ಬೆಳೆನಷ್ಟ ಸಮೀಕ್ಷೆ  ಕೇಂದ್ರ ತಂಡದ ಗೌಪ್ಯ ಪ್ರವಾಸ

ಗುಬ್ಬಿ:

            ರೈತರಿಗೆ ಭಿಕ್ಷೆ ನೀಡಲು ಮುಂದಾದ ಸರ್ಕಾರ  ರೈತಸಂಘ ಕಿಡಿ 

                      ಅಕಾಲಿಕ ಮಳೆಗೆ ಇಡೀ ಜಿಲ್ಲೆಯಲ್ಲಿ ರಾಗಿ ಸೇರಿದಂತೆ ತೋಟಗಾರಿಕೆ ಬೆಳೆಗಳು ಹಾಳಾಗಿವೆ. ಜಾನುವಾರುಗಳು ಸತ್ತಿವೆ ಹಾಗೂ ಜನ ಸಾಮಾನ್ಯರ ಮನೆಗಳು ಧರೆಗುರುಳಿವೆ. ಇಂತಹ ಸಂದರ್ಭದಲ್ಲಿ ಅಧ್ಯಯನದ ಹೆಸರಿನಲ್ಲಿ ಗೌಪ್ಯ ಪ್ರವಾಸ ಮಾಡುವ ಕೇಂದ್ರದ ತಂಡವು ರೈತರ ಸಂಕಷ್ಟಗಳನ್ನು ಹೇಗೆ ತಿಳಿಯಲು ಸಾಧ್ಯ? ಕೇವಲ ಬಿತ್ತನೆ ನಷ್ಟ ಎಂದು ಹೇಳಿ, ಅವೈಜ್ಞಾನಿಕ ಬೆಳೆ ಪರಿಹಾರ ನಿಗದಿ ಮಾಡಿ, ರೈತರಿಗೆ ಭಿಕ್ಷೆ ನೀಡಲು ಮುಂದಾಗಿದ್ದಾರೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಕಿಡಿಕಾರಿದರು.

ತಾಲ್ಲೂಕಿನ ಎಂ.ಎಚ್.ಪಟ್ಟಣ ಗ್ರಾಮದ ಜಮೀನುಗಳಿಗೆ ಬೆಳೆ ನಷ್ಟ ವೀಕ್ಷಣೆಗೆ ಆಗಮಿಸಿದ್ದ ಕೇಂದ್ರ ಅಧ್ಯಯನ ತಂಡದೊಂದಿಗೆ ಅವರು ಚರ್ಚಿಸುತ್ತಾ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಆರೋಪಗಳ ಸುರಿಮಳೆ ಗೈದರು.

ಮೂಗಿಗೆ ತುಪ್ಪ ಸವರುವ ಕೆಲಸ :

ಇಡೀ ಜಿಲ್ಲೆಯೆ ನೆರೆ ಹಾವಳಿಗೆ ತುತ್ತಾಗಿದೆ. ರಾಗಿ ಬೆಳೆ ಶೇ.85 ರಷ್ಟು ನಷ್ಟವಾಗಿದೆ. ಈ ಜೊತೆಗೆ ರೈತರು ಜಾನುವಾರುಗಳನ್ನು ಕಳೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕೇವಲ ಕೃಷಿ ಬಿತ್ತನೆಯಷ್ಟನ್ನೆ ಲೆಕ್ಕ ಹಾಕುವುದು ಯಾವ ಮಾನದಂಡ. ಹೆಕ್ಟೇರ್‍ಗೆ 6,300 ರೂ. ನೀಡಿದರೆ ರೈತನ ನಷ್ಟ ತುಂಬಲು ಸಾಧ್ಯವೆ ಎಂದು ಪ್ರಶ್ನಿಸಿದ ಅವರು, ಒಂದು ಎಕರೆ ಭೂಮಿಯಲ್ಲಿ ರಾಗಿ ಕೃಷಿ ಮಾಡಲು 20 ಸಾವಿರಕ್ಕೂ ಅಧಿಕ ರೂ. ವ್ಯಯವಾಗಲಿದೆ. ಕಟಾವಿಗೆ ಬಂದ ಬೆಳೆ ಪಡೆಯಲು 13 ಸಾವಿರ ರೂ ಬೇಕು. ಆದರೆ ಬ್ರಿಟಿಷರ ಕಾಲದ ಮಾನದಂಡ ಬಳಸಿ ಪರಿಹಾರ ನೀಡುತ್ತಾರೆ. ಈ ರೀತಿಯ ಅವೈಜ್ಞಾನಿಕ ಪರಿಹಾರವು ಮೂಗಿಗೆ ತುಪ್ಪ ಸವರುವ ಕೆಲಸ ಎಂದು ಎ.ಗೋವಿಂದರಾಜು ತಂಡದೊಂದಿಗೆ ಚರ್ಚಿಸಿದರು.

ಬಿದ್ದ ಮನೆ : ಬಾರದ ಪರಿಹಾರ :

ಎಂ.ಹೆಚ್.ಪಟ್ಟಣ ಗ್ರಾಮದಲ್ಲಿ ಮಳೆಯಿಂದಾಗಿ ಹಾನಿಯಾಗಿರುವ ಎರಡು ಮನೆಗಳನ್ನು ವೀಕ್ಷಿಸಿ 5 ಲಕ್ಷ ರೂ. ಪರಿಹಾರ ಕೊಟ್ಟಿರುವುದಾಗಿ ಗುಬ್ಬಿ ತಹಶೀಲ್ದಾರ್ ಹೇಳಿದರಾದರೂ, ಫಲಾನುಭವಿಗಳು ತಮ್ಮ ಖಾತೆಗಳಿಗೆ ಇನ್ನೂ ಹಣ ಬಂದಿಲ್ಲವೆಂದರು. ಆಗ ಮಧ್ಯ ಪ್ರವೇಶಿಸಿದ ತಹಶೀಲ್ದಾರ್ ಅವರು ಈ ಬಗ್ಗೆ ಸೂಕ್ತ ದಾಖಲೆ ತೆಗೆದುಕೊಂಡು ಕಚೇರಿಗೆ ಬರುವಂತೆ ತಿಳಿಸಿದರು. ದೂರದಲ್ಲಿ ಇದನ್ನೆಲ್ಲಾ ವೀಕ್ಷಿಸುತ್ತಿದ್ದ ಗ್ರಾಮಸ್ಥರು ಪರಿಹಾರ ಹಣದಲ್ಲಿ ಯಾರ್ಯಾರಿಗೆ ಎಷ್ಟೆಷ್ಟು ನೀಡಬೇಕೊ ಎಂದು ಗೊಣಗುತ್ತಿದ್ದರು.

ಸುಶೀಲ್‍ಪಾಲ್ ನೇತೃತ್ವ ಅಧ್ಯಯನ ತಂಡದಲ್ಲಿ ಡಾ.ಸುಭಾಷ್‍ಚಂದ್ರ, ಡಾ.ಮನೋಜ್‍ರಾಜನ್ ಎಂಬ ಇನ್ನಿಬ್ಬರೂ ಸದಸ್ಯರು ಇದ್ದರು. ಜಿಲ್ಲಾಧಿಕಾರಿ ಡಾ.ವೈ.ಎಸ್.ಪಾಟೀಲ್, ಜಿಪಂ ಸಿಇಒ ಡಾ.ವಿದ್ಯಾಕುಮಾರಿ, ಎಸಿ ಅಜಯ್, ಕೃಷಿ ಇಲಾಖೆ ಉಪ ನಿರ್ದೇಶಕ ಬಿ.ಶಿವರಾಜ್, ತೋಟಗಾರಿಕೆ ಉಪ ನಿರ್ದೇಶಕ ಬಿ.ಕೆ.ದುಂಡಿ, ತಹಶೀಲ್ದಾರ್ ಬಿ.ಆರತಿ, ರೈತ ಸಂಘದ ಸಿ.ಜಿ.ಲೋಕೇಶ್, ಗಂಗರೇವಣ್ಣ, ಸತ್ತಿಗಪ್ಪ, ದಾಸೇಗೌಡ, ಕನ್ನಿಗಪ್ಪ ಇತರರು ಇದ್ದರು.

ಜನ ಪ್ರತಿನಿಧಿಗಳು ಬೆಳಗಾವಿ ಅಧಿವೇಶನದಲ್ಲಿ ಇರುವ ಈ ಸಂದರ್ಭದಲ್ಲಿ ಭೇಟಿ ನೀಡುವ ಅಧ್ಯಯನ ತಂಡವು ರೈತರಿಗೆ ಮಾಹಿತಿ ನೀಡದೆ ಗೌಪ್ಯ ಅಧ್ಯಯನ ನಡೆಸುವುದು ಎಷ್ಟು ಸರಿ, ರೈತರನ್ನು ಮಾತನಾಡಿಸದೆ ಕೃಷಿ ಸಂಕಷ್ಟಗಳನ್ನು ಹೇಗೆ ಅರಿಯಲು ಸಾಧ್ಯ. ಕೃಷಿಗೆ ಆಗಿರುವ ವ್ಯಯ ಮತ್ತು ನಷ್ಟದ ಅಂದಾಜು ರೈತರಿಂದಲೆ ಪಡೆಯಬೇಕು ಎಂದು ಅಧ್ಯಯನ ತಂಡವನ್ನು ಒತ್ತಾಯಿಸಿದ್ದೇವೆ.

-ಎ.ಗೋವಿಂದರಾಜು, ಜಿಲ್ಲಾಧ್ಯಕ್ಷರು, ರೈತ ಸಂಘ

                       ರೈತರ ಎಲ್ಲಾ ಮನವಿಗಳನ್ನು ಆಲಿಸಿದ್ದೇವೆ. ವಸ್ತುಸ್ಥಿತಿ ಅರಿವಿಗೆ ಧಿಡೀರ್ ಭೇಟಿ ನೀಡಿದ್ದೇವೆ. ದಾಖಲೆಗಳನ್ನು ದೃಢಪಡಿಸಿಕೊಳ್ಳಲು ಆಯ್ಕೆ ಮಾಡಿಕೊಂಡು ಪರಿಶೀಲನೆ ನಡೆಸಲಾಗುತ್ತಿದೆ. ಅಧ್ಯಯನದ ನಂತರ ಪರಿಹಾರ ನಿರ್ಧಾರವಾಗಲಿದೆ. ಸದ್ಯ ಬಿತ್ತನೆ ನಷ್ಟವನ್ನು ನೀಡಲಾಗಿದೆ.

-ಸುಶೀಲ್‍ಪಾಲ್, ಕೇಂದ್ರ ನೆರೆ ಅಧ್ಯಯನ ತಂಡದ ಮುಖ್ಯಸ್ಥ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

 

 

Recent Articles

spot_img

Related Stories

Share via
Copy link