ನವದೆಹಲಿ:
ನವದೆಹಲಿ, ಫೆಬ್ರವರಿ 2: ಉತ್ತರಾಖಂಡ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ 30 ಜನ ಪ್ರಮುಖ ನಾಯಕರನ್ನು ಒಳಗೊಂಡ ಸ್ಟಾರ್ ಪ್ರಚಾರಕರ ಸಮಿತಿಯನ್ನು ನೇಮಿಸಿದೆ.
ಉತ್ತರಾಖಂಡ ಚುನಾವಣೆಗೆ ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಮಂತ್ರಿ ಡಾ.
ಮನಮೋಹನ್ ಸಿಂಗ್, ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಹಿರಿಯ ನಾಯಕ ಗುಲಾಂ ನಬಿ ಆಜಾದ್, ಹರೀಶ್ ರಾವತ್, ದೇವೇಂದ್ರ ಯಾದವ್, ಅಶೋಕ್ ಗೆಹ್ಲೋಟ್, ಭೂಪೇಶ್ ಬಘೇಲ್, ದಿಪೇಂದರ್ ಸಿಂಗ್ ಹೂಡಾ,
ಯುವ ನಾಯಕರಾದ ಸಚಿನ್ ಪೈಲಟ್, ಹಾರ್ದಿಕ್ ಪಟೇಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಸೇರಿದಂತೆ ಮತ್ತಿತರ ಘಟಾನುಘಟಿ ನಾಯಕರಿರುವ ಚುನಾವಣಾ ಪ್ರಚಾರ ಸಮಿತಿಯಲ್ಲಿ ರಾಷ್ಟ್ರೀಯ ಯು ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ ಅವರಿಗೂ ಅವಕಾಶ ನೀಡಿದೆ.
ಉತ್ತರಾಖಂಡದಲ್ಲಿ ಪಂಜಾಬ್ ಸಿಎಂ ಸ್ಟಾರ್ ಪ್ರಚಾರಕ, ಸಿಧುಗೆ ನಿರಾಸೆ
ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಉತ್ತರಾಖಂಡದ ಸ್ಟಾರ್ ಪ್ರಚಾರಕರಲ್ಲಿ ಒಬ್ಬರು ಎಂದು ಕಾಂಗ್ರೆಸ್ ಇಂದು ಬಹಿರಂಗಪಡಿಸಿದೆ. ಇನ್ನು ಪದ್ಮಭೂಷಣ ಪಡೆದ ನಂತರ ಕಳೆದ ತಿಂಗಳು ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾಗಿದ್ದ ಗುಲಾಂ ನಬಿ ಆಜಾದ್ ಕೂಡ ಈ ಪಟ್ಟಿಯಲ್ಲಿದ್ದಾರೆ.
ಸಚಿನ್ ಪೈಲಟ್, ಭೂಪೇಶ್ ಬಾಘೇಲ್, ರಣದೀಪ್ ಸುರ್ಜೆವಾಲಾ ಅವರು ರಾಜ್ಯದ ಇತರ ಸ್ಟಾರ್ ಪ್ರಚಾರಕರಲ್ಲಿ ಸೇರಿದ್ದಾರೆ. ಅವರು ಕಳೆದ ಕೆಲವು ತಿಂಗಳುಗಳಿಂದ ಪ್ರಚಾರದಲ್ಲಿ ಸಕ್ರಿಯರಾಗಿದ್ದಾರೆ. ಏಕೆಂದರೆ ಈ ಬಾರಿಯ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಕಳೆದುಹೋದ ಸ್ಥಾನವನ್ನು ಗಳಿಸಲು ಪ್ರಯತ್ನಿಸುತ್ತಿದೆ.
ಇದೇ ಭಾನುವಾರದಂದು ಮತ್ತೊಂದು ಕ್ಷೇತ್ರದಿಂದ ಸಿ.ಎಸ್. ಚನ್ನಿ ಅವರನ್ನು ಪಕ್ಷ ಕಣಕ್ಕಿಳಿಸಿದ್ದು, ಅವರು ಈಗ ಭದೌರ್ ಮತ್ತು ಚಮ್ಕೌರ್ ಸಾಹಿಬ್ ಎರಡರಿಂದಲೂ ಸ್ಪರ್ಧಿಸುತ್ತಿದ್ದಾರೆ, ಅವರು 2007 ರಿಂದ ಗೆಲ್ಲುತ್ತಿದ್ದಾರೆ.
ಸ್ಟಾರ್ ಪ್ರಚಾರಕರಲ್ಲಿ ಏಕೈಕ ಕನ್ನಡಿಗ
ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ. ಅವರಿಗೆ ಕಾಂಗ್ರೆಸ್ ಹೈಕಮಾಂಡ್ 30 ಜನ ಪ್ರಮುಖ ನಾಯಕರನ್ನು ಒಳಗೊಂಡ ಉತ್ತರಾಖಂಡ ವಿಧಾನಸಭಾ ಚುನಾವಣಾ ಪ್ರಚಾರ ಸಮಿತಿಯಲ್ಲಿ ಅವಕಾಶ ನೀಡಿದೆ.
ಕಾಂಗ್ರೆಸ್ ಹೈಕಮಾಂಡಿಗೆ ಧನ್ಯವಾದ
ಯುವಕರು ಉದ್ಯೋಗವಕಾಶ ವಂಚಿತರಾಗಿ ಸಂಕಷ್ಟದಲ್ಲಿರುವ ಸಮಯದಲ್ಲಿ ಯುವ ಕಾಂಗ್ರೆಸ್ ಶ್ರೀನಿವಾಸ್ ಬಿ.ವಿ. ನೇತೃತ್ವದಲ್ಲಿ ಹೋರಾಟ ಮಾಡುತ್ತಿದೆ. ದೇಶದಾದ್ಯಂತ ಯುವಕರ ಪ್ರತಿಯೊಂದು ಸಮಸ್ಯೆ ಬಗ್ಗೆಯೂ ಯುವ ಕಾಂಗ್ರೆಸ್ ದನಿ ಎತ್ತುತ್ತಿದೆ.
ಶ್ರೀನಿವಾಸ್ ಬಿ.ವಿ. ಅವರ ಈ ಹೋರಾಟ ಮತ್ತು ಶ್ರಮವನ್ನು ಗುರುತಿಸಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಉತ್ತರಾಖಂಡಾ ಕಾಂಗ್ರೆಸ್‌ನ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ.ವಿ. ಹೆಸರನ್ನು ಸೇರಿಸಿದೆ.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಹೈಕಮಾಂಡಿಗೆ ಧನ್ಯವಾದ ಮತ್ತು ಕೃತಜ್ಞತೆಗಳು ಎಂದು ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಮಾಧ್ಯಮ ಉಸ್ತುವಾರಿ ರಾಹುಲ್ ರಾವ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ