ಮೈಸೂರು:
ಬಹುಕೋಟಿ ಹಗರಣದ ವಿರುದ್ಧ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಮುಡಾ) ಮುತ್ತಿಗೆ ಹಾಕಲು ನಿರ್ಧರಿಸಿರುವ ಬಿಜೆಪಿಗೆ ತಿರುಗೇಟು ನೀಡಲು ಕಾಂಗ್ರೆಸ್ ಮುಂದಾಗಿದೆ.ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಮುಡಾ) ಮುತ್ತಿಗೆ ಹಾಕಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕರೆ ನೀಡಿದ ಬೆನ್ನಲ್ಲೇ ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಕೂಡ ಪ್ರತಿತಂತ್ರ ರೂಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರು, ಬಿಜೆಪಿ ಮುಖಂಡರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮುತ್ತಿಗೆ ಹಾಕಲು ಮುಂದಾದರೆ ನಾವು ಅವರಿಗೆ ಪ್ರತಿ ಮುತ್ತಿಗೆ ಹಾಕುತ್ತೇವೆಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕರ ತೇಜೋವಧೆ ಮಾಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಜುಲೈ 12ರಂದು ಬೆಳಿಗ್ಗೆ 10ಕ್ಕೆ ಮುಡಾ ಮುತ್ತಿಗೆ ಹಾಕುವುದಾಗಿ ಹೇಳಿದೆ. ಸಾವಿರಾರು ಜನರನ್ನು ಸೇರಿಸಿದರೆ ಅಷ್ಟೇ ಸಂಖ್ಯೆಯಲ್ಲಿಯೇ ಪಕ್ಷದ ಕಾರ್ಯಕರ್ತರು, ನಾಗರಿಕರು ಬಿಜೆಪಿಗರನ್ನು ಸುತ್ತುವರಿಯಲಿದ್ದಾರೆಂದು ತಿಳಿಸಿದರು. 20 ದಿನಗಳಿಂದ ಮೊಸರಲ್ಲಿ ಕಲ್ಲು ಹುಡುಕುವ ಕೆಲಸವನ್ನು ಬಿಜೆಪಿಗರು ಮಾಡುತ್ತಿದ್ದಾರೆ. ಅವರನ್ನು ವಿಧಾನಸಭಾ ಚುನಾವಣೆಯಲ್ಲಿ ಜನರು ತಿರಸ್ಕರಿಸಿದ್ದರು. ಕಾಂಗ್ರೆಸ್ ಟೀಕಿಸಲು ಯಾವುದೇ ಅಸ್ತ್ರ ಇರಲಿಲ್ಲ. ಹೀಗಾಗಿಯೇ, ವಿಚಾರವೇ ಇಲ್ಲದ ಮುಡಾ ವಿಷಯವನ್ನು ಮುನ್ನೆಲೆಗೆ ತಂದಿದ್ದಾರೆ ಎಂದು ಹರಿಹಾಯ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ತೇಜೋವಧೆಯನ್ನು ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಲೋಪ ಆಗಿರುವುದು ಕಂಡುಬಂದರೆ, ಅಧಿಕಾರ ದುರುಪಯೋಗ ಮಾಡಿಕೊಂಡಿದ್ದರೆ, ಪ್ರಭಾವ ಬಳಸಿದ್ದರೆ ಸೂಕ್ತ ದಾಖಲೆ ಬಿಡುಗಡೆ ಮಾಡಲಿ ಉತ್ತರ ಕೊಡುತ್ತೇವೆ ಎಂದು ಸವಾಲು ಹಾಕಿದರು.
‘ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಸಿ.ಟಿ.ರವಿ, ಆರ್.ಅಶೋಕ, ಸಿ.ಎನ್. ಅಶ್ವತ್ಥನಾರಾಯಣ ಅವರೊಂದಿಗೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಕರೆತರಲಿ, ‘ವಿಜಯೇಂದ್ರ ಪರ್ಯಾಯ ಸರ್ಕಾರ ನಡೆಸುತ್ತಿದ್ದರೆಂದು, ರೂ.50 ಸಾವಿರ ಕೋಟಿ ಲೂಟಿ ಮಾಡಿದ್ದಾರೆಂದು ಬಿಜೆಪಿ ನಾಯಕರೇ ಹೈಕಮಾಂಡ್‌ಗೆ 2019ರಲ್ಲಿ ಪತ್ರ ಬರೆದಿದ್ದರು. ಆ ಬಗ್ಗೆಯೂ ತನಿಖೆ ನಡೆಯಲಿ. ದೇಶದ ಸ್ವಚ್ಛ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿಗಳಲ್ಲಿ ಸಿದ್ದರಾಮಯ್ಯ ಅವರಿಗೆ ನಂಬರ್ 1 ಸ್ಥಾನವಿದೆ. ಅವರನ್ನು ತೇಜೋವಧೆ ಮಾಡಲು ಬಿಜೆಪಿ ನಾಯಕರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.