ಆಗಸ್ಟ್ 22 ರಂದು ದೇಶಾದ್ಯಂತ ಪ್ರತಿಭಟನೆಗೆ ಕಾಂಗ್ರೆಸ್‌ ಕರೆ…!

ನವದೆಹಲಿ: 

   ಹಿಂಡೆನ್ ಬರ್ಗ್ ಆರೋಪಗಳಿಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವಂತೆಯೇ ಸೆಬಿ ಮುಖ್ಯಸ್ಥರಾದ ಮಧಬಿ ಪುರಿ ಬುಚು ರಾಜೀನಾಮೆ ಹಾಗೂ ಅದಾನಿ ವಿವಾದ ಕುರಿತು ಜಂಟಿ ಸದನ ಸಮಿತಿ ತನಿಖೆಗೆ ಆಗ್ರಹಿಸಿ ಆಗಸ್ಟ್ 22 ರಂದು ದೇಶಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಕಾಂಗ್ರೆಸ್ ಮಂಗಳವಾರ ಘೋಷಿಸಿದೆ.

   ಎಐಸಿಸಿ ಕಚೇರಿಯಲ್ಲಿಂದು ಎಲ್ಲಾ ರಾಜ್ಯ ಘಟಕದ ಮುಖ್ಯಸ್ಥರು, ಪ್ರಧಾನ ಕಾರ್ಯದರ್ಶಿಗಳು ಮತ್ತು ಎಐಸಿಸಿ ರಾಜ್ಯ ಉಸ್ತುವಾರಿಗಳೊಂದಿಗೆ ಸಭೆ ನಡೆಸಿದ ನಂತರ ಮಲ್ಲಿಕಾರ್ಜುನ ಖರ್ಗೆ ಅವರು ಈ ಘೋಷಣೆ ಮಾಡಿದರು.

    ಸೆಬಿ ಮತ್ತು ಅದಾನಿ ನಡುವಿನ ಸಂಬಂಧ ಕುರಿತು ಆಘಾತಕಾರಿ ಅಂಶ ಬಹಿರಂಗ ನಂತರ ಸಂಪೂರ್ಣ ತನಿಖೆಯ ಅಗತ್ಯವಿದೆ. ಷೇರು ಮಾರುಕಟ್ಟೆಯಲ್ಲಿನ ಸಣ್ಣ ಹೂಡಿಕೆದಾರರ ಹಣವನ್ನು ಅಪಾಯಕ್ಕೆ ಸಿಲುಕಿಸಲು ಸಾಧ್ಯವಿಲ್ಲ. ಮೋದಿ ಸರ್ಕಾರ ಕೂಡಲೇ ಸೆಬಿ ಮುಖ್ಯಸ್ಥರ ರಾಜೀನಾಮೆ ಪಡೆಯಬೇಕು ಮತ್ತು ಈ ಸಂಬಂಧ ಜಂಟಿ ಸದನ ಸಮಿತಿಯಿಂದ ತನಿಖೆ ನಡೆಸಬೇಕೆಂದು ಖರ್ಗೆ ಎಕ್ಸ್ ನಲ್ಲಿ ಫೋಸ್ಟ್ ಮಾಡಿದ್ದಾರೆ. 

    ಸಭೆಯ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ವೇಣುಗೋಪಾಲ್, ಸೆಬಿ ಮುಖ್ಯಸ್ಥರ ರಾಜೀನಾಮೆ ಮತ್ತು ಅದಾನಿ ವಿಷಯದ ಬಗ್ಗೆ ಜೆಪಿಸಿ ತನಿಖೆಗೆ ಒತ್ತಾಯಿಸಿ ಆಗಸ್ಟ್ 22 ರಂದು ಪಕ್ಷವು ರಾಷ್ಟ್ರವ್ಯಾಪಿ ಹೋರಾಟ ನಡೆಸುವುದನ್ನು ಸಭೆಯಲ್ಲಿ ಸರ್ವಾನುಮತದಿಂದ ನಿರ್ಧರಿಸಲಾಗಿದೆ ಎಂದು ಹೇಳಿದರು. 

    ಅದಾನಿ ಗ್ರೂಪ್ ನ ವಿದೇಶಿ ಷೇರುಗಳಲ್ಲಿ ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ಮತ್ತು ಅವರ ಪತಿ ದವಾಳ್ ಪಾಲನ್ನು ಹೊಂದಿದ್ದಾರೆ ಎಂದು ಹಿಂಡೆನ್ ಬರ್ಗ್ ಸಂಶೋಧನಾ ವರದಿ ಆಗಸ್ಟ್ 10 ರಂದು ಆರೋಪಿಸಿತ್ತು. ಈ ಆರೋಪಗಳು ಕಾಂಗ್ರೆಸ್ ಮತ್ತು ಇತರ ಇಂಡಿಯಾ ಮೈತ್ರಿಕೂಟದ ಪಕ್ಷಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಆಕೆಯ ಪದಚ್ಯುತಿ ಮತ್ತು ಜಂಟಿ ಸಂಸದೀಯ ಸಮಿತಿ ತನಿಖೆಗೆ ಒತ್ತಾಯಿಸುತ್ತಿವೆ. ಇದು ಭಾರತದಲ್ಲಿ ಆರ್ಥಿಕ ಅಸ್ಥಿರತೆ ಮತ್ತು ಅವ್ಯವಸ್ಥೆಯನ್ನು ಸೃಷ್ಟಿಸುವ ಪಿತೂರಿಯ ಭಾಗವಾಗಿದೆ ಎಂದು ಬಿಜೆಪಿ ಆರೋಪಿಸಿದೆ.