ಅಟಲ್ ಸೇತುನಲ್ಲಿ ಬಿರುಕು, ಭ್ರಷ್ಟಾಚಾರದ ವಾಸನೆ ಬರ್ತಿದೆ : ಕಾಂಗ್ರೆಸ್

ಮುಂಬೈ: 

   ದಕ್ಷಿಣ ಮುಂಬೈನಿಂದ ನವಿ ಮುಂಬೈಗೆ ಸಂಪರ್ಕ ಕಲ್ಪಿಸುವ ಸಮುದ್ರ ಸೇತುವೆ ಅಟಲ್ ಸೇತು ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಳೆ ಶುಕ್ರವಾರ ಆರೋಪಿಸಿದ್ದಾರೆ.

    ಸೇತುವೆ ಉದ್ಘಾಟನೆಗೊಂಡ ಕೆಲವೇ ತಿಂಗಳೊಳಗೆ ಅದರಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಜನರ ಜೀವಕ್ಕೆ ಅಪಾಯವನ್ನುಂಟುಮಾಡಿದೆ ಎಂದು ಪಟೋಳೆ ಹೇಳಿದ್ದಾರೆ.ಇಂದು ಹಗಲಿನಲ್ಲಿ ಸೇತುವೆಯನ್ನು ಪರಿಶೀಲಿಸಿದ ಪಟೋಳೆ, ಸೇತುವೆಯ ನಿರ್ಮಾಣ ಗುಣಮಟ್ಟ ಕಳಪೆಯಾಗಿದೆ ಮತ್ತು ರಸ್ತೆಯ ಒಂದು ಭಾಗವು ಒಂದು ಅಡಿಯಷ್ಟು ಕುಸಿದಿದೆ ಎಂದು ಪ್ರತಿಪಾದಿಸಿದರು.
   ಸೇತುವೆಯನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪಟೋಳೆ, ರಾಜ್ಯ ಸರ್ಕಾರ ಭ್ರಷ್ಟಾಚಾರದ ಎಲ್ಲ ಮಿತಿಗಳನ್ನು ದಾಟಿ ಜನರ ಜೀವವನ್ನು ಅಪಾಯಕ್ಕೆ ಸಿಲುಕಿಸಿದೆ. ಅಟಲ್ ಸೇತು ಸೇತುವೆಯ ಒಂದು ಭಾಗದಲ್ಲಿ ಉದ್ಘಾಟನೆಯಾದ ಮೂರು ತಿಂಗಳೊಳಗೆ ಬಿರುಕು ಕಾಣಿಸಿಕೊಂಡಿದೆ ಮತ್ತು ನವಿ ಮುಂಬೈ ಬಳಿಯ ಅರ್ಧ ಕಿಲೋಮೀಟರ್ ಉದ್ದದ ರಸ್ತೆಯು ಒಂದು ಅಡಿಯಷ್ಟು ಕುಸಿದಿದೆ ಎಂದು ಆರೋಪಿಸಿದರು.

 

   ಆದರೆ, ಆಡಳಿತಾರೂಢ ಭಾರತೀಯ ಜನತಾ ಪಕ್ಷ ಹಾಗೂ ಯೋಜನೆಯ ನೋಡಲ್ ಏಜೆನ್ಸಿಯಾಗಿರುವ ಮುಂಬೈ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಬಿರುಕು ಬಿಟ್ಟಿರುವುದು ಸೇತುವೆಯ ಮೇಲೆ ಅಲ್ಲ, ನವಿ ಮುಂಬೈನ ಉಲ್ವೆಯಿಂದ ಬರುವ ರಸ್ತೆಯಲ್ಲಿ ಎಂದು ಹೇಳಿದೆ.

   ಮುಂಬೈ ಟ್ರಾನ್ಸ್-ಹಾರ್ಬರ್ ಲಿಂಕ್ ಎಂದೂ ಕರೆಯಲ್ಪಡುವ ‘ಅಟಲ್ ಬಿಹಾರಿ ವಾಜಪೇಯಿ ಸೇವ್ರಿ-ನವ ಶೇವಾ ಅಟಲ್ ಸೇತು’ ಅನ್ನು ಈ ವರ್ಷದ ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದರು. 17,840 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ ಆರು ಪಥಗಳ ಸೇತುವೆಯು 21.8 ಕಿಮೀ ಉದ್ದವಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link