವರು, ರಾಜಕೀಯ ನೇತಾರರೂ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.

    ಧ್ರುವನಾರಾಯಣ್‌ರವರು ತುಂಬಾ ಕ್ರಿಯಾಶೀಲರಾಗಿದ್ದರು. ಜನಪದ ಕಾಳಜಿ ಹೊಂದಿದ್ದ ಉತ್ತಮ ರಾಜಕಾರಣಿಯಾಗಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದುಃಖ ವ್ಯಕ್ತಪಡಿಸಿ, ಅತೀ ಕ್ರಿಯಾಶೀಲರಾಗಿ ಓಡಾಡುತ್ತಿದ್ದ ಅವರು, ಹೃದಯಾಘಾತದಿಂದ ನಿಧನ ರಾಗಿರುವುದು ಆಘಾತ ತಂದಿದೆ ಎಂದಿದ್ದಾರೆ.ಸಕಲ ಸರ್ಕಾರಿ ಗೌರವದೊಂದಿಗೆ ಧ್ರುçವನಾರಾಯಣ ಅಂತ್ಯಕ್ರಿಯೆ ನೆರವೇರಿಸಲಾಗುವುದು. ಅವರ ಕುಟುಂಬದವರಿಗೆ ದುಃಖ ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಮುಖ್ಯಮಂತ್ರಿ ಪ್ರಾರ್ಥಿಸಿದ್ದಾರೆ.

     ನಗುಮುಖದ ಗೆಳೆಯ, ನಮ್ಮ ನಾಯಕ ಮತ್ತು ಕಾಂಗ್ರೆಸ್‌ನ ಅತ್ಯಂತ ಸಮರ್ಪಿತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದ ಧ್ರುವನಾರಾಯಣ ಅವರ ನಿಧನ ಸರಿಪಡಿಸಲಾಗದ ನಷ್ಟವನ್ನು ಮಾಡಿದೆ. ಇದನ್ನು ವಿವರಿಸಲು ಯಾವುದೇ ಪದಗಳಿಲ್ಲ.

-ರಣದೀಪ್ ಸಿಂಗ್ ಸುರ್ಜೇವಾಲಾ,

      ಆತ್ಮೀಯರಾದ ಕಾಂಗ್ರೆಸ್ ಪಕ್ಷದ ನಾಯಕ ಮತ್ತು ಮಾಜಿ ಸಂಸದ ಆರ್.ನಾರಾಯಣ್ ಅವರ ಹಠಾತ್ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ಅವರ ಕುಟುಂಬ ಮತ್ತು ಪ್ರೀತಿಪಾತ್ರರ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿಕೋರುತ್ತೇನೆ

-ಸಿದ್ದರಾಮಯ್ಯ, ಮಾಜಿ ಸಿಎಂ

ಧ್ರುವನಾರಾಯಣ್ ನಿಧನದಿಂದ ಇಡೀ ಕಾಂಗ್ರೆಸ್ ಕುಟುಂಬಕ್ಕೆ ನಷ್ಟ ಆಗಿದೆ. ಸಂಭಾವಿತ ರಾಜಕಾರಣಿ, ಯಾರನ್ನೂ ನೋಯಿಸದ ಗುಣ ಅವರಿಗಿತ್ತು. ಅವರು ನನ್ನ ಕಾರ್ಯಾಧ್ಯಕ್ಷ ಅಲ್ಲ, ನನ್ನ ಕುಟುಂಬವಾಗಿದ್ದರು. ಅವರ ನಿಧನ ನೋವು ತಂದಿದೆ.

-ಡಿ.ಕೆ. ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ

ಹಠಾತ್ ಸಾವಿನ ಸುದ್ದಿ ಕೇಳಿ ಅತೀವ ದುಃಖವಾಯಿತು. ಧ್ರುವನಾರಾಯಣ ಅವರ ಸಾರ್ವಜನಿಕ ಸೇವೆಗೆ ಅವರ ಕೊಡುಗೆ ಮತ್ತು ಸಾಮಾಜಿಕ ನ್ಯಾಯದ ಬದ್ಧತೆ ಸದಾ ಸ್ಮರಣೀಯ.ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಸಂತಾಪ.

-ಪ್ರಿಯಾಂಕಾ ಗಾಂಧಿ,ಕಾಂಗ್ರೆಸ್ ನಾಯಕಿ

ಆರ್.ಧ್ರುವನಾರಾಯಣ ಅವರ ನಿಧನದಿಂದ ತೀವ್ರ ದುಃಖ ಮತ್ತು ನೋವಾಗಿದೆ. ಅವರು ಕೇವಲ ತಳಮಟ್ಟದ ರಾಜಕೀಯ ವ್ಯಕ್ತಿಯಾಗಿರಲಿಲ್ಲ. ಅತ್ಯುತ್ತಮ ವ್ಯಕ್ತಿಯಾಗಿದ್ದರು. ಅವರ ನಿಧನವು ಕೇವಲ ಕಾಂಗ್ರೆಸ್ ಗೆ ಮಾತ್ರ ನಷ್ಟವಲ್ಲ ನನಗೂ ದೊಡ್ಡ ವೈಯಕ್ತಿಕ ನಷ್ಟವಾಗಿದೆ.

-ಮಲ್ಲಿಕಾರ್ಜುನ ಖರ್ಗೆ, ಅಧ್ಯಕ್ಷರು ಎಐಸಿಸಿ

ಧ್ರುವನಾರಾಯಣ್ ಅವರ ಹಠಾತ್ ನಿಧನದಿಂದ ದುಃಖವಾಗಿದೆ. ಕಷ್ಟಪಟ್ಟು ದುಡಿಯುವ ಮತ್ತು ವಿನಮ್ರ ತಳಮಟ್ಟದ ನಾಯಕ ಅವರು. ಎನ್ ಎಸ್ ಯುಐ ಮತ್ತು ಯೂತ್ ಕಾಂಗ್ರೆಸ್ ಶ್ರೇಣಿಯ ಮೂಲಕ ಏರಿದ ಸಾಮಾಜಿಕ ನ್ಯಾಯದ ಚಾಂಪಿಯನ್ ಆಗಿದ್ದರು.ಅವರ ಅಗಲಿಕೆ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ನಷ್ಟ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು.

-ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ

ಆರ್.ಧ್ರುವನಾರಾಯಣ ಅವರು ಇಂದು ಹಠಾತ್ ನಿಧನರಾದ ಸುದ್ದಿ ತಿಳಿದು ಅತ್ಯಂತ ಆಘಾತವಾಗಿದೆ. ಒಬ್ಬ ಸಕ್ರಿಯ ರಾಜಕಾರಣಿಯನ್ನು ನಾಡು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಸದ್ಗತಿಯನ್ನು, ಅವರ ಕುಟುಂಬದವರಿಗೆ, ಅಭಿಮಾನಿಗಳಿಗೆ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ.

-ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ

ಧ್ರುವನಾರಾಯಣ್ ಹಾಗೂ ನನ್ನ ರಾಜಕೀಯ ಗೆಳೆತನ ಬಹುಕಾಲದ್ದು, ಸಮಾನ ಮನಸ್ಸು, ಸಮಾನ ಚಿಂತನೆಗಳೊಂದಿಗೆ ಬೆಸೆದ ರಾಜಕೀಯ ಸಗಾತಿಯ ಹಠಾತ್ ನಿಧನದಿಂದ ಆಘಾತಗೊಂಡಿದ್ದೇನೆ. ಕಾಂಗ್ರೆಸ್ ಪಕ್ಷಕ್ಕೆ ಆಸ್ತಿಯಂತಿದ್ದ ಧ್ರುವನಾರಾಯಣ್‌ರವರ ಸಾವು ಬಹುದಿನಗಳ ಕಾಲ ಪಕ್ಷವನ್ನು ಕಾಡಲಿದೆ. ದುಃಖತಪ್ತ ಕುಟುಂಬ ವರ್ಗಕ್ಕೆ ನನ್ನ ಸಂತಾಪ, ಅಭಿಮಾನಿಗಳ ಶೋಕದಲ್ಲಿ ನಾನೂ ಭಾಗಿ.

-ಬಿ.ಕೆ. ಹರಿಪ್ರಸಾದ್,ಕಾಂಗ್ರೆಸ್‌ ನಾಯಕರು

ವಿಧಾನ ಪರಿಷತ್‌ನ ವಿಪಕ್ಷ ನಾಯಕರು,ಮಾಜಿ ಸಂಸದ ಧ್ರುವನಾರಾಯಣ್‌ರವರ ಅಗಲಿಕೆ ನಂಬಲಾಗುತ್ತಿಲ್ಲ. ಅವರ ನಿಧನ ನೋವು ತಂದಿದೆ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬ ವರ್ಗದವರಿಗೆ ನೀಡಲಿ.

-ವಾಟಾಳ್ ನಾಗರಾಜ್,ಕನ್ನಡಪರ ಹೋರಾಟಗಾರ

ಪ್ರಜಾಧ್ವನಿ ಯಾತ್ರೆ ರದ್ದು

        ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಧ್ರುವನಾರಾಯಣ್‌ರವರ ನಿಧನ ಹಿನ್ನೆಲೆಯಲ್ಲಿ ಇಂದು ರಾಮನಗರದಲ್ಲಿ ನಡೆಯಬೇಕಿದ್ದ ಕಾಂಗ್ರೆಸ್‌ನ ಪ್ರಜಾಧ್ವನಿ ಯಾತ್ರೆಯನ್ನು ರದ್ದು ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

    ರಾಮನಗರ ತಾಲ್ಲೂಕಿನ ಮರಳವಾಡಿ, ಹಾರೊಹಳ್ಳಿ ಹಾಗೂ ರಾಮನಗರ ಪಟ್ಟಣದಲ್ಲಿ ಪ್ರಜಾಧ್ವನಿ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಧ್ರುವ ನಾರಾಯಣರವರ ನಿಧನದಿಂದ ಈ ಯಾತ್ರೆಯನ್ನು ಮುಂದೂಡ ಲಾಗಿದೆ ಎಂದು ಅವರು ಹೇಳಿದರು. ಯಾತ್ರೆಯ ದಿನಾಂಕವನ್ನು ಮುಂದೆ ಪ್ರಕಟಿಸಲಾಗುವುದು ಎಂದು ಅವರು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap