ಬಿಜೆಪಿ ಜನಾಕ್ರೋಶ ಯಾತ್ರೆಗೆ ‘ಕೈ’ ಕೌಂಟರ್….!

ಬೆಂಗಳೂರು

     ಹಾಲು, ಮೊಸರು, ವಿದ್ಯುತ್ ದರ ಏರಿಕೆ ಖಂಡಿಸಿ ಬಿಜೆಪಿ ಮಾಡುತ್ತಿರುವ ಜನಾಕ್ರೋಶ ಯಾತ್ರೆಗೆ ಪ್ರತಿಯಾಗಿ ಕಾಂಗ್ರೆಸ್ ಕೂಡಾ ಪ್ರತಿಭಟನೆ ನಡೆಸಿದೆ. ಜನರಿಗೆ ಆಕ್ರೋಶ ಇಲ್ಲ, ಬಿಜೆಪಿಗೆ ಮಾತ್ರ ಆಕ್ರೋಶ ಇದೆ ಎಂದು ಕಿಡಿಕಾರಿರುವ ಕಾಂಗ್ರೆಸ್ ನಾಯಕರು ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ   ಕೇಂದ್ರದ ದರ ಏರಿಕೆ ನೀತಿ ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ.  ಸಿಲಿಂಡರ್ ದರ ಏರಿಕೆ  ಖಂಡಿಸಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಸೇರಿ ಕಾಂಗ್ರೆಸ್‌ನ ಘಟಾನುಘಟಿಗಳು ಬಿಜೆಪಿ ವಿರುದ್ಧ ಅಬ್ಬರಿಸಿದ್ದಾರೆ. ಇಂದಿನ ಬೆಲೆ ಏರಿಕೆಗೆ ಕೇಂದ್ರದ ನೀತಿಯೇ ಕಾರಣ ಎಂದು ಗುಡುಗಿದ್ದಾರೆ. 

   ಫ್ರೀಡಂ ಪಾರ್ಕ್‌ನಲ್ಲಿ ನೆರೆದಿದ್ದ ಸಾವಿರಾರು ಕಾರ್ಯಕರ್ತರು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಶಾಸಕರು, ಸಚಿವರು, ಮಹಿಳಾ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾದರು. ಬೆಂಗಳೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಭಾಗದಿಂದಲೂ ಕಾರ್ಯಕರ್ತರು ಆಗಮಿಸಿ ಶಕ್ತಿ ಪ್ರದರ್ಶನ ಮಾಡಿದರು.

  ಡಾ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಸಿಲಿಂಡರ್ ದರ 413 ರೂಪಾಯಿ ಇತ್ತು. ಈಗ 850 ರೂಪಾಯಿ ಮಾಡಿದ್ದಾರೆ ಎಂದು ಬೆಂಗಳೂರಿನಲ್ಲಿ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಗುಡುಗಿದ್ದಾರೆ.

   ಇತ್ತ ಫ್ರೀಡಂ ಪಾರ್ಕ್‌ನಲ್ಲಿ ಕಾಂಗ್ರೆಸ್ ನಾಯಕರ ಪ್ರತಿಭಟನೆ ಜೋರಾಗಿದ್ದರೆ, ಅತ್ತ ಬಾಗಲಕೋಟೆಯಲ್ಲಿ ಬಿಜೆಪಿ ನಾಯಕರು ಜನಾಕ್ರೋಶ ಯಾತ್ರೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಏಪ್ರಿಲ್ 7ರಂದು ಮೈಸೂರಿಂದ ಆರಂಭವಾಗಿರುವ ಯಾತ್ರೆ ಜಿಲ್ಲೆ ಜಿಲ್ಲೆಗಳಲ್ಲೂ ಸಾಗಿ, ಇದೀಗ ಬಾಗಲಕೋಟೆ ತಲುಪಿದೆ. ಬಾಗಲಕೋಟೆಯಲ್ಲಿ ಇವತ್ತು ತೆರೆದ ವಾಹನದಲ್ಲಿ ಯಾತ್ರೆ ನಡೆಸಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಜನಾಕ್ರೋಶಕ್ಕೆ ಕೊಪ್ಪಳದಲ್ಲಿ ವ್ಯಂಗ್ಯವಾಡಿರುವ ಸಚಿವ ಶಿವರಾಜ್ ತಂಗಡಗಿ, ಜನರು ಆಕ್ರೋಶಗೊಂಡು ಬಿಜೆಪಿಯನ್ನು ಮನೆಗೆ ಕಳುಹಿಸಿದ್ದಾರೆ. ನಮ್ಮ ಮೇಲೆ ಜನ ಆಕ್ರೋಶಗೊಂಡಿಲ್ಲ ಎಂದರು. ಇದಕ್ಕೆ ಬಿಸಿ ಪಾಟೀಲ್ ತಿರುಗೇಟು ಕೊಟ್ಟರು. 

   ಏತನ್ಮಧ್ಯೆ, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಲಾರಿ ಮಾಲೀಕರು ನಡೆಸುತ್ತಿರುವ ಅನಿರ್ಧಿಷ್ಠಾವಧಿ ಲಾರಿ ಮುಷ್ಕರ ಮೂರನೇ ದಿನವೂ ಮುಂದುವರಿದಿದೆ. ಮಧ್ಯಾಹ್ನ 3 ಗಂಟೆಗೆ ಲಾರಿ ಮಾಲೀಕರು ಮಹತ್ವದ ಸಭೆ ಕರೆದಿದ್ದು, ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಈಗಾಗಲೇ ಬೆಂಗಳೂರಿನ ಎಲ್ಲಾ ಮಾರ್ಕೆಟ್‌ಗಳಿಗೂ ಲಾರಿ ಸಂಚಾರ ಬಂದ್ ಆಗಿದ್ದು, ಅಕ್ಕಿ, ಬೇಳೆ ಸೇರಿ ಆಹಾರ ಧಾನ್ಯ ಸರಕು ಸಾಗಾಣೆ ಬಂದ್ ಆಗಿದೆ. ಕೆಲವು ಲಾರಿಗಳಷ್ಟೇ ಸರಕು ಸಾಗಾಟ ನಡೆಸುತ್ತಿದ್ದು, ಶೇಕಡಾ 80ರಷ್ಟು ಲಾರಿಗಳ ಸಂಚಾರ ಬಂದ್ ಆಗಿದೆ.